ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ದಿನಾಚರಣೆಗೆ ಸಿಎಂ ಗೈರು
ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಿದ್ದು, ಇದನ್ನು ಪ್ರತಿಯೊಬ್ಬರೂ ಒಪ್ಪಿಕೊಳ್ಳಲೇಬೇಕು ಎಂದು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹೇಳಿದ್ದಾರೆ.
ಆಡಳಿತಾರೂಢ ನ್ಯಾಷನಲ್ ಕಾನ್ಫರೆನ್ಸ್, ಕಾಂಗ್ರೆಸ್ ಹಾಗೂ ಸಿಪಿಎಂ ಪಕ್ಷಗಳ ಬಹಿಷ್ಕಾರದ ನಡುವೆ ಕೇಂದ್ರಾಡಳಿತ ಪ್ರದೇಶದ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಸಿಎಂ ಉಮರ್ ಅಬ್ದುಲ್ಲಾ, ಅವರ ಸಂಪುಟ ಸಹೋದ್ಯೋಗಿಗಳು, ಎಲ್ಲ ಪ್ರಾದೇಶಿಕ ಪಕ್ಷಗಳ ಮುಖಂಡರು ಕೂಡಾ ಸಮಾರಂಭದಿಂದ ದೂರ ಉಳಿದಿದ್ದರು.
"ಭಾರತ ಸಂವಿಧಾನದ ಅಡಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದವರು ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಸ್ಥಾನಮಾನವನ್ನು ವಿರೋಧಿಸುತ್ತಿರುವುದು ದುರದೃಷ್ಟಕರ. ಇದು ಅವರ ಇಬ್ಬಗೆ ನೀತಿಯನ್ನು ಬಿಂಬಿಸುತ್ತದೆ" ಎಂದು ಲೆಫ್ಟಿನೆಂಟ್ ಗವರ್ನರ್ ಟೀಕಾಪ್ರಹಾರ ನಡೆಸಿದರು.
"ಜಮ್ಮು ಮತ್ತು ಕಾಶ್ಮೀರ ಜನತೆಯ ಪಾಲಿಗೆ ಇದು ಕರಾಳ ದಿನ. ಇದು ಅಭಿವೃದ್ಧಿಯಲ್ಲ, ವಿಘಟನೆ" ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಹೇಳಿದ್ದಾರೆ. ಇದು ಜಮ್ಮು ಮತ್ತು ಕಾಶ್ಮೀರ ಜನತೆಗೆ ಮಾಡಿದ ಅವಮಾನ ಎಂದು ಸಿಎಂ ಉಮರ್ ಅಬ್ದುಲ್ಲಾ ಹೇಳಿದ್ದಾರೆ. "ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನಕ್ಕೆ ನಾವು ಎಂದೂ ಬದ್ಧರಾಗಿರುವುದಿಲ್ಲ. ನಮ್ಮ ಬೇಡಿಕೆ ದೃಢವಾದದ್ದು, ಅದು ಸಂಪೂರ್ಣ ರಾಜ್ಯದ ಸ್ಥಾನಮಾನ" ಎಂದು ಪಕ್ಷದ ವಕ್ತಾರರು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದಂತೆ ಮೊದಲು ಪುನರ್ವಿಂಗಡಣೆ, ಆ ಬಳಿಕ ವಿಧಾನಸಭಾ ಚುನಾವಣೆ ಮತ್ತು ಸೂಕ್ತ ಸಮಯದಲ್ಲಿ ರಾಜ್ಯದ ಸ್ಥಾನಮಾನ ಸಿಗಲಿದೆ" ಎಂದು ಎಲ್ಜಿ ಅಭಿಪ್ರಾಯಪಟ್ಟರು.
ಹಿಂದುಳಿದ ವರ್ಗಗಳ ಮೀಸಲಾತಿ ವಿಳಂಬದಿಂದಾಗಿ ಪಂಚಾಯ್ತಿ ಚುನಾವಣೆ ನಡೆಸುವುದು ಸಾಧ್ಯವಾಗಿಲ್ಲ ಮತ್ತು ಶೀಘ್ರವೇ ಚುನಾವಣೆ ನಡೆಸಲು ಆಡಳಿತ ಬದ್ಧವಾಗಿದೆ. ಜಮ್ಮು ಮತ್ತು ಕಾಶ್ಮೀರ ಒಂದು ಲಕ್ಷ ಕೋಟಿ ಹೂಡಿಕೆ ಆಕರ್ಷಿಸಲು ಸಜ್ಜಾಗಿದೆ. ಇದು 5 ಲಕ್ಷ ಉದ್ಯೋಗ ಸೃಷ್ಟಿಸುವ ನಿರೀಕ್ಷೆ ಇದೆ" ಎಂದು ಸಿನ್ಹಾ ಹೇಳಿದರು.