ಮಸೀದಿಗಳ ವಿರುದ್ಧದ ಮೊಕದ್ದಮೆಗಳನ್ನು ತಡೆಯಲು ಅಯೋಧ್ಯೆ ತೀರ್ಪನ್ನು ನ್ಯಾಯಾಲಯಗಳಲ್ಲಿ ಓದಬೇಕು: ಮಾಜಿ ನ್ಯಾಯಮೂರ್ತಿ ರೋಹಿಂಟನ್ ನಾರಿಮನ್
ಹೊಸದಿಲ್ಲಿ: 1991ರ ಆರಾಧನಾ ಸ್ಥಳಗಳ ಕಾಯ್ದೆಯನ್ನು ದೃಢೀಕರಿಸುವ ಸುಪ್ರೀಂ ಕೋರ್ಟ್ ನ ಅಯೋಧ್ಯೆ ತೀರ್ಪಿನ ಐದು ಪುಟಗಳನ್ನು ಭಾರತದ ಪ್ರತಿ ಜಿಲ್ಲಾ ನ್ಯಾಯಾಲಯ ಮತ್ತು ಹೈಕೋರ್ಟ್ ಗಳಲ್ಲಿ ಓದಬೇಕು ಎಂದು ಸುಪ್ರೀಂ ಕೋರ್ಟ್ ನ ಮಾಜಿ ನ್ಯಾಯಮೂರ್ತಿ ರೋಹಿಂಟನ್ ನಾರಿಮನ್ ಒತ್ತಾಯಿಸಿದ್ದಾರೆ.
ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಅಝೀಝ್ ಮುಶಬ್ಬರ್ ಅಹ್ಮದಿ ಅವರ ಸ್ಮರಣಾರ್ಥ ಸ್ಥಾಪಿಸಲಾದ ಅಹ್ಮದಿ ಫೌಂಡೇಶನ್ ನ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ನ್ಯಾಯಮೂರ್ತಿ ನಾರಿಮನ್, ಅಯೋಧ್ಯೆ ತೀರ್ಪನ್ನು ʼಜಾತ್ಯತೀತತೆಗೆ ನ್ಯಾಯದ ಅಪಹಾಸ್ಯʼ ಎಂದು ಬಣ್ಣಿಸಿದ್ದು, 1991ರ ಆರಾಧನಾ ಸ್ಥಳಗಳ ಕಾಯ್ದೆಯನ್ನು ಎತ್ತಿ ಹಿಡಿದ ಭಾಗವನ್ನು ಅವರು ಪ್ರಶಂಸಿಸಿದ್ದಾರೆ.
ಅಯೋಧ್ಯೆ ವಿವಾದದ ಕುರಿತು ಸಂವಿಧಾನ ಪೀಠದ ತೀರ್ಪಿನ ಐದು ಪುಟಗಳಲ್ಲಿ ಉಲ್ಲೇಖಿತ ಅಂಶಗಳು ʼಹಿಂದೆ ದೇವಾಲಯಗಳನ್ನು ಕೆಡವಿ ನಿರ್ಮಿಸಲಾಗಿದೆ ಎಂದು ಆರೋಪಿಸಿ ಮಸೀದಿಗಳ ಸಮೀಕ್ಷೆ ಕೋರಿ ದೇಶಾದ್ಯಂತ ನಡೆಯುತ್ತಿರುವ ವ್ಯಾಜ್ಯಗಳಿಗೆ ಉತ್ತರವಾಗಿದೆ. ಈ ಐದು ಪುಟಗಳು, ದೇಶಾದ್ಯಂತ ಮಸೀದಿಗಳನ್ನು ಗುರಿಯಾಗಿಸಿಕೊಂಡು ಹೆಚ್ಚುತ್ತಿರುವ ಪ್ರಕರಣಗಳನ್ನು ಪರಿಹರಿಸಲು ನಿರ್ಣಾಯಕ ಸಾಧನವಾಗಿ ಕಾರ್ಯನಿರ್ವಹಿಸಬಹುದು ಎಂದು ನ್ಯಾಯಮೂರ್ತಿ ನಾರಿಮನ್ ಹೇಳಿದ್ದಾರೆ.
2019ರಿಂದ ಹಲವಾರು ಸಿವಿಲ್ ಮೊಕದ್ದಮೆಗಳನ್ನು ಸಲ್ಲಿಸಲಾಗಿದೆ. ವಿಶೇಷವಾಗಿ ಉತ್ತರ ಭಾರತದಲ್ಲಿ ಇಂತಹ ಮೊಕದ್ದಮೆಗಳನ್ನು ಸಲ್ಲಿಸಲಾಗಿದೆ. ಮಸೀದಿಗಳನ್ನು ನಿರ್ಮಿಸಲು ಕೆಡವಲಾಗಿದೆ ಎಂದು ಹೇಳಿಕೊಂಡು ದೇವಾಲಯಗಳನ್ನು ಪುನರ್ ಸ್ಥಾಪಿಸಲು ಒತ್ತಾಯಿಸಲಾಗಿದೆ. ಇದಕ್ಕೆ ಇತ್ತೀಚಿನ ಉದಾಹರಣೆ ಸಂಭಲ್ ಜಾಮಿಯಾ ಮಸೀದಿ ಪ್ರಕರಣ, ಅಲ್ಲಿ ಸಿವಿಲ್ ನ್ಯಾಯಾಲಯ ಮಸೀದಿ ಸ್ಥಳದಲ್ಲಿ ದೇವಸ್ಥಾನವಿತ್ತು ಎಂಬ ದೂರಿನ ಮೇರೆಗೆ ಸಮೀಕ್ಷೆಗೆ ಆದೇಶಿಸಿದೆ ಎಂದು ಹೇಳಿದ್ದಾರೆ.
1991ರ ಪೂಜಾ ಸ್ಥಳಗಳ ಕಾಯ್ದೆಯು ಯಾವುದೇ ಪೂಜಾ ಸ್ಥಳದ ಪರಿವರ್ತನೆಯನ್ನು ನಿಷೇಧಿಸುತ್ತದೆ ಮತ್ತು ಆಗಸ್ಟ್ 15, 1947ರಂದು ಅಸ್ತಿತ್ವದಲ್ಲಿದ್ದ ಧಾರ್ಮಿಕ ಸ್ವರೂಪದಲ್ಲೇ ಮುಂದುವರಿಯುವಂತೆ ಹೇಳುತ್ತದೆ. ಇದು ಪ್ರಸ್ತುತ ಸುಪ್ರೀಂ ಕೋರ್ಟ್ ನಲ್ಲಿ ಸವಾಲಾಗಿದೆ. ಮಸೀದಿಗಳು ಮತ್ತು ದೇಗುಲಗಳಿಗೆ ಸಂಬಂಧಿಸಿದಂತೆ ಸೂಟ್ಗಳ ನಂತರ ದೇಶದಾದ್ಯಂತ ಹೈಡ್ರಾಮ ಕಾಣಿಸಿಕೊಳ್ಳುವುದನ್ನು ನಾವು ನೋಡುತ್ತೇವೆ. ಇದನ್ನು ತಡೆಗಟ್ಟುವ ಏಕೈಕ ಮಾರ್ಗವೆಂದರೆ ಅಯೋಧ್ಯೆಯ ತೀರ್ಪಿನ ಐದು ಪುಟಗಳನ್ನು ರಾಷ್ಟ್ರವ್ಯಾಪಿ ನ್ಯಾಯಾಲಯಗಳಲ್ಲಿ ಅನ್ವಯಿಸುವುದಾಗಿದೆ ಎಂದು ಹೇಳಿದ್ದಾರೆ.
ಬಾಬರಿ ಮಸೀದಿ ಧ್ವಂಸ ಕ್ರಿಮಿನಲ್ ಪಿತೂರಿ ಪ್ರಕರಣದ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಧೀಶರು ನಿವೃತ್ತಿಯ ನಂತರ ಉತ್ತರಪ್ರದೇಶದ ಉಪ ಲೋಕಾಯುಕ್ತರಾಗಿ ನೇಮಕಗೊಂಡರು ಎಂದು ಹೇಳಿದ ನ್ಯಾಯಮೂರ್ತಿ ರೋಹಿಂಟನ್ ನಾರಿಮನ್ ʼಕೊಡು-ಕೊಳ್ಳುವಿಕೆʼ ನೇಮಕಾತಿಗಳ ಬಗ್ಗೆ ಗಮನಸೆಳೆದಿದ್ದಾರೆ.
ಆರಾಧನಾ ಸ್ಥಳಗಳ ಕಾಯಿದೆಯ ಸರಿಯಾದ ಅನುಷ್ಠಾನವು ಅನಗತ್ಯ ವ್ಯಾಜ್ಯಗಳನ್ನು ಮೊಟಕುಗೊಳಿಸುತ್ತದೆ ಮತ್ತು ಭಾರತೀಯ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಜಾತ್ಯತೀತ ತತ್ವಗಳನ್ನು ಎತ್ತಿಹಿಡಿಯುತ್ತದೆ ಎಂದು ಮಾಜಿ ನ್ಯಾಯಮೂರ್ತಿ ನಾರಿಮನ್ ಇದೇ ವೇಳೆ ಹೇಳಿದ್ದಾರೆ.