ಕಳಮಶ್ಶೇರಿ ಸ್ಪೋಟಕ್ಕೆ ಹಮಾಸ್‌ ಅನ್ನು ದೂಷಿಸಿದ ಕೇರಳ ಬಿಜೆಪಿ ನಾಯಕ: ನೆಟ್ಟಿಗರಿಂದ ಛೀಮಾರಿ

Update: 2023-10-29 16:41 GMT

ತಿರುವನಂತಪುರಂ: ಕಳಮಶ್ಶೇರಿ ಬಾಂಬ್‌ ಸ್ಪೋಟ ಪ್ರಕರಣಕ್ಕೆ ಹಮಾಸ್‌ ಸಂಘಟನೆಯನ್ನು ಥಳುಕು ಹಾಕಿ ಫೇಸ್‌ಬುಕ್‌ ಪೋಸ್ಟ್‌ ಹಾಕಿದ್ದ ಕೇರಳ ಬಿಜೆಪಿ ರಾಜ್ಯ ಸಮಿತಿ ಸದಸ್ಯನ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ . ನೆಟ್ಟಿಗರು ಅವರ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ.

ಕಲಮಶೇರಿಯಲ್ಲಿ ನಡೆದ ಸ್ಪೋಟದ ಕುರಿತಂತೆ ಫೇಸ್‌ಬುಕ್‌ ಮೂಲಕ ಪ್ರತಿಕ್ರಿಯೆ ನೀಡಿದ್ದ ಕೇರಳ ಬಿಜೆಪಿ ರಾಜ್ಯ ಘಟಕದ ಸದಸ್ಯ ಸಂದೀಪ್‌ ಜಿ ವಾರಿಯರ್‌, “ಕಲಮಶೇರಿಯಲ್ಲಿ ದಾಳಿಗೊಳಗಾದ ʼಯೆಹೋವನ ಸಾಕ್ಷಿಗಳುʼ ಮತ್ತು ಯಹೂದಿಗಳು ಒಂದೇ ದೈವಿಕ ನಂಬಿಕೆಯನ್ನು ಅನುಸರಿಸುತ್ತಾರೆ. ಅವರು ʼತೋರಾʼದ (ಯಹೂದಿಯರ ಪವಿತ್ರ ಗ್ರಂಥ) ಅನುಯಾಯಿಗಳು.ಈ ಭಯೋತ್ಪಾದಕ ದಾಳಿಯ ಹೊಣೆಗಾರಿಕೆಯನ್ನು ಭದ್ರತೆಯಲ್ಲಿ ವಿಫಲವಾಗಿರುವ ಕೇರಳ ಸರ್ಕಾರ ಮತ್ತು ಹಮಾಸ್‌ನ ಕೃತ್ಯವನ್ನು ಸಮರ್ಥಿಸಿಕೊಂಡಿರುವ ಸಿಪಿಎಂ, ಕಾಂಗ್ರೆಸ್ ನಾಯಕರು ಹೊರಬೇಕು. ಕಲಮಶೇರಿಯಲ್ಲಿ ನಡೆದ ಉಗ್ರರ ದಾಳಿ ಅನಿರೀಕ್ಷಿತವೇನಲ್ಲ. ಧೂಪ ಖರೀದಿಸಲು ಮೊದಲೇ ಹೇಳಿದ್ದರಲ್ಲವೇ?” ಎಂದು ಬರೆದಿದ್ದರು.

ಘಟನೆ ನಡೆದು ಕೆಲವೇ ಘಂಟೆಗಳಲ್ಲಿ ಆರೋಪಿ ಡೊಮಿನಿಕ್‌ ಮಾರ್ಟಿನ್‌ ಸ್ಪೋಟದ ಹೊಣೆಯನ್ನು ಹೊತ್ತು ಪೊಲೀಸರ ಮುಂದೆ ಶರಣಾಗುತ್ತಿದ್ದಂತೆ ತಮ್ಮ ಪೋಸ್ಟ್‌ ಅನ್ನು ಅಳಿಸಿ ಹಾಕಿದ್ದಾರೆ.

ಗಾಝಾದ ಮೇಲೆ ಇಸ್ರೇಲ್‌ ನಡೆಸುತ್ತಿರುವ ದಾಳಿಯ ವಿರುದ್ಧ ಕೇರಳದಲ್ಲಿ ನಡೆದ ಪ್ರತಿಭಟನೆಯಲ್ಲಿ ಹಮಾಸ್‌ ಮುಖಂಡ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಲಪಂಥೀಯರು ಕಲಮಶೇರಿ ಸ್ಪೋಟವನ್ನು ಹಮಾಸ್‌ ಹಾಗೂ ಮುಸ್ಲಿಮರ ತಲೆಗೆ ಕಟ್ಟಲು ಯತ್ನಿಸಿದ್ದರು.

ಆದರೆ, ಯಹೋವನ ಸಾಕ್ಷಿಗಳು ರಾಷ್ಟ್ರದ್ರೋಹಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ತಾನು ಬಾಂಬ್‌ ಸ್ಪೋಟ ನಡೆಸಿದ್ದಾಗಿ ತನ್ನ ಕೃತ್ಯವನ್ನು ಸಮರ್ಥಿಸಿಕೊಂಡು ಆರೋಪಿ ಡೊಮಿನಿಕ್‌ ಮಾರ್ಟಿನ್‌ ಲೈವ್‌ ಬರುತ್ತಿದ್ದಂತೆಯೇ ಬಲಪಂಥೀಯರ ಸುಳ್ಳು ಪ್ರಚಾರಗಳಿಗೆ ತೀವ್ರ ಹಿನ್ನಡೆಯಾಗಿದೆ.

ಸಂದೀಪ್‌ ವಾರಿಯರ್‌ ವಿರುದ್ಧ ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದು, ಒಂದು ವೇಳೆ ಆರೋಪಿ ಮುಂದೆ ಬಾರದಿದ್ದರೆ, ಹಾಗೂ ಆತನನ್ನು ಪತ್ತೆ ಮಾಡಲು ತಡವಾಗುತ್ತಿದ್ದರೆ ಕೇರಳದಲ್ಲಿ ಸಂಭವಿಸಬಹುದಾಗಿದ್ದ‌ ಅನಾಹುತಗಳಿಗೆ ಯಾರು ಹೊಣೆಯಾಗುತ್ತಿದ್ದರು ಎಂದು ಪ್ರಶ್ನಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News