ಮಧ್ಯಪ್ರದೇಶ: ಕಾರ್ಖಾನೆಯೊಂದರಿಂದ 1,814 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ
ಮಧ್ಯಪ್ರದೇಶ: ಭೋಪಾಲ್ ಬಳಿ ಕಾರ್ಖಾನೆಯೊಂದರಿಂದ ಅಧಿಕಾರಿಗಳು 1,814 ಕೋಟಿ ಮೌಲ್ಯದ MD ಡ್ರಗ್ಸನ್ನು ವಶಪಡಿಸಿಕೊಂಡಿದ್ದಾರೆ ಎಂದು ಗುಜರಾತ್ ಗೃಹ ಸಚಿವ ಹರ್ಷ ಸಂಘವಿ ತಿಳಿಸಿದ್ದಾರೆ.
ಗುಜರಾತ್ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್) ಮತ್ತು ದಿಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಜಂಟಿ ಕಾರ್ಯಾಚರಣೆ ನಡೆಸಿ ಭಾರೀ ಪ್ರಮಾಣದ ಡ್ರಗ್ಸ್ ಅನ್ನು ವಶಪಡಿಸಿಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ.
ಭೋಪಾಲ್ ನ ಕಾರ್ಖಾನೆಯೊಂದರ ಮೇಲೆ ದಾಳಿ ಮಾಡಿ MD ಮತ್ತು MD ಮಾದಕ ವಸ್ತುವನ್ನು ತಯಾರಿಸಲು ಬಳಸುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಂಡ ಗುಜರಾತ್ ಎಟಿಎಸ್ ಮತ್ತು ದಿಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್ಸಿಬಿ) ಅಧಿಕಾರಿಗಳಿಗೆ ಧನ್ಯವಾದಗಳು, ಇದರ ಒಟ್ಟು ಮೌಲ್ಯ ರೂ. 1,814 ಕೋಟಿ, ಡ್ರಗ್ಸ್ ವಿರುದ್ಧದ ಹೋರಾಟದಲ್ಲಿ ಇದು ಭಾರೀ ಗೆಲುವಾಗಿದೆ ಎಂದು ಗುಜರಾತ್ ಗೃಹ ಸಚಿವ ಹರ್ಷ ಸಂಘವಿ ಎಕ್ಸ್ ನಲ್ಲಿ ಮಾಡಿದ ಪೋಸ್ಟ್ ನಲ್ಲಿ ಹೇಳಿದ್ದಾರೆ.
ಭಾರೀ ಮೊತ್ತದ ಡ್ರಗ್ಸ್ ವಶಪಡಿಸಿಕೊಂಡಿರುವುದು ಮಾದಕವಸ್ತುಗಳ ಕಳ್ಳಸಾಗಣೆ ಮತ್ತು ದುರುಪಯೋಗದ ಬಗ್ಗೆ ಕಾನೂನು ಜಾರಿ ಸಂಸ್ಥೆಗಳ ದಣಿವರಿಯದ ಪ್ರಯತ್ನಗಳನ್ನು ತೋರಿಸುತ್ತದೆ. ಕಾನೂನು ಜಾರಿ ಸಂಸ್ಥೆಗಳ ಕಾರ್ಯ ನಿಜಕ್ಕೂ ಶ್ಲಾಘನೀಯ. ಭಾರತವನ್ನು ಸುರಕ್ಷಿತ ಮತ್ತು ಆರೋಗ್ಯಕರ ರಾಷ್ಟ್ರವನ್ನಾಗಿ ಮಾಡುವ ಉದ್ದೇಶದಿಂದ ಅಧಿಕಾರಿಗಳನ್ನು ಬೆಂಬಲಿಸುವುದನ್ನು ಮುಂದುವರಿಸೋಣ ಎಂದು ಅವರು ಹೇಳಿದ್ದಾರೆ.