ದಿಲ್ಲಿ ಪೋಲಿಸರು ರಾಜಸ್ಥಾನ ಉಪಮುಖ್ಯಮಂತ್ರಿಯನ್ನು ಬಂಧಿಸಿದ್ದಾರೆ ಎಂಬ ವರದಿಗಳನ್ನು ನಿರಾಕರಿಸಿದ ಬಿಜೆಪಿ

Update: 2024-10-06 10:55 GMT

 ಪ್ರೇಮ್ ಬೈರ್ವಾ | PC : NDTV 

ಜೈಪುರ: ದಿಲ್ಲಿ ಪೋಲಿಸರು ರಾಜಸ್ಥಾನದ ಉಪಮುಖ್ಯಮಂತ್ರಿ ಪ್ರೇಮ್ ಬೈರ್ವಾರನ್ನು ರಷ್ಯನ್ ಮಹಿಳೆಯೊಂದಿಗೆ ರಾಷ್ಟ್ರ ರಾಜಧಾನಿಯ ಹೋಟೆಲ್‌ವೊಂದರಿಂದ ಬಂಧಿಸಿದ್ದಾರೆ ಎಂಬ ಹೇಳಿಕೆಗಳನ್ನು ಬಿಜೆಪಿ ಶನಿವಾರ ನಿರಾಕರಿಸಿದೆ.

ಯಾವುದೇ ಬಿಜೆಪಿ ನಾಯಕರು ಇದರಲ್ಲಿ ಭಾಗಿಯಾಗಿಲ್ಲ ಅಥವಾ ಅವರಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಚಾರಿತ್ರ್ಯಹನನ ಕೀಳು ರಾಜಕೀಯವಾಗಿದೆ ಮತ್ತು ಯಾರೇ ಆದರೂ ಯಾರದೇ ವಿರುದ್ಧ ಇಷ್ಟೊಂದು ಕೆಳಮಟ್ಟಕ್ಕೆ ಇಳಿಯಬಾರದು. ರಾಜಕಾರಣಿಗಳು ಜನರ ದಾರಿ ತಪ್ಪಿಸುವುದನ್ನು,ವದಂತಿಗಳನ್ನು ಹರಡುವುದನ್ನು ಮತ್ತು ಇನ್ನೊಬ್ಬರ ವ್ಯಕ್ತಿತ್ವಕ್ಕೆ ಧಕ್ಕೆಯುಂಟು ಮಾಡುವುದನ್ನು ತಪ್ಪಿಸಬೇಕು ಎಂದು ರಾಜಸ್ಥಾನ ಬಿಜೆಪಿ ಅಧ್ಯಕ್ಷ ಮದನ ರಾಠೋಡ್ ಅವರು ಜೈಪುರದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

‘ನಾನು ಈ ಬಗ್ಗೆ ಪತ್ರಿಕೆಯಲ್ಲಿ ಓದಿದ್ದೇನೆ. ಯಾರನ್ನು ಉದ್ದೇಶಿಸಿ ಇದನ್ನು ಬರೆಯಲಾಗಿದೆ ಎನ್ನುವುದು ನನಗೆ ತಿಳಿದಿಲ್ಲ. ಆದರೆ ಯಾರದೋ ವ್ಯಕ್ತಿತ್ವವನ್ನು ಹಾಳು ಮಾಡಲು ಜನರು ಅದನ್ನು ತಿರುಚಿದ್ದಾರೆ. ಮಾಡಲು ಕೆಲಸವಿಲ್ಲದ ಜನರು ಇಂತಹ ವದಂತಿಗಳನ್ನು ಹರಡುತ್ತಾರೆ ’ ಎಂದು ಅವರು ಹೇಳಿದರು.

‘ನಿರಂತರವಾಗಿ ಜನಸೇವೆಯಲ್ಲಿ ತೊಡಗಿರುವ ಉಪಮುಖ್ಯಮಂತ್ರಿ ಪ್ರೇಮ್ ಬೈರ್ವಾರ ಕುರಿತು ಹಸಿಸುಳ್ಳುಗಳನ್ನು ಹೇಳುವ ಮೂಲಕ ವದಂತಿಗಳನ್ನು ಹರಡುತ್ತಿದ್ದಾರೆ. ಇದನ್ನು ಮಾಡುತ್ತಿರುವವರು ಸಮಾಜ ಮತ್ತು ರಾಜ್ಯ ರಾಜಕೀಯವನ್ನು ಕಲುಷಿತಗೊಳಿಸುತ್ತಿದ್ದಾರೆ. ಇಂತಹ ನೀಚ ರಾಜಕಾರಣವನ್ನು ನಾನು ಖಂಡಿಸುತ್ತೇನೆ’ ಎಂದು ಹಿರಿಯ ಸಚಿವ ಕಿರೋಡಿಲಾಲ ಮೀನಾ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಅ.3ರಂದು ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ವೇದಿಕೆಗಳ ವಿಭಾಗದ ಅಧ್ಯಕ್ಷೆ ಸುಪ್ರಿಯಾ ಶ್ರೀನೇತ್ ಅವರು ‘ಬಿಜೆಪಿ,ರಾಜಸ್ಥಾನ,ದಿಲ್ಲಿ,ಲೀ ಮೆರಿಡಿಯನ್ ಹೋಟೆಲ್,ರಷ್ಯಾ’ ಎಂಬ ನಿಗೂಢ ಸಂದೇಶವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು,ಹೆಚ್ಚಿನ ವಿವರಣೆಯನ್ನು ಅವರು ನೀಡಿರಲಿಲ್ಲ.

‘ಬಿಜೆಪಿಯ ಉಪಮುಖ್ಯಮಂತ್ರಿ ದಿಲ್ಲಿಯ ಪಂಚತಾರಾ ಹೋಟೆಲ್‌ನಲ್ಲಿ ರಷ್ಯಾದ ಮಹಿಳೆಯೊಂದಿಗೆ ಸಿಕ್ಕಿಬಿದ್ದಿದ್ದಾರೆ. ವಿಷಯವನ್ನು ಮುಚ್ಚಿ ಹಾಕುವ ಪ್ರಯತ್ನಗಳು ಮುಂದುವರಿದಿವೆ’ ಎಂದು ಆರ್‌ಜೆಡಿ ಅ.4ರಂದು ತನ್ನ ಅಧಿಕೃತ ಹ್ಯಾಂಡಲ್ ಮೂಲಕ ಎಕ್ಸ್‌ನಲ್ಲಿ ಪೋಸ್ಟ್ ಮಾಡಿತ್ತು.

‘ನಾನು ಅವರನ್ನು ಗೌರವಿಸುತ್ತೇನೆ. ಅವರು ಓರ್ವ ಮಹಿಳಾ ರಾಜಕಾರಣಿಯಾಗಿದ್ದಾರೆ, ಆದರೆ ಅವರು ಇಷ್ಟೊಂದು ಕೆಳಮಟ್ಟಕ್ಕಿಳಿಯಬಾರದು’ ಎಂದು ಶ್ರೀನೇತ್ ಅವರನ್ನು ಹೆಸರಿಸದೆ ರಾಠೋಡ್ ಹೇಳಿದರು.

ಆರೋಪಿತ ಘಟನೆಯ ಕುರಿತು ಬಿಜೆಪಿ ತನ್ನದೇ ಆದ ತನಿಖೆಯನ್ನು ನಡೆಸಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ರಾಠೋಡ್, ‘ನಮ್ಮ ನಾಯಕರಿಗೆ ಸಂಬಂಧಿಸಿದ ಎಲ್ಲ ಮಾಹಿತಿಗಳು ನನ್ನ ಬಳಿಯಿವೆ. ಏನಾದರೂ ನಡೆದಾಗ ನಾವು ಕೂಲಂಕಶ ತನಿಖೆಯನ್ನು ನಡೆಸುತ್ತೇವೆ. ಇಂತಹ ತನಿಖೆಯ ಬಳಿಕ,ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಅಧಿಕೃತವಾಗಿ ನಾನು ಹೇಳಬಲ್ಲೆ. ಇದು ಇನ್ನೊಬ್ಬರ ವ್ಯಕ್ತಿತ್ವವನ್ನು ಹಾಳುಮಾಡಲು ಕಲ್ಪಿತ ಪಿತೂರಿಯಾಗಿದೆ’ ಎಂದು ಉತ್ತರಿಸಿದರು.

ಬೈರ್ವಾ ದಲಿತರಾಗಿರುವುದರಿಂದ ಈ ವಿಷಯವು ಕಾಂಗ್ರೆಸ್ ಪಕ್ಷದ ದಲಿತ ವಿರೋಧಿ ಮನಃಸ್ಥಿತಿಯನ್ನು ಬಿಂಬಿಸುತ್ತಿದೆ ಎಂದೂ ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News