ಹಿಂದಿ ಭಾರತವನ್ನು ಒಗ್ಗೂಡಿಸುತ್ತದೆ ಎನ್ನುವುದು ಅಸಂಬದ್ಧ: ಅಮಿತ್ ಶಾ ‘ಹಿಂದಿ ದಿವಸ್’ ಭಾಷಣಕ್ಕೆ ಉದಯನಿಧಿ ಪ್ರತಿಕ್ರಿಯೆ

Update: 2023-09-14 14:42 GMT

ಚೆನ್ನೈ: ‘ಹಿಂದಿ ಹೇರಿಕೆ ’ಗಾಗಿ ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಟೀಕಿಸಿರುವ ತಮಿಳುನಾಡು ಸಚಿವ ಹಾಗೂ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರು,ಕೇವಲ 4-5 ರಾಜ್ಯಗಳಲ್ಲಿ ಮಾತನಾಡಲಾಗುತ್ತಿರುವ ಭಾಷೆಯು ದೇಶವನ್ನು ಒಗ್ಗೂಡಿಸುವುದಿಲ್ಲ, ಹಾಗೆ ಹೇಳುವುದು ಅಸಂಬದ್ಧವಾಗುತ್ತದೆ ಎಂದು ಕುಟುಕಿದ್ದಾರೆ.

ಗುರುವಾರ ‘ಹಿಂದಿ ದಿವಸ್ ’ ಸಂದರ್ಭದಲ್ಲಿ ನೀಡಿದ ಸಂದೇಶದಲ್ಲಿ ಶಾ, ಹಿಂದಿಯು ಭಾರತದಲ್ಲಿ ಭಾಷೆಗಳ ವೈವಿಧ್ಯಗಳನ್ನು ಒಗ್ಗೂಡಿಸುತ್ತದೆ ಮತ್ತು ಅದು ವಿವಿಧ ಭಾರತೀಯ ಮತ್ತು ಜಾಗತಿಕ ಹಾಗೂ ಉಪಭಾಷೆಗಳನ್ನು ಗೌರವಿಸಿದೆ ಎಂದು ಹೇಳಿದ್ದಾರೆ. ಹಿಂದಿ ಎಂದಿಗೂ ಇತರ ಯಾವುದೇ ಭಾರತೀಯ ಭಾಷೆಯೊಂದಿಗೆ ಪೈಪೋಟಿಗಿಳಿದಿಲ್ಲ,ಇಳಿಯುವುದೂ ಇಲ್ಲ ಮತ್ತು ಎಲ್ಲ ಭಾಷೆಗಳನ್ನು ಬಲಪಡಿಸುವ ಮೂಲಕ ಮಾತ್ರ ಪ್ರಬಲ ದೇಶವು ಹೊರಹೊಮ್ಮುತ್ತದೆ ಎಂದೂ ಶಾ ಹೇಳಿದ್ದಾರೆ.

Xನಲ್ಲಿಯ ತಮಿಳು ಪೋಸ್ಟ್ ನಲ್ಲಿ ಶಾ ಹೇಳಿಕೆಯನ್ನು ಟೀಕಿಸಿರುವ ಉದಯನಿಧಿ, ‘ಕೇಂದ್ರ ಸಚಿವ ಅಮಿತ್ ಶಾ ಎಂದಿನಂತೆ ಹಿಂದಿ ಭಾಷೆಗಾಗಿ ತನ್ನ ಪ್ರೀತಿಯನ್ನು ಪ್ರದರ್ಶಿಸುತ್ತ, ಹಿಂದಿ ದೇಶದ ಜನರನ್ನು ಒಗ್ಗೂಡಿಸುತ್ತದೆ ಮತ್ತು ಪ್ರಾದೇಶಿಕ ಭಾಷೆಗಳನ್ನು ಸಬಲಗೊಳಿಸುತ್ತದೆ ಎಂದು ಹೇಳಿದ್ದಾರೆ. ಈ ಪರಿಕಲ್ಪನೆಯು ನೀವು ಹಿಂದಿಯನ್ನು ಅಧ್ಯಯನ ಮಾಡಿದರೆ ನೀವು ಪ್ರಗತಿಯನ್ನು ಹೊಂದುತ್ತೀರಿ ಎಂಬ ಕೂಗಿನ ಪರ್ಯಾಯ ರೂಪವಾಗಿದೆ ’ಎಂದು ಹೇಳಿದ್ದಾರೆ.

‘ತಮಿಳುನಾಡಿನಲ್ಲಿ ತಮಿಳು-ಕೇರಳದಲ್ಲಿ ಮಲಯಾಳಂ. ಈ ಎರಡು ರಾಜ್ಯಗಳನ್ನು ಹಿಂದಿ ಎಲ್ಲಿ ಒಂದುಗೂಡಿಸುತ್ತದೆ? ಸಬಲೀಕರಣ ಎಲ್ಲಿಂದ ಬರುತ್ತದೆ?’ ಎಂದೂ ಉದಯನಿಧಿ ಪ್ರಶ್ನಿಸಿದ್ದಾರೆ.

ಕೇವಲ ನಾಲ್ಕೈದು ರಾಜ್ಯಗಳಲ್ಲಿ ಮಾತನಾಡಲಾಗುವ ಹಿಂದಿ ಇಡೀ ದೇಶವನ್ನು ಒಗ್ಗೂಡಿಸುತ್ತದೆ ಎಂದು ಹೇಳುವುದು ಅಸಂಬದ್ಧವಾಗುತ್ತದೆ. ಹಿಂದಿಯನ್ನು ಬಿಟ್ಟು ಇತರ ಭಾಷೆಗಳನ್ನು ಪ್ರಾದೇಶಿಕ ಭಾಷೆಗಳು ಎಂದು ಅವಹೇಳನ ಮಾಡುವುದನ್ನು ಅಮಿತ್ ಶಾ ನಿಲ್ಲಿಸಬೇಕು ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News