“4 ದಿಲ್ಲಿ ಪೊಲೀಸ್ ಅಧಿಕಾರಿಗಳ ವಿರುದ್ಧ ದಿಗ್ಬಂಧನೆ ವಿಧಿಸಿ”
ಹೊಸದಿಲ್ಲಿ: ಸುದ್ದಿ ವೆಬ್‌ಸೈಟ್ ‘ನ್ಯೂಸ್‌ಕ್ಲಿಕ್’ನ ಪತ್ರಕರ್ತರ ವಿರುದ್ಧ ‘‘ಅತಿರೇಕದ ವರ್ತನೆ’’ಗಳನ್ನು ತೋರುತ್ತಿರುವ ದಿಲ್ಲಿ ಪೊಲೀಸ್ ನ ನಾಲ್ವರು ಉನ್ನತ ದರ್ಜೆಯ ಅಧಿಕಾರಿಗಳ ವಿರುದ್ಧ ದಿಗ್ಬಂಧನ ವಿಧಿಸುವಂತೆ ಪರೋಪಕಾರಿ ಸಂಘಟನೆಗಳಾದ ‘ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್’ ಮತ್ತು ‘ಗೆರ್ನಿಕಾ 37 ಚೇಂಬರ್ಸ್’ ಬುಧವಾರ ಐರೋಪ್ಯ ಒಕ್ಕೂಟಕ್ಕೆ ಕರೆ ನೀಡಿವೆ.
‘ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್’ ಅಂತರರಾಷ್ಟ್ರೀಯ ಪರೋಪಕಾರಿ ಸಂಘಟನೆಯಾಗಿದ್ದು ಪ್ಯಾರಿಸ್ ನಲ್ಲಿ ಪ್ರಧಾನ ಕಚೇರಿ ಹೊಂದಿದೆ. ಅದು ಪತ್ರಿಕಾ ಸ್ವಾತಂತ್ರ್ಯದ ರಕ್ಷಣೆಯ ಉದ್ದೇಶವನ್ನು ಹೊಂದಿದೆ. ‘ಗೆರ್ನಿಕಾ 37 ಚೇಂಬರ್ಸ್’ ಲಂಡನ್ ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಅಂತರರಾಷ್ಟ್ರೀಯ ಕ್ರಿಮಿನಲ್ ಮತ್ತು ಮಾನವಹಕ್ಕುಗಳ ವಕೀಲರ ಪರಿಣತ ಗುಂಪಾಗಿದೆ.
ದಿಲ್ಲಿ ಪೊಲೀಸ್ ನ ಭಯೋತ್ಪಾದನೆ ನಿಗ್ರಹ ಘಟಕದ ನಾಲ್ವರು ಅಧಿಕಾರಿಗಳ ವಿರುದ್ಧ ದಿಗ್ಬಂಧನ ಹೇರುವಂತೆ ಐರೋಪ್ಯ ಒಕ್ಕೂಟದ ರಾಜತಾಂತ್ರಿಕ ಸೇವೆಯಾಗಿರುವ ಐರೋಪ್ಯ ಬಾಹ್ಯ ಕ್ರಿಯಾ ಸೇವೆಗೆ ಮನವಿ ಸಲ್ಲಿಸಿರುವುದಾಗಿ ಈ ಸಂಘಟನೆಗಳು ಹೇಳಿಕೆಯೊಂದರಲ್ಲಿ ತಿಳಿಸಿವೆ. ಈ ಪೊಲೀಸ್ ಅಧಿಕಾರಿಗಳು ‘‘ದೇಶದ ಪತ್ರಕರ್ತರ ವಿರುದ್ಧ ಹಿಂದೆಂದೂ ಕಂಡಿರದ ದಮನ ಕಾರ್ಯಾಚರಣೆ ನಡೆಸುತ್ತಿದ್ದಾರೆ’’ ಎಂದು ಅವುಗಳು ಆರೋಪಿಸಿವೆ.
ಅಕ್ಟೋಬರ್ ನಲ್ಲಿ, ‘ನ್ಯೂಸ್‌ಕ್ಲಿಕ್’ನೊಂದಿಗೆ ನಂಟು ಹೊಂದಿರುವ ದಿಲ್ಲಿ ಮತ್ತು ಸುತ್ತಮುತ್ತಲ ಪಟ್ಟಣಗಳ 46 ಪತ್ರಕರ್ತರ ಮನೆಗಳ ಮೇಲೆ ದಾಳಿ ನಡೆಸಲು ಈ ಅಧಿಕಾರಿಗಳು ಆದೇಶಿಸಿದ್ದರು ಎಂದು ಅವರ ಹೆಸರುಗಳನ್ನು ಹೇಳದೆ ಈ ಸಂಘಟನೆಗಳು ಆರೋಪಿಸಿವೆ.
ಅಕ್ಟೋಬರ್ 3ರಂದು, ದಿಲ್ಲಿ ಪೊಲೀಸರು ‘ನ್ಯೂಸ್‌ಕ್ಲಿಕ್’ನೊಂದಿಗೆ ನಂಟು ಹೊಂದಿರುವ ಹಲವಾರು ಪತ್ರಕರ್ತರ ಮನೆಗಳ ಮೇಲೆ ದಾಳಿ ನಡೆಸಿದರು ಮತ್ತು ವೆಬ್ಸೈಟ್ ನ ಸ್ಥಾಪಕ ಪ್ರಬೀರ್ ಪುರಕಾಯಸ್ಥ ಮತ್ತು ಮಾನವ ಸಂಪನ್ಮೂಲಗಳ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿಯನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ದಾಖಲಿಸಲಾದ ಮೊಕದ್ದಮೆಯಡಿಯಲ್ಲಿ ಬಂಧಿಸಿದರು.
ಚೀನಾ ಪರವಾಗಿ ಪ್ರಚಾರ ನಡೆಸಲು ಈ ವೆಬ್‌ಸೈಟ್ ಹಣ ಪಡೆದುಕೊಂಡಿದೆ ಎಂಬುದಾಗಿ ಪೊಲೀಸರು ಆರೋಪಿಸಿದ್ದಾರೆ.
‘‘ಪೊಲೀಸರ ದಾಳಿಗೆ ಒಳಗಾಗಿರುವ ಹಲವು ಪತ್ರಕರ್ತರು ಅದಾನಿ ಉದ್ಯಮ ಗುಂಪು ನಡೆಸಿದೆಯೆನ್ನಲಾದ ವಂಚನೆಗಳ ಬಗ್ಗೆ ತನಿಖೆ ನಡೆಸಿದ್ದರು. ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿ ಪ್ರಧಾನಿ ನರೇಂದ್ರ ಮೋದಿಯ ಆಪ್ತ ಬಳಗದಲ್ಲಿದ್ದಾರೆ ಎನ್ನಲಾಗಿದೆ.
2020 ಮತ್ತು 2021ರ ನಡುವಿನ ಅವಧಿಯಲ್ಲಿ ನಡೆದ ರೈತರ ಪ್ರತಿಭಟನೆಯನ್ನು ವರದಿ ಮಾಡಿರುವ ಪತ್ರಕರ್ತರಿಗೂ ಕಿರುಕುಳ ನೀಡಲಾಗಿದೆ ಎಂದು ಈ ಸಂಘಟನೆಗಳು ಆರೋಪಿಸಿವೆ.
ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಬರುವ ದಿಲ್ಲಿ ಪೊಲೀಸ್ ವಿಶೇಷ ಘಟಕವು, ‘‘ಸರಕಾರವನ್ನು ಟೀಕಿಸುವ’’ ಧ್ವನಿಗಳನ್ನು ನಿರಂತರವಾಗಿ ಬೆದರಿಸುತ್ತಿದೆ ಎಂದು ಅವುಗಳು ಹೇಳಿವೆ.
ಈ ಹಿನ್ನೆಲೆಯಲ್ಲಿ, ‘‘ತೃತೀಯ ಜಗತ್ತಿನ ದೇಶಗಳಲ್ಲಿ ನಡೆಯುತ್ತಿರುವ ಗಂಭೀರ ಮಾನವ ಹಕ್ಕು ಉಲ್ಲಂಘನೆಗಳನ್ನು ನಿಭಾಯಿಸಲು ಯುರೋಪಿಯನ್ ಮ್ಯಾಗ್ನಿಸ್ಕಿ ಕಾಯ್ದೆಯಡಿ ಈ ಪೊಲೀಸ್ ಅಧಿಕಾರಿಗಳ ವಿರುದ್ಧ ದಿಗ್ಬಂಧನೆಗಳನ್ನು ವಿಧಿಸಬೇಕು ಎಂಬುದಾಗಿ ಈ ಪರೋಪಕಾರಿ ಸಂಘಟನೆಗಳು ಐರೋಪ್ಯ ಒಕ್ಕೂಟವನ್ನು ಒತ್ತಾಯಿಸಿವೆ.