ಕೇರಳದಲ್ಲಿ ಇತ್ತೀಚಿನ ನಿಫಾ ಪಿಡುಗನ್ನು ವೈದ್ಯರ ತಂಡವು ಪತ್ತೆ ಹಚ್ಚಿದ್ದು ಹೇಗೆ ?
ಕೊಯಿಕ್ಕೋಡ್: 2018ರಲ್ಲಿ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದ ರೋಗಿಗಳ ಪೈಕಿ ಓರ್ವರಲ್ಲಿ ವಿಚಿತ್ರ ಲಕ್ಷಣಗಳನ್ನು ಕ್ರಿಟಿಕಲ್ ಕೇರ್ ಸ್ಪೆಷಲಿಸ್ಟ್ ಡಾ. ಅನೂಪಕುಮಾರ ಎ.ಎಸ್ ಅವರು ಗಮನಿಸಿದ್ದರು ಮತ್ತು ಇದು ಕೇರಳದಲ್ಲಿ ನಿಪಾ ವೈರಸ್‌ನ ಮೊದಲ ದಾಂಗುಡಿಯನ್ನು ಗುರುತಿಸಲು ಕಾರಣವಾಗಿತ್ತು. ಇಂದು ಮತ್ತೆ ಕೇರಳದಲ್ಲಿ ಭುಗಿಲೆದ್ದಿರುವ ನಿಫಾ ಹಾವಳಿಯನ್ನು ಪತ್ತೆ ಹಚ್ಚುವಲ್ಲಿ ಅನೂಪಕುಮಾರ ನೇತೃತ್ವದ ವೈದ್ಯರ ತಂಡವು ಮತ್ತೆ ಪ್ರಮುಖ ಪಾತ್ರವನ್ನು ವಹಿಸಿದೆ.
2023, ಸೆ.10ರಂದು ಕೊಯಿಕ್ಕೋಡ್‌ನ ಆ್ಯಸ್ಟರ್ ಮಿಮ್ಸ್ ಆಸ್ಪತ್ರೆಗೆ 4 ಮತ್ತು 9 ವರ್ಷ ವಯಸ್ಸಿನ ಇಬ್ಬರು ಸೋದರರು, ಒಂಭತ್ತು ತಿಂಗಳು ಪ್ರಾಯದ ಅವರ ಸೋದರ ಸಂಬಂಧಿ ಮಗು ಸೇರಿದಂತೆ ಒಂದೇ ಕುಟುಂಬದ ನಾಲ್ವರು ರೋಗಿಗಳು ದಾಖಲಾಗಿದ್ದರು. ಈ ಎಲ್ಲರೂ ಜ್ವರದಿಂದ ಬಳಲುತ್ತಿದ್ದರು. ಅಪ್ರಾಪ್ತ ವಯಸ್ಕರನ್ನು ಮಕ್ಕಳ ವಿಭಾಗಕ್ಕೆ ದಾಖಲಿಸಲಾಗಿದ್ದರೆ, ಉಸಿರಾಟದ ತೊಂದರೆ ಅನುಭವಿಸುತ್ತಿದ್ದ ಈ ಮಕ್ಕಳ 22ರ ಹರೆಯದ ಚಿಕ್ಕಪ್ಪನನ್ನು ಶ್ವಾಸಕೋಶ ವಿಭಾಗದಲ್ಲಿ ದಾಖಲಿಸಲಾಗಿತ್ತು.
ಡಾ.ಅನೂಪಕುಮಾರ ನೇತೃತ್ವದ ನಾಲ್ವರು ವೈದ್ಯರ ತಂಡವು ಇನ್‌ಫ್ಲುಯೆಂಝಾ, ಕೊರೋನವೈರಸ್ ಅಥವಾ ಇತರ ಉಸಿರಾಟದ ಕಾಯಿಲೆಗಳ ಸೋಂಕಿಗೊಳಗಾಗಿದ್ದಾರೆಯೇ ಎನ್ನುವುದನ್ನು ತಿಳಿದುಕೊಳ್ಳಲು ಈ ರೋಗಿಗಳನ್ನು ತಪಾಸಣೆಗೊಳಪಡಿಸಿತ್ತು. ಈ ವೇಳೆ ಎರಡು ಅಪಾಯಕಾರಿ ಸಂಕೇತಗಳು ಕಂಡು ಬಂದಿದ್ದು ರಾಜ್ಯದಲ್ಲಿ ಇತ್ತೀಚಿನ ನಿಫಾ ಹಾವಳಿಯನ್ನು ಪತ್ತೆಹಚ್ಚಲು ಕಾರಣವಾಗಿತ್ತು ಎಂದು ಡಾ.ಅನೂಪಕುಮಾರ ಹೇಳಿದರು.
ಇಬ್ಬರು ಸೋದರರ ತಂದೆ ಮುಹಮ್ಮದ್ ಅಲಿ(49) ಅವರು ಆ.30ರಂದು ಮೃತಪಟ್ಟಿದ್ದರು ಎನ್ನುವುದು ಗೊತ್ತಾದಾಗ ಆ್ಯಸ್ಟರ್‌ನ ವೈದ್ಯರ ತಂಡವು ತಕ್ಷಣ ಅಲಿ ದಾಖಲಾಗಿದ್ದ ಖಾಸಗಿ ಆಸ್ಪತ್ರೆಯನ್ನು ಸಂಪರ್ಕಿಸಿತ್ತು. ಈ ವೇಳೆಗೆ ಆ್ಯಸ್ಟರ್‌ನಲ್ಲಿದ್ದ ನಾಲ್ವರು ರೋಗಿಗಳ ತಪಾಸಣಾ ವರದಿಗಳು ವೈದ್ಯರ ಕೈಸೇರಿದ್ದು, ಯಾವುದೇ ಸಾಮಾನ್ಯ ವೈರಸ್‌ಗೆ ನೆಗೆಟಿವ್ ಆಗಿದ್ದರು.
‘ಮಕ್ಕಳ ತಂದೆ ನಿಧನರಾಗಿದ್ದಾರೆ ಮತ್ತು ಅವರು ಬ್ರಾಂಕೋನ್ಯುಮೋನಿಯಾದಿಂದ ಬಳಲುತ್ತಿದ್ದರು ಎನ್ನುವುದನ್ನು ನಾವು ಕಂಡುಕೊಂಡಿದ್ದೆವು,ಅವರು ಬಹುಅಂಗಾಂಗಗಳ ವೈಫಲ್ಯದಿಂದ ಮೃತಪಟ್ಟಿದ್ದರೂ ಮಾತನಾಡುವಾಗ ತೊದಲುತ್ತಿದ್ದರು ಮತ್ತು ಡಿಪ್ಲೋಪಿಯಾ (ದ್ವಂದ್ವ ದೃಷ್ಟಿ)ವನ್ನು ಹೊಂದಿದ್ದರು ಎಂದು ಡಾ.ಅನೂಪಕುಮಾರ ಹೇಳಿದರು. ಈ ನಡುವೆ ಅಲಿಯವರ ಹಿರಿಯ ಪುತ್ರನಲ್ಲಿ ತೀವ್ರ ಉಸಿರಾಟದ ತೊಂದರೆ ಕಂಡುಬಂದಿತ್ತು ಮತ್ತು ಅಪಸ್ಮಾರಕ್ಕೆ ಗುರಿಯಾಗುತ್ತಿದ್ದ, ಹೀಗಾಗಿ ಆತನನ್ನು ಐಸಿಯುಗೆ ಸ್ಥಳಾಂತರಿಸಲಾಗಿತ್ತು.
ಇದು ಅಲಿಯವರ ಕುಟುಂಬವು ನಿಫಾ ವೈರಸ್ ಸೋಂಕಿಗೆ ತುತ್ತಾಗಿರಬಹುದು ಎಂಬ ತಕ್ಷಣದ ಅನುಮಾನವನ್ನು ಸೃಷ್ಟಿಸಿತ್ತು. ನಿಫಾ ಝೂನೊಟಿಕ್ ವೈರಸ್ ಆಗಿದ್ದು ಸೋಂಕಿತ ಹಂದಿ ಅಥವಾ ಬಾವಲಿಗಳಂತಹ ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ. ಬಾವಲಿಗಳು ಅರ್ಧ ತಿಂದು ಬಿಟ್ಟಿರುವ ಹಣ್ಣುಗಳು ಮತ್ತು ರೋಗಪೀಡಿತ ವ್ಯಕ್ತಿಗಳ ನೇರ ಸಂಪರ್ಕದ ಮೂಲಕವೂ ನಿಫಾ ವೈರಸ್ ಹರಡುತ್ತದೆ.
ಜ್ವರ, ತಲೆನೋವು, ಮೂರ್ಛೆ ಹೋಗುವುದು ಮತ್ತು ವಾಕರಿಕೆ ಇವು ಸೋಂಕಿನ ಲಕ್ಷಣಗಳಲ್ಲಿ ಸೇರಿವೆ. ಕೆಲವರು ಉಸಿರುಗಟ್ಟುವಿಕೆ, ಹೊಟ್ಟೆನೋವು, ವಾಂತಿ, ಬಳಲಿಕೆ ಮತ್ತು ಮಂದ ದೃಷ್ಟಿಯನ್ನು ಅನುಭವಿಸಬಹುದು.ರೋಗಲಕ್ಷಣಗಳು ಆರಂಭಗೊಂಡ ಕೇವಲ ಎರಡು ದಿನಗಳ ಬಳಿಕ ರೋಗಿಯು ಕೋಮಾಕ್ಕೆ ಜಾರುವ ಸಾಧ್ಯತೆಯಿದೆ.
ಎನ್ಸಿಫಾಲಿಟಿಸ್ ಅಥವಾ ಮಿದುಳಿನ ಉರಿಯೂತಕ್ಕೆ ತುತ್ತಾಗುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ.
ಅಲಿ ಕುಟುಂಬವು ವಾಸವಿರುವ ಕೊಯಿಕ್ಕೋಡ್‌ನ ಮರುತೊಂಕರ ಗ್ರಾಮ ಪಂಚಾಯತ್ ವ್ಯಾಪ್ತಿಯು ಎರಡನೇ ಅಪಾಯದ ಸಂಕೇತವಾಗಿತ್ತು. ಇದು 2018ರಲ್ಲಿ ನಿಪಾ ವೈರಸ್ ಹಾವಳಿಯ ಕೇಂದ್ರಬಿಂದುವಿಗೆ ಸಮೀಪದಲ್ಲಿದೆ. ಆಗ ನಡೆಸಿದ್ದ ಸಮೀಕ್ಷೆಯಲ್ಲಿ ಸಮೀಪದ ಅರಣ್ಯ ಪ್ರದೇಶದಲ್ಲಿಯ ಹಣ್ಣುಗಳನ್ನು ತಿನ್ನುವ ಬಾವಲಿಗಳಲ್ಲಿ ನಿಪಾ ವೈರಸ್ ಪತ್ತೆಯಾಗಿತ್ತು ಎಂದು ಹೇಳಿದ ಅನೂಪಕುಮಾರ, ನಿಫಾ ಪೀಡಿತ ಓರ್ವ ರೋಗಿಯಿದ್ದರು (ಇಂಡೆಕ್ಸ್ ಪೇಶಂಟ್) ಮತ್ತು ಅವರಿಂದ ಇತರರಿಗೆ ಸೋಂಕು ಹರಡಿತ್ತು ಎನ್ನುವುದು ಸ್ಪಷ್ಟವಾಗಿತ್ತು ಎಂದರು.
ಅನೂಪಕುಮಾರ ನೇರವಾಗಿ ರಾಜ್ಯದ ಆರೋಗ್ಯ ಸಚಿವೆ ವೀಣಾ ಜಾರ್ಜ್‌ರನ್ನು ಸಂಪರ್ಕಿಸಿ ನಿಫಾ ವೈರಸ್ ಹರಡುವ ಸಾಧ್ಯತೆಯ ಕುರಿತು ಎಚ್ಚರಿಕೆ ನೀಡಿದ್ದರು. ಪುಣೆಯಲ್ಲಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಲು ಆಸ್ಪತ್ರೆಯು ರಕ್ತದ ಸ್ಯಾಂಪಲ್‌ಗಳನ್ನು ಸಂಗ್ರಹಿಸುತ್ತಿದ್ದಾಗ ಸೆ.11ರಂದು ಸಂಜೆ ಆ್ಯಸ್ಟರ್‌ಗೆ ಇನ್ನೋರ್ವ ರೋಗಿಯನ್ನು ಕರೆತರಲಾಗಿತ್ತು. ಕೊಯಿಕ್ಕೋಡ್‌ನ ವಡಕ್ಕರ್ ತಾಲೂಕಿನ ಆಯಿಂಚೇರಿ ನಿವಾಸಿಯಾದ ಈ ವ್ಯಕ್ತಿ ಮೊದಲು ನ್ಯುಮೋನಿಯಾದ ಲಕ್ಷಣಗಳೊಂದಿಗೆ ವಡಕ್ಕರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆ್ಯಸ್ಟರ್ ಮಿಮ್ಸ್‌ನ ಎಮರ್ಜರ್ನ್ಸಿ ವಾರ್ಡ್‌ಗೆ ದಾಖಲಾದ ಕೆಲವೇ ನಿಮಿಷಗಳಲ್ಲಿ ಹೃದಯ ಸ್ತಂಭನದಿಂದ ಮೃತಪಟ್ಟಿದ್ದರು. ಅವರ ಸಾವಿಗೆ ನಿಪಾ ಕಾರಣವಿರಬಹುದು ಎಂದು ವೈದ್ಯರು ತಕ್ಷಣ ಅನುಮಾನಿಸಿದ್ದರೂ,ಈ ವ್ಯಕ್ತಿ ಮತ್ತು ಇಂಡೆಕ್ಸ್ ಪೇಶಂಟ್ ಅಲಿ ನಡುವೆ ಯಾವುದೇ ಸಂಬಂಧವಿಲ್ಲ ಎನ್ನುವುದು ಆರಂಭಿಕ ವಿಚಾರಣೆಗಳು ತೋರಿಸಿದ್ದವು. ಈ ವ್ಯಕ್ತಿಯ ಊರು ಆಯಂಚೇರಿ ಅಲಿಯವರ ಮರುತೊಂಕಾರದಿಂದ 20 ಕಿ.ಮೀ.ದೂರದಲ್ಲಿತ್ತು.
ಮರುತೊಂಕಾರ ಮತ್ತು ಆಯಿಂಚೇರಿ ಸೇರಿದಂತೆ ಕೊಯಿಕ್ಕೋಡ್‌ನ ಎಂಟು ಪಂಚಾಯತ್‌ಗಳನ್ನು ಕಂಟೈನ್ಮೆಂಟ್ ವಲಯಗಳೆಂದು ಜಿಲ್ಲಾಡಳಿತವು ಘೋಷಿಸಿದೆ.
ಇದು ಗಾಬರಿಗೊಳ್ಳುವ ಸಮಯವಲ್ಲ ಎಂದು ಹೇಳಿದ ಡಾ.ಅನೂಪಕುಮಾರ, ‘ಇಂತಹ ದಿಢೀರ್ ಪಿಡುಗುಗಳನ್ನು ನಾವು ನಿಭಾಯಿಸಿದ್ದೇವೆ ಮತ್ತು ಇನ್ನೊಮ್ಮೆ ಅದನ್ನು ಮಾಡಬಲ್ಲೆವು. ನಿಫಾ ಕೇಂದ್ರಬಿಂದುವಿಗೆ ಸಮೀಪದ ನಿವಾಸಿಗಳು ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ. ಜ್ವರದ ಲಕ್ಷಣಗಳನ್ನು ಹೊಂದಿರುವವರು ಪ್ರತ್ಯೇಕವಾಗಿರಬೇಕು ಮತ್ತು ಆರೋಗ್ಯಾಧಿಕಾರಿಗಳನ್ನು ಸಂಪರ್ಕಿಸಬೇಕು’ ಎಂದರು.
ಕೃಪೆ: thenewsminute.com