ಅಮೆರಿಕ, ಬ್ರಝಿಲ್, ದಕ್ಷಿಣ ಆಫ್ರಿಕಾಕ್ಕೆ ಹೋಲಿಸಿದರೆ ಭಾರತದ ಅಗ್ರ ಶೇ.1 ಜನಸಂಖ್ಯೆ ಬಳಿ ಆದಾಯದ ಹೆಚ್ಚಿನ ಪಾಲು : ವರದಿ

Update: 2024-03-23 09:57 GMT

ಸಾಂದರ್ಭಿಕ ಚಿತ್ರ |Photo: PTI 

ಹೊಸದಿಲ್ಲಿ : ಅಮೆರಿಕ,ಬ್ರಝಿಲ್, ದಕ್ಷಿಣ ಆಫ್ರಿಕಾಕ್ಕೆ ಹೋಲಿಸಿದರೆ ಭಾರತದ ಜನಸಂಖ್ಯೆಯ ಅಗ್ರ ಶೇ.1ರಷ್ಟು ಜನರು ದೇಶದ ಆದಾಯದ ಹೆಚ್ಚಿನ ಪಾಲು ಹೊಂದಿದ್ದಾರೆ ಎಂದು ವರ್ಲ್ಡ್ ಇನ್ಈಕ್ವಾಲಿಟಿ ಲ್ಯಾಬ್ (ಡಬ್ಲ್ಯುಐಎಲ್)ನ ಅಧ್ಯಯನ ವರದಿಯು ಹೇಳಿದೆ.

2014-15 ಮತ್ತು 2022-23ರ ನಡುವೆ ಸಂಪತ್ತಿನ ಕೇಂದ್ರೀಕರಣಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದಲ್ಲಿ ಅಸಮಾನತೆಯು ಹೆಚ್ಚಿರುವುದು ನಿರ್ದಿಷ್ಟವಾಗಿ ವ್ಯಕ್ತವಾಗಿದೆ ಎಂದು ಮಂಗಳವಾರ ಪ್ರಕಟಗೊಂಡ ‘ಇನ್ಕಮ್ ಆ್ಯಂಡ್ ವೆಲ್ತ್ ಇನ್ಈಕ್ವಾಲಿಟಿ ಇನ್ ಇಂಡಿಯಾ,1922-23‘ದಿ ರೈಸ್ ಆಫ್ ಬಿಲಿಯನೇರ್ ರಾಜ್ ’ ವರದಿಯು ತಿಳಿಸಿದೆ.

ಭಾರತದ ಅಗ್ರ ಶೇ.1ರಷ್ಟು ಜನಸಂಖ್ಯೆಯು 2022-23ರಲ್ಲಿ ದೇಶದ ಆದಾಯದ ಶೇ.22.6 ಮತ್ತು ಸಂಪತ್ತಿನ ಶೇ.40.1ರಷ್ಟನ್ನು ಹೊಂದಿತ್ತು ಎಂದು ವರದಿಯಲ್ಲಿ ಹೇಳಿರುವ ಡಬ್ಲ್ಯುಐಎಲ್,ತಾನು ದತ್ತಾಂಶಗಳ ವಿಶ್ಲೇಷಣೆಗಳನ್ನು ಆರಂಭಿಸಿದ್ದ 1961ನೇ ಸಾಲಿನ ಬಳಿಕ ಅಗ್ರ ಶೇ.1ರಷ್ಟು ಭಾರತೀಯ ಜನಸಂಖ್ಯೆಯ ಸಂಪತ್ತಿನ ಪಾಲು ಸಾರ್ವಕಾಲಿಕ ಏರಿಕೆಯನ್ನು ಕಂಡಿದೆ ಎಂದು ತಿಳಿಸಿದೆ.

ಭಾರತದ ಆಧುನಿಕ ಬೂರ್ಜ್ವಾ ನೇತೃತ್ವದ ‘ಬಿಲಿಯನೇರ್ ರಾಜ್’ ಈಗ ವಸಾಹತುಶಾಹಿ ಶಕ್ತಿಗಳ ಬ್ರಿಟಿಷ್ ರಾಜ್ಗಿಂತ ಹೆಚ್ಚು ಅಸಮಾನವಾಗಿದೆ. ಆದಾಯಗಳು ಮತ್ತು ಸಂಪತ್ತಿನ ಅತಿಯಾದ ಕೇಂದ್ರೀಕರಣವು ಸಮಾಜ ಮತ್ತು ಸರಕಾರದ ಮೇಲೆ ಅಸಮಾನ ಪ್ರಭಾವಕ್ಕೆ ಕಾರಣವಾಗಬಹುದು ಎಂದಿರುವ ವರದಿಯು,ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿಯ ವಿವಿಧ ಪ್ರಮುಖ ಸಂಸ್ಥೆಗಳ ಋಜುತ್ವವು ರಾಜಿ ಮಾಡಿಕೊಂಡಿರುವಂತೆ ಕಂಡುಬರುತ್ತಿದೆ. ಇದು ಭಾರತವು ಶ್ರೀಮಂತ ಪ್ರಭುತ್ವದತ್ತ ಜಾರುವ ಸಾಧ್ಯತೆಯನ್ನು ಇನ್ನಷ್ಟು ಸ್ಪಷ್ಟಗೊಳಿಸಿದೆ ಎಂದು ಹೇಳಿದೆ.

2014ರಲ್ಲಿ ಬಿಜೆಪಿಯು ಅಧಿಕಾರಕ್ಕೆ ಬಂದ ಬಳಿಕ ಕಳೆದೊಂದು ದಶಕದಲ್ಲಿ ಭಾರತವು ಪ್ರಮುಖ ರಾಜಕೀಯ ಮತ್ತು ಆರ್ಥಿಕ ಬೆಳವಣಿಗೆಗಳನ್ನು ಕಂಡಿದೆ ಎಂದು ಹೇಳಿರುವ ವರದಿಯು, ಅಭಿವೃದ್ಧಿ ಮತ್ತು ಆರ್ಥಿಕ ಸುಧಾರಣೆಗಳ ಭರವಸೆಗಳೊಂದಿಗೆ ಬಿಜೆಪಿ ಅಧಿಕಾರಕ್ಕೆ ಬಂದಿದ್ದರೆ ಅದು ತನ್ನ ಎರಡು ಅಧಿಕಾರಾವಧಿಗಳಲ್ಲಿ ನಿರ್ಧಾರವನ್ನು ತೆಗೆದುಕೊಳ್ಳುವ ಅಧಿಕಾರದ ಕೇಂದ್ರೀಕರಣ ಮತ್ತು ಬೃಹತ್ ಉದ್ಯಮಗಳು ಹಾಗೂ ಸರಕಾರದ ನಡುವೆ ಹೆಚ್ಚುತ್ತಿರುವ ನಂಟಿನೊಂದಿಗೆ ಸರ್ವಾಧಿಕಾರಿ ಸರಕಾರವನ್ನು ಮುನ್ನಡೆಸಿದೆ ಎಂದು ಹಲವು ವೀಕ್ಷಕರು ನಂಬಿದ್ದಾರೆ ಎಂದು ತಿಳಿಸಿದೆ.

ಫೋರ್ಬ್ಸ್ ಬಿಲಿಯನೇರ್ ಶ್ರೇಯಾಂಕಗಳ ದತ್ತಾಂಶಗಳನ್ನು ಉಲ್ಲೇಖಿಸಿರುವ ಅಧ್ಯಯನವು ಒಂದು ಶತಕೋಟಿ ಡಾಲರ್( ಸುಮಾರು 8322 ಕೋ.ರೂ.)ಗೂ ಅಧಿಕ ನಿವ್ವಳ ಸಂಪತ್ತನ್ನು ಹೊಂದಿರುವ ಭಾರತೀಯರ ಸಂಖ್ಯೆಯು 1991ರಲ್ಲಿ ಇದ್ದ ಒಂದರಿಂದ 2022ರಲ್ಲಿ 162ಕ್ಕೇರಿದೆ. ಈ ಅವಧಿಯಲ್ಲಿ ಭಾರತದ ನಿವ್ವಳ ರಾಷ್ಟ್ರೀಯ ಆದಾಯದಲ್ಲಿ ಈ ವ್ಯಕ್ತಿಗಳ ಪಾಲು 1991ರಲ್ಲಿ ಶೇ.1ರಷ್ಟಿದ್ದುದು 2022ರಲ್ಲಿ ಶೇ.25ಕ್ಕೆ ಏರಿಕೆಯಾಗಿದೆ ಎಂದು ಹೇಳಿದೆ.

ಭಾರತದಲ್ಲಿ ಆದಾಯ ಮತ್ತು ಸಂಪತ್ತನ್ನು ಲೆಕ್ಕ ಹಾಕಲು ತೆರಿಗೆ ಸಂಹಿತೆಯ ಪುನರ್ರಚನೆ ಅಗತ್ಯವಾಗಿದೆ ಎಂದೂ ವರದಿಯು ತಿಳಿಸಿದೆ

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News