ಭಾರತ್ ಜೋಡೊ ಯಾತ್ರೆ 2 ಇಲ್ವಾ ? ವಿಧಾನಸಭಾ ಚುನಾವಣಾ ಸೋಲಿನ ಬೆನ್ನಿಗೇ ಬಹು ದೊಡ್ಡ ಪ್ರಶ್ನೆ
ಗುರುವಾರ ದೆಹಲಿಯಲ್ಲಿ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಸಿಡಬ್ಲ್ಯುಸಿ ಸಭೆ ನಡೆದಿದೆ. ಮೂರ್ನಾಲ್ಕು ತಾಸು ನಡೆದ ಸಭೆಯಲ್ಲಿ ಕೇಳಿ ಬಂದ ಒಂದು ಪ್ರಮುಖ ಒತ್ತಾಯವೆಂದರೆ, ಎರಡನೇ ಹಂತದ ಭಾರತ್ ಜೋಡೋ ಯಾತ್ರೆಯನ್ನು ರಾಹುಲ್ ಗಾಂಧಿ ಅವರು ಶುರು ಮಾಡಬೇಕು ಎಂಬುದು.
ಪೂರ್ವದಿಂದ ಪಶ್ಚಿಮಕ್ಕೆ ಭಾರತ್ ಜೋಡೋ ಯಾತ್ರೆ ಆರಂಭಿಸುವಂತೆ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿಗೆ ಮನವಿ ಮಾಡಿದ್ದಾರೆ.
ಯಾತ್ರೆಯ ಬಗ್ಗೆ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಭೆಯ ಬಳಿಕ ಕಾಂಗ್ರೆಸ್ ಹೇಳಿದೆ.
ಈಗ ಇರುವ ಪ್ರಶ್ನೆಯೆಂದರೆ, ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಎರಡನೇ ಭಾಗ ಮಾಡ್ತಾರ ಇಲ್ವಾ? ಅನ್ನೋದು. ರಾಹುಲ್ ಗಾಂಧಿ ಎದುರು ಈಗ ಇರುವುದು ಬಹಳ ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಪರಿಸ್ಥಿತಿ. ರಾಹುಲ್ ಮತ್ತು ಕಾಂಗ್ರೆಸ್ ಎದುರು ಈಗಿರುವುದು ಬಹಳ ದೊಡ್ಡ ಪ್ರಶ್ನೆ.
ಮಾಡು ಇಲ್ಲವೇ ಮಡಿ ಸ್ಥಿತಿಯಲ್ಲಿ ರಾಹುಲ್ ಗಾಂಧಿ ತೆಗೆದುಕೊಳ್ಳುವ ನಿರ್ಧಾರ ಏನಿರಬಹುದು?. ಅವರ ರಾಜಕೀಯ ಜೀವನದ ಈವರೆಗಿನ ಬಹುದೊಡ್ಡ ನಿರ್ಧಾರವಾಗಲಿರುವ ಇದು ಉಂಟುಮಾಡಬಹುದಾದ ಪರಿಣಾಮಗಳೇನು?
ಸದ್ಯಕ್ಕೆ ತಿಳಿದಿರುವ ಪ್ರಕಾರ, ರಾಹುಲ್ ಗಾಂಧಿಯವರು ಎರಡನೇ ಯಾತ್ರೆ ಮಾಡಬೇಕೆಂಬುದು ದೇಶಾದ್ಯಂತ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರ ಅಭಿಪ್ರಾಯವಾಗಿದೆ. ಸಭೆಯ ಆರಂಭದಲ್ಲೇ ಈ ವಿಚಾರವನ್ನು ಖರ್ಗೆಯವರು ರಾಹುಲ್ ಗಾಂಧಿಯವರಿಗೆ ಹೇಳಿದ್ಧಾಗಿ, ಸಭೆಯ ಬಳಿಕ ಕೆಸಿ ವೇಣುಗೋಪಾಲ್ ಮಾಹಿತಿ ನೀಡಿದ್ಧಾರೆ.
ಭಾರತ್ ಜೋಡೋ ಯಾತ್ರೆಯ ಮೊದಲ ಹಂತ 2022ರ ಸೆಪ್ಟೆಂಬರ್ 7ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಶುರುವಾಗಿತ್ತು. 2023ರ ಜನವರಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಮುಕ್ತಾಯಗೊಳ್ಳುವವರೆಗೆ ಸುಮಾರು 4,080 ಕಿಲೋಮೀಟರ್ ದೂರವನ್ನು ಕ್ರಮಿಸಿತ್ತು.
126 ದಿನಗಳಲ್ಲಿ 12 ರಾಜ್ಯಗಳ 75 ಜಿಲ್ಲೆಗಳ ಮೂಲಕ ಹಾದುಹೋಗಿದ್ದ ಅದು, ಭಾರತದ ಸುದೀರ್ಘ ಪಾದಯಾತ್ರೆಯಾಗಿ ಗಮನ ಸೆಳೆದಿತ್ತು.
ರಾಹುಲ್ ಗಾಂಧಿಯವರ ಆ ಯಾತ್ರೆ, ಮುಖ್ಯವಾಗಿ, ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿಯ ವಿಭಜಕ ರಾಜಕೀಯದ ವಿರುದ್ಧ ಭಾರತವನ್ನು ಒಗ್ಗೂಡಿಸುವ ಉದ್ದೇಶ ಹೊಂದಿತ್ತು.
ಜೊತೆಗೆ, ನಿರುದ್ಯೋಗ ಮತ್ತು ಅಸಮಾನತೆಯಂತಹ ಇತರ ಸಾಮಾಜಿಕ-ಆರ್ಥಿಕ ಸಮಸ್ಯೆಗಳನ್ನು ಚರ್ಚಿಸುವ ಗುರಿಯನ್ನು ಕೂಡ ಹೊಂದಿತ್ತು.
ರಾಹುಲ್ ಗಾಂಧಿಯವರ ಪ್ರಬುದ್ಧ ಮುಖವನ್ನು ಪರಿಚಯಿಸಿದ ಯಾತ್ರೆಯಾಗಿ ಕೂಡ ಅದು ಗಮನ ಸೆಳೆದಿತ್ತು. ಹಾಗಾದರೆ ಎರಡನೇ ಯಾತ್ರೆಯ ವಿಚಾರವಾಗಿ ರಾಹುಲ್ ಏನು ನಿರ್ಣಯ ತೆಗೆದುಕೊಳ್ಳಬಹುದು?.
ಈ ಪ್ರಶ್ನೆ ಏಕೆಂದರೆ, ಕಾಂಗ್ರೆಸ್ ಸ್ಥಿತಿ ಈಗ ಅತ್ಯಂತ ಗಂಭೀರವಾಗಿದೆ. ದೇಶಾದ್ಯಂತ ಅದು ಹಿನ್ನಡೆ ಕಂಡಿದೆ. ಇರುವ ಅಧಿಕಾರವನ್ನೂ ಕಳೆದುಕೊಂಡಿರುವ ಕಾಂಗ್ರೆಸ್ ಎದುರು ಬಹಳ ದೊಡ್ಡ ಸವಾಲು ಇದೆ. ನೂರು ವರ್ಷಗಳ ಚರಿತ್ರೆಯುಳ್ಳ ದೇಶದ ಹಳೆಯ ಪಕ್ಷವೊಂದು ಇಂದು ತಲುಪಿರುವ ಸ್ಥಿತಿಯಿಂದ ಅದನ್ನು ಮೇಲೆತ್ತುವ ದಾರಿ ಯಾವುದು?.
ಗಾಂಧಿ, ನೆಹರೂ ಪರಿವಾರದ ಈಗಿನ ತಲೆಮಾರು, ಮುಖ್ಯವಾಗಿ ಈ ದೇಶದ ರಾಜಕಾರಣದಲ್ಲಿ ತನ್ನದೇ ಆದ ಧ್ವನಿಯ ಮೂಲಕ ಗಮನ ಸೆಳೆಯುತ್ತಿರುವ, ತನ್ನದೇ ಆದ ಛಾಪು ಮೂಡಿಸುತ್ತಿರುವ ರಾಹುಲ್ ಮುಂದೆ ಇರುವುದು ಸಣ್ಣ ಪ್ರಶ್ನೆಯಲ್ಲ.
ಇಲ್ಲಿ ಅವರ ರಾಜಕೀಯ ಬದುಕಿನ ಪ್ರಶ್ನೆಯೂ ಬರುತ್ತದೆ. ನೆಲ ಕಚ್ಚಿರುವ ಕಾಂಗ್ರೆಸ್ ಅನ್ನು ಮೇಲೆತ್ತುವ ಮೂಲಕವೇ, ಅದನ್ನು ಹೊಸ ಗೆಲುವಿನ ಹಾದಿಯಲ್ಲಿ ನಡೆಸುವ ಮೂಲಕವೇ ಇಂದಿನ ರಾಜಕಾರಣದಲ್ಲಿ ರಾಹುಲ್ ಕೂಡ ತಮ್ಮ ರಾಜಕೀಯ ಬದುಕನ್ನೂ ಕಂಡುಕೊಳ್ಳಬೇಕಾದ ಸ್ಥಿತಿ ಬಂದೊದಗಿದೆ.
ಇದೊಂದು ಸವಾಲಾಗಿರುವಾಗಲೇ ಒಂದು ಬಗೆಯ ಸಂಧಿಕಾಲವೂ ಹೌದು. ಈ ದಿಕ್ಕಿನಲ್ಲಿ ರಾಹುಲ್ ತೆಗೆದುಕೊಳ್ಳುವ ತೀರ್ಮಾನಗಳು ಏನಿರಬಹುದು ಎನ್ನುವುದು ಎಷ್ಟು ಮುಖ್ಯವೊ, ಆ ತೀರ್ಮಾನಗಳು ಗೆದ್ದರೆ ಆಗಬಹುದಾದ ರಾಜಕೀಯ ಸ್ಥಿತ್ಯಂತರವೂ ಅಷ್ಟೇ ಗಮನಾರ್ಹವಾಗಲಿದೆ.
ಕಾಂಗ್ರೆಸ್ ಅನ್ನು ಮೇಲೆತ್ತುವ ಸವಾಲನ್ನು ಸ್ವೀಕರಿಸಿ ರಾಹುಲ್ ಗೆಲುವಿನೆಡೆಗೆ ನಡೆದರೆ, ಅಲ್ಲಿಗೆ ಅದು ಮೋದಿ ರಾಜಕಾರಣದ ಕೊನೆಯೂ ಅಗಲಿದೆ ಎಂಬುದು ಸಣ್ಣ ವಿಚಾರವಲ್ಲ. ಆದರೆ ಇಂಥದೊಂದು ನಿರ್ಧಾರ ತೆಗೆದುಕೊಳ್ಳಬೇಕಾದ ದಿಟ್ಟತನ, ಧೈರ್ಯ ತೋರಬೇಕಿರುವುದು ರಾಹುಲ್ ಗಾಂಧಿ ಮಾತ್ರ. ಹಾಗಾಗಿ ಇದೊಂದು ನಿರ್ಣಾಯಕ ಹೆಜ್ಜೆಯೂ ಆಗಲಿದೆ.
ಅವರು ಇಂಥದೊಂದು ಹಾದಿಯಲ್ಲಿ ಹೋಗುತ್ತಾರೆಯೆ, ಇಲ್ಲವೆ ಎಂಬುದು ಈಗಿನ ಪ್ರಶ್ನೆ. ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ರೂಪಿಸಲಿರುವ ತಂತ್ರಗಳೇನು? ಈಚಿನ ವಿಧಾನಸಭೆ ಸೋಲಿನ ಹಿನ್ನೆಲೆಯಲ್ಲಿ ಅದರ ಮುಂದಿರುವ ಸವಾಲುಗಳೇನು? ಯಾವ ವಿಚಾರವನ್ನು ಮುಂದಿಟ್ಟುಕೊಂಡು ಅದು ಚುನಾವಣೆ ಎದುರಿಸಬೇಕಿದೆ?.
ವಿವಿಧ ರಾಜ್ಯಗಳಲ್ಲಿ ವಿವಿಧ ಬಗೆಯಲ್ಲಿ ಅದು ಚುನಾವಣಾ ಅಖಾಡದಲ್ಲಿ ತನ್ನ ಆಟ ರೂಪಿಸಬೇಕಿದೆ. ಇಂಥದೆಲ್ಲ ಹಲವು ಸವಾಲುಗಳನ್ನು ನಿಭಾಯಿಸಬೇಕಿರುವ ಹೆಜ್ಜೆಯಾಗಿ ಭಾರತ್ ಜೋಡೋ ಯಾತ್ರೆಗೆ ಮತ್ತೊಮ್ಮೆ ರಾಹುಲ್ ಮುಂದಾಗುತ್ತಾರೆಯೆ?. ಇಂಡಿಯಾ ಒಕ್ಕೂಟದ ಭಾಗವಾಗುವಾಗಲೂ ಕಾಂಗ್ರೆಸ್ ಕೆಲವು ರಾಜ್ಯಗಳಲ್ಲಿ ಬಿಜೆಪಿಯನ್ನು ನೇರವಾಗಿ ಎದುರಿಸಬೇಕಿದೆ. ಹೀಗಾಗಿ ಅಂಥ ರಾಜ್ಯಗಳನ್ನು ಹಾದುಹೋಗುವಂತೆ ಭಾರತ್ ಜೋಡೋ ಯಾತ್ರೆಯ ಮತ್ತೊಂದು ಹಂತಕ್ಕೆ ರಾಹುಲ್ ಮುಂದಾಗುವ ವಿಚಾರ ಈಗಾಗಲೇ ಚರ್ಚೆಯಲ್ಲಿದೆ. ಆದರೆ ಅದು ಆಗಲಿದೆಯೆ?
‘
ಎರಡನೇ ಯಾತ್ರೆ ಮಾಡಬೇಕೆ, ಬೇಡವೆ? ಇದು ಈಗ ಅವರು ತೆಗೆದುಕೊಳ್ಳಬೇಕಿರುವ ತೀರ್ಮಾನ. ಇಲ್ಲಿ ಎರಡು ಸಂದಿಗ್ಧಗಳಿವೆ. ಭಾರತ್ ಜೋಡೋ ಯಾತ್ರೆ ಲೋಕಸಭೆ ಚುನಾವಣೆಯಲ್ಲಿ ಫಲ ನೀಡಬಹುದೆ ಎಂಬುದು ಒಂದಾದರೆ, ಭಾರತ್ ಜೋಡೊ ಯಾತ್ರೆ ಬಿಟ್ಟರೆ ಆಕರ್ಷಕವಾದ ಇನ್ನಾವುದೇ ತಂತ್ರವೂ ಸದ್ಯಕ್ಕೆ ಕಾಂಗ್ರೆಸ್ ಬಳಿ ಇಲ್ಲವೆನ್ನುವುದು ಇನ್ನೊಂದು.
ಅದೇ ವೇಳೆ, ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಆಸರೆಯಂತಿರುವುದು ಈಗಿನ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರ ಚರಿಷ್ಮಾ ಮಾತ್ರ. ಹೀಗಿರುವಾಗ ರಾಹುಲ್ ಭಾರತ್ ಜೋಡೋ ಯಾತ್ರೆ ಕೈಗೊಂಡರೆ ಚುನಾವಣೆ ವೇಳೆ ಅದು ಪಕ್ಷಕ್ಕೆ ಅನುಕೂಲಕರ ವಾತಾವರಣ ನಿರ್ಮಿಸಬಲ್ಲ ಸಂಚಲನಕ್ಕೆ ಕಾರಣವಾಗಬಹುದೆ?.
ಅಥವಾ ಅದನ್ನೂ ಮೀರಿ ಬಿಜೆಪಿ ತನ್ನ ಗೆಲುವಿನ ಓಟ ಮುಂದುವರಿಸುವುದೆ?. ದಕ್ಷಿಣದ ರಾಜ್ಯಗಳಲ್ಲಿ ಬಿಜೆಪಿ ಅಷ್ಟು ದೊಡ್ಡ ಸವಾಲಾಗದೇ ಇರಬಹುದು. ಆದರೆ ಉತ್ತರದ ರಾಜ್ಯಗಳಲ್ಲಿನ ಸನ್ನಿವೇಶವನ್ನು ಕಾಂಗ್ರೆಸ್ ತನ್ನ ಪರವಾಗಿ ಬದಲಿಸಿಕೊಳ್ಳುವುದು ಹೇಗೆ?. ಮಹಾರಾಷ್ಟ್ರದಂಥ ರಾಜ್ಯದಲ್ಲಿನ ರಾಜಕಾರಣ ಯಾವ ರೀತಿಯಲ್ಲಿ ಅಂತಿಮವಾಗಿ ಚುನಾವಣೆಯಲ್ಲಿ ತಿರುವು ಪಡೆಯುತ್ತದೆ ಎಂಬುದು ಸ್ಪಷ್ಟವಿಲ್ಲ. ಹಿಂದಿ ಭಾಷಿಕ ರಾಜ್ಯಗಳಲ್ಲೂ ಸನ್ನಿವೇಶ ಹೆಚ್ಚುಕಡಿಮೆ ಹಾಗೆಯೇ ಇದೆ.
ಇಂಥ ಹೊತ್ತಲ್ಲಿ ಕಾಂಗ್ರೆಸ್ ಪಾಲಿಗೆ ಎಲ್ಲವೂ ರಾಹುಲ್ ಗಾಂಧಿಯ ಯಶಸ್ಸಿನ ಮೇಲೆಯೇ ನಿಂತಿದೆ. ಒಂದು ವೇಳೆ ರಾಹುಲ್ ವಿಫಲರಾದರೆ, ಅಲ್ಲಿಗೆ ಕಾಂಗ್ರೆಸ್ ಭವಿಷ್ಯಕ್ಕೂ ಮಂಕು ಕವಿಯುತ್ತದೆ. ಹೆಚ್ಚು ಯೋಚಿಸಲು ಸಮಯವೇ ಇಲ್ಲದಿರುವಾಗ, ಮೂರು ತಿಂಗಳ ಬಳಿಕ ಚುನಾವಣಾ ಅಖಾಡದಲ್ಲಿ ನಿಲ್ಲಬೇಕಿರುವಾಗ ಇದು ಅತ್ಯಂತ ಕಠಿಣ ಪ್ರಶ್ನೆಯಾಗಿದೆ.
ಜನರನ್ನು ತಲುಪುವುದು, ರಾಜ್ಯಗಳ ನಾಯಕರು ಮತ್ತು ಕಾರ್ಯಕರ್ತರನ್ನು ತಲುಪುವುದು, ಒಟ್ಟಾರೆ ಸನ್ನಿವೇಶವನ್ನು ಅರ್ಥ ಮಾಡಿಕೊಳ್ಳುವುದು ಈಗಿನ ಜರೂರಾಗಿದೆ. ಹಾಗಾದರೆ ರಾಹುಲ್ ತೀರ್ಮಾನ ಯಾವಾಗ? ಯಾಕೆಂದರೆ, ಹೆಚ್ಚು ತಡ ಮಾಡುವ ಸನ್ನಿವೇಶವಂತೂ ಇಲ್ಲ. ಮೇಘಾಲಯ, ಅರುಣಾಚಲ, ಮಣಿಪುರ, ನಾಗಾಲ್ಯಾಂಡ್, ಮಿಜೋರಾಂ ಇಲ್ಲೆಲ್ಲ ಸನ್ನಿವೇಶವನ್ನು ಲೋಕಸಭೆ ದೃಷ್ಟಿಯಿಂದ ಕಾಂಗ್ರೆಸ್ ಹೇಗೆ ಬದಲಿಸಿಕೊಳ್ಳಲಿದೆ ಎಂಬ ಪ್ರಶ್ನೆಯೂ ಬರುತ್ತದೆ.
ಪಶ್ಚಿಮ ಬಂಗಾಳ, ಜಾರ್ಖಂಡ್, ಒಡಿಶಾ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರಗಳಲ್ಲೆಲ್ಲ ತನ್ನ ನೆಲೆಯನ್ನು ಕಂಡುಕೊಳ್ಳಬೇಕಾದ ಸವಾಲು ಕಾಂಗ್ರೆಸ್ ಎದುರು ಇದೆ. ಹೀಗಿರುವಾಗ, ರಾಹುಲ್ ತೆಗೆದುಕೊಳ್ಳಲಿರುವ ತೀರ್ಮಾನವೇನು?. ಕಾಂಗ್ರೆಸ್ ಉದಯವಾಗುವುದೆ, ಅಂತ್ಯವಾಗುವುದೆ? ಮೋದಿ ರಾಜಕಾರಣವನ್ನು ಕೊನೆಗಾಣಿಸುವ ಹಾದಿಯಲ್ಲಿ ರಾಹುಲ್ ಗೆಲ್ಲುವರೆ? ದೇಶದ ರಾಜಕೀಯದಲ್ಲಿ ಹೊಸ ಪರ್ವ ಶುರುವಾಗುವುದೆ?