ಉತ್ತರಾಖಂಡದಲ್ಲಿ ಭಾರೀ ಮಳೆ; 16 ಮಂದಿ ಮೃತ್ಯು
ಡೆಹ್ರಾಡೂನ್: ದೇಶದ ವಿವಿಧೆಡೆಗಳಿಂದ ಮಳೆ ಹಾನಿ ಬಗ್ಗೆ ವರದಿಯಾಗುತ್ತಿರುವ ನಡುವೆಯೇ ಉತ್ತರಾಖಂಡದಲ್ಲಿ ಕೂಡಾ ಭಾರೀ ಮಳೆ, ದಿಢೀರ್ ಪ್ರವಾಹ ಮತ್ತು ಭೂಕುಸಿತದಿಂದ 16 ಮಂದಿ ಮೃತಪಟ್ಟಿದ್ದಾರೆ. ಬುಧವಾರ ರಾತ್ರಿ ಮತ್ತು ಗುರುವಾರ ಉತ್ತರಾಖಂಡದ ಹಲವು ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗಿದೆ.
ಚಾರಣ ಮಾರ್ಗದ ಭೀಮ್ ಬಲಿ ಎಂಬಲ್ಲಿ ಸಂಭವಿಸಿದ ಭೂಕುಸಿತದಿಂದಾಗಿ ಕೇದಾರನಾಥ ಕಣಿವೆ ಸಂಪರ್ಕ ಕಡಿದುಕೊಂಡಿದೆ. ಇದರಿಂದಾಗಿ 450 ಮಂದಿ ಸಿಕ್ಕಿಹಾಕಿಕೊಂಡಿದ್ದಾರೆ. ಈ ಮಧ್ಯೆ ಸೋನ್ ಪ್ರಯಾಗ್ ಮತ್ತು ಗೌರಿಕುಂಡದ ನಡುವೆ ಕೇದಾರನಾಥ ಹೆದ್ದಾರಿ ಕೊಚ್ಚಿಕೊಂಡು ಹೋಗಿದೆ. ಈ ಕಾರಣದಿಂದ ಚಾರ್ ಧಾಮ ಯಾತ್ರೆಯನ್ನು ರದ್ದುಪಡಿಸಲಾಗಿದೆ.
"ಕೇದಾರನಾಥ ಚಾರಣಾ ಮಾರ್ಗದ ಹಲವು ಕಡೆಗಳಲ್ಲಿ ಭೂಕುಸಿತ ಸಂಭವಿಸಿರುವುದರಿಂದ ಭಕ್ತರ ಸುರಕ್ಷತೆಯ ದೃಷ್ಟಿಯಿಂದ ಯಾತ್ರೆಯನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ" ಎಂದು ಮುಖ್ಯಮಂತ್ರಿ ಕಚೇರಿ ಹೇಳಿಕೆ ನೀಡಿದೆ. ಕೇದಾರನಾಥದಲ್ಲಿ ಶುಕ್ರವಾರ ಪರಿಹಾರ ಆರಂಭವಾಗಲಿರುವ ಕಾರ್ಯಾಚರಣೆಯಲ್ಲಿ ಭಾರತೀಯ ವಾಯುಪಡೆ ಸಹಕರಿಸಲಿದೆ ಎಂದು ಮೂಲಗಳು ಹೇಳಿವೆ.
"ಕೇದಾರನಾಥ ಯಾತ್ರೆ ಮಾರ್ಗದಲ್ಲಿ ಭೀಮ್ ಬಲಿ, ರಾಮ್ ಬಾರಾ, ಲಿಂಚೋಲಿ ಮತ್ತಿತರ ಕಡೆಗಳಲ್ಲಿ ಸಿಕ್ಕಿಹಾಕಿಕೊಂಡಿದ್ದ ಸುಮಾರು 425 ಮಂದಿಯನ್ನು ವಿಮಾನದ ಮೂಲಕ ರಕ್ಷಿಸಲಾಗಿದೆ. ಸೋನ್ಪ್ರಯಾಗ್ ಮತ್ತು ಭೀಮ್ ಬಲಿ ನಡುವೆ ಸಿಕ್ಕಿಹಾಕಿಕೊಂಡಿರುವ 1100 ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಪರ್ಯಾಯ ಮಾರ್ಗಗಳ ಮೂಲಕ ಕರೆದೊಯ್ಯಲಾಗಿದೆ" ಎಂದು ಎಸ್ ಡಿಆರ್ ಎಫ್ ಕಮಾಂಡೆಂಟ್ ಮಣಿಕಾಂತ್ ಮಿಶ್ರಾ ಹೇಳಿದ್ದಾರೆ.