ಎಕ್ಸಿಟ್ ಪೋಲ್ ಅನಿಮೇಶನ್ ನಲ್ಲಿ ರಾಹುಲ್ ಗಾಂಧಿ, ಜೆ.ಪಿ.ನಡ್ಡಾರೊಂದಿಗೆ ಕುಸ್ತಿಯಾಡುತ್ತಿರುವಂತೆ ತೋರಿಸಿದ ಇಂಡಿಯಾ ಟುಡೆ

Update: 2024-10-06 14:38 GMT

Screengrab from the video | PC: X

ಹೊಸದಿಲ್ಲಿ: ಶನಿವಾರ ಪ್ರಸಾರವಾದ ಹರ್ಯಾಣ ಚುನಾವಣಾ ಎಕ್ಸಿಟ್ ಪೋಲ್ ನಲ್ಲಿ ಕಾಂಗ್ರೆಸ್ ಗೆ ಸ್ಪಷ್ಟ ಮುನ್ನಡೆ ವ್ಯಕ್ತವಾಗಿದ್ದು, ಇಂಡಿಯಾ ಟುಡೆ ಪ್ರಸಾರ ಮಾಡಿದ ಅನಿಮೇಟೆಡ್ ವಿಡಿಯೊದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾರೊಂದಿಗೆ ಕುಸ್ತಿಯಾಡುತ್ತಿರುವಂತೆ ತೋರಿಸಲಾಗಿದೆ.

ಈ ವಿಡಿಯೊಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅಸಂಖ್ಯಾತ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಬಿಜೆಪಿ ಚುನಾವಣೆಯಲ್ಲಿ ಪರಾಭವಗೊಳ್ಳುವಾಗ ಪ್ರಧಾನಿ ಮೋದಿಯವರ ಚಿತ್ರವನ್ನು ಪದೇ ಪದೇ ತೋರಿಸದಿರುವ ಕುರಿತು ಬೊಟ್ಟು ಮಾಡಲಾಗಿದೆ.

ಬಿಜೆಪಿಯು ಗೆಲುವು ಸಾಧಿಸುವಾಗ ಪ್ರಧಾನಿ ಮೋದಿಯ ಚಿತ್ರವನ್ನು ಪ್ರಮುಖವಾಗಿ ತೋರಿಸುವ ಮಾಧ್ಯಮಗಳು, ಬಿಜೆಪಿಗೆ ಚುನಾವಣೆ ಹಿನ್ನಡೆಯಾಗುವಾಗ ಮಾತ್ರ ಜೆ.ಪಿ.ನಡ್ಡಾ ಚಿತ್ರ ಹೇಗೆ ಮುನ್ನೆಲೆಗೆ ಬರುತ್ತದೆ ಎಂಬ ಕುರಿತು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರಶ್ನೆ ಎತ್ತಿದ್ದಾರೆ.

ನಡ್ಡಾ ಪರವಾಗಿ ಸಹಾನುಭೂತಿ ಹೊಂದಿರುವ ಪ್ರತಿಕ್ರಿಯೆಗಳೊಂದಿಗೆ ವಿಡಂಬನಾತ್ಮಕ ಪ್ರತಿಕ್ರಿಯೆಗಳವರೆಗೆ ಸಾಮಾಜಿಕ ಬಳಕೆದಾರರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.

ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ನಾಯಕ ಪವನ್ ಖೇರಾ, “ನಡ್ಡಾರ ಸ್ಥಾನವನ್ನು ನಂಬಲು ಸಾಧ್ಯವಾಗುತ್ತಿಲ್ಲ, ವಿಶೇಷವಾಗಿ ಬಿಜೆಪಿ ಚುನಾವಣೆಯಲ್ಲಿ ಪರಾಭವಗೊಳ್ಳುವಾಗ” ಎಂದು ವ್ಯಂಗ್ಯವಾಡಿದ್ದಾರೆ.

ರಾಜು ವರ್ಮ ಎಂಬ ಮತ್ತೊಬ್ಬ ಬಳಕೆದಾರರು, “ನಡ್ಡಾ ಅವರನ್ನು ಪದೇ ಪದೇ ಮುಜುಗರದ ಸ್ಥಿತಿಗೆ ದೂಡುತ್ತಿರುವುದು ಕಾಣಿಸುತ್ತಿದೆ” ಎಂದು ಬರೆದುಕೊಂಡಿದ್ದಾರೆ.

ಮಾಧ್ಯಮಗಳ ಪ್ರಸಾರ ವೈಖರಿ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಮತ್ತೊಬ್ಬ ಬಳಕೆದಾರ್ತಿ ಹರ್ಮೀತ್ ಕೌರ್, “ಎಲ್ಲ ಕಡೆಯೂ ಮೋದಿ ಇದ್ದಾರೆ. ಆದರೆ, ಸೋಲುವಾಗ ಮೋದಿಯನ್ನು ಬದಲಿಸಿ ನಡ್ಡಾ ಅವರ ಚಿತ್ರವನ್ನು ಅಂಟಿಸಲಾಗುತ್ತದೆ. ನಾವು ನಿಮ್ಮನ್ನು ಗೋದಿ ಮೀಡಿಯ ಎಂದು ಕರೆಯುವಾಗ ನೀವು ವ್ಯಗ್ರರಾಗುತ್ತೀರಿ” ಎಂದು ಚಾಟಿ ಬೀಸಿದ್ದಾರೆ.

ಮತ್ತೊಬ್ಬ ಬಳಕೆದಾರ ಡಿ (@Deb livnletliv), “ನೀವು ಬಿಜೆಪಿ ಮುಖವಾಗಿ ನಡ್ಡಾ ಮುಖವನ್ನು ನೋಡುತ್ತಿದ್ದೀರೆಂದರೆ, ವಾಸ್ತವ ಬದಲಾಗಿದೆ ಹಾಗೂ ಸೋಲು ಎಲ್ಲ ಕಡೆಯೂ ಬರೆದಿದೆ ಎಂದು ಅರ್ಥ” ಎಂದು ಛೇಡಿಸಿದ್ದಾರೆ.

ಹಲವಾರು ಜನರು ಮೀಮ್ ಗಳನ್ನೂ ಹಂಚಿಕೊಂಡಿದ್ದು, ಮೋದಿ ಚಿತ್ರದ ಗೈರಿನ ಕುರಿತು ವ್ಯಂಗ್ಯವಾಡಿದ್ದಾರೆ ಹಾಗೂ ಕಠಿಣ ಸಮಯದಲ್ಲಿ ನಡ್ಡಾ ಹೇಗೆ ಬಲಿಪಶುವಾಗುತ್ತಿದ್ದಾರೆ ಎಂಬುದರತ್ತ ಬೊಟ್ಟು ಮಾಡಿದ್ದಾರೆ.

ಬಿಜೆಪಿ ಗೆಲುವಿನ ಹಳಿಯಲ್ಲಿದ್ದಾಗ ಪ್ರಧಾನಿ ಮೋದಿಯವರ ಚಿತ್ರವನ್ನು ಪ್ರದರ್ಶಿಸುವುದು, ಬಿಜೆಪಿ ಸ್ಪಷ್ಟವಾಗಿ ಪರಾಭವಗೊಳ್ಳಲಿದೆ ಎಂದಾಗ ಜೆ.ಪಿ.ನಡ್ಡಾರಂಥವರ ಚಿತ್ರಗಳನ್ನು ಪ್ರದರ್ಶಿಸುವುದು ಬಿಜೆಪಿಯ ಚುನಾವಣಾ ತಂತ್ರ ಎಂದು ಚರ್ಚೆಗಳು ನಡೆಯುತ್ತಿವೆ.

Full View


Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News