ವಿಮಾನ ನಿಲ್ದಾಣದಲ್ಲಿ ದಾರಿ ತಪ್ಪಿದ ಇಂಡಿಗೋ!
ಹೊಸದಿಲ್ಲಿ : ಅಮೃತಸರದಿಂದ ದಿಲ್ಲಿಗೆ ಬಂದ ಇಂಡಿಗೋ ವಿಮಾನವು ರವಿವಾರ ಬೆಳಿಗ್ಗೆ ಇಲ್ಲಿನ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆದ ನಂತರ ಟ್ಯಾಕ್ಸಿವೇ ತಪ್ಪಿಸಿಕೊಂಡಿದ್ದು, ಸುಮಾರು 15 ನಿಮಿಷಗಳ ಕಾಲ ರನ್‌ವೇ ಒಂದನ್ನು ಬ್ಲಾಕ್ ಮಾಡಿತ್ತು ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇಂಡಿಗೋ A320 ಸಂಖ್ಯೆ 6E 2221 ವಿಮಾನವು ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (IGIA) ಗೊತ್ತುಪಡಿಸಿದ ಟ್ಯಾಕ್ಸಿ ವೇ ತಪ್ಪಿ, ರನ್ ವೇ 28/10 ರ ಅಂತ್ಯಕ್ಕೆ ಹೋಯಿತು ಎನ್ನಲಾಗಿದೆ. ಈ ಘಟನೆಯಿಂದಾಗಿ ಸುಮಾರು 15 ನಿಮಿಷಗಳ ಕಾಲ ರನ್‌ವೇಯನ್ನು ನಿರ್ಬಂಧಿಸಲಾಯಿತು. ಇದು ಕೆಲವು ವಿಮಾನ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರಿತು ಎಂದು ತಿಳಿದು ಬಂದಿದೆ.
ನಂತರ, ಇಂಡಿಗೋ ಟೋಯಿಂಗ್ ವ್ಯಾನ್ ವಿಮಾನವನ್ನು ರನ್‌ವೇಯ ಕೊನೆಯಿಂದ ಪಾರ್ಕಿಂಗ್ ಮಾಡುವ ಸ್ಥಳಕ್ಕೆ ಎಳೆದುಕೊಂಡು ಬಂದಿತು ಎಂದು ಮೂಲಗಳು ತಿಳಿಸಿವೆ. ದಿಲ್ಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣ ದೇಶದ ಅತಿದೊಡ್ಡ ವಿಮಾನ ನಿಲ್ದಾಣವಾಗಿದೆ. ನಾಲ್ಕು ರನ್ ವೇ ಇರುವ ಈ ನಿಲ್ದಾಣದಲ್ಲಿ ಪ್ರತಿದಿನ ಸುಮಾರು 1,400 ವಿಮಾನಗಳು ಹಾರಾಟ ನಿರ್ವಹಿಸುತ್ತದೆ.