ಕೇರಳ: ಅನಧಿಕೃತ ವೆಬ್ಸೈಟ್ ಗೆ ಲಾಗ್ ಆಗಿರುವುದಕ್ಕೆ ಪಾವತಿ ಮಾಡಲು ಸೂಚಿಸಿ ನಕಲಿ NCRB ಸಂದೇಶ ಪಡೆದ ಬಾಲಕ ಆತ್ಮಹತ್ಯೆ

Update: 2023-09-29 17:15 GMT

ತಿರುವನಂತಪುರ: ಅನಧಿಕೃತ ಚಲನಚಿತ್ರ ವೆಬ್ಸೈಟ್ ಗೆ ಲಾಗ್ ಆಗಿರುವುದಕ್ಕೆ ಪಾವತಿ ಮಾಡುವಂತೆ ಸೂಚಿಸಿ ರಾಷ್ಟ್ರೀಯ ಅಪರಾಧ ದಾಖಲೆ ಬ್ಯುರೋ (NCRB) ಹೆಸರಿನಲ್ಲಿ ನಕಲಿ ಸಂದೇಶ ಸ್ವೀಕರಿಸಿದ ಬಳಿಕ 16 ವರ್ಷದ ಬಾಲಕನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಕೇರಳದ ಕೋಝಿಕ್ಕೋಡ್ ನಲ್ಲಿ ನಡೆದಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ನಗರದ ಶಾಲೆಯ 11ನೇ ತರಗತಿ ವಿದ್ಯಾರ್ಥಿ ಆದಿನಾಥ್ ಮೃತದೇಹ ಕೋಝಿಕ್ಕೋಡ್ನ ಚೆವಯೂರುನಲ್ಲಿರುವ ಅಪಾರ್ಟಮೆಂಟ್ ನಲ್ಲಿ ಬುಧವಾರ ಸಂಜೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆತನ ಕೊಠಡಿಯಲ್ಲಿ ಪತ್ತೆಯಾದ ಸುಸೈಡ್ ನೋಟ್ ಆನ್ಲೈನ್ ವಂಚನೆ ಆತ್ಮಹತ್ಯೆಗೆ ಕಾರಣ ಎಂಬ ಶಂಕೆಗೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಯಿಗೆ ಬರೆದೆ ಸುಸೈಡ್ ನೋಟ್ ನಲ್ಲಿ ಬಾಲಕ, ತಾನು ಯಾವುದೇ ಅನಧಿಕೃತ ವೆಬ್ಸೈಟ್ ಗೆ ಲಾಗ್ ಆಗಿಲ್ಲ. ಆದರೆ, ತನ್ನ ಲ್ಯಾಪ್ಟಾಪ್ನಲ್ಲಿ ನ್ಯಾಯಬದ್ಧ ವೆಬ್ಸೈಟ್ ನಲ್ಲಿ ಚಲನಚಿತ್ರ ವೀಕ್ಷಿಸಿದ್ದೇನೆ ಎಂದು ಹೇಳಿರುವುದಾಗಿ ಅಧಿಕಾರಿ ತಿಳಿಸಿದ್ದಾರೆ. ‘‘ನೀವು ಅನಧಿಕೃತ ವೆಬ್ಸೈಟ್ ಲಾಗ್ ಆಗಿದ್ದೀರಿ. ಆದುದರಿಂದ 30 ಸಾವಿರ ರೂ. ಪಾವತಿಸಬೇಕು.

ವಿಫಲವಾದರೆ ದೊಡ್ಡ ಮೊತ್ತ ದಂಡ ಪಾವತಿಸಬೇಕಾಗಬಹುದು ಅಥವಾ ಜೈಲು ಶಿಕ್ಷೆ ಅನುಭವಿಸಬೇಕಾಗಬಹುದು’’ ಎಂದು ಆತನ ಲ್ಯಾಪ್ಟಾಪ್ನಲ್ಲಿರುವ ಎನ್ಸಿಆರ್ಬಿ ಹೆಸರಿನಲ್ಲಿರುವ ನಕಲಿ ಸಂದೇಶದಲ್ಲಿ ಹೇಳಲಾಗಿದೆ. ಇದು ಬಾಲಕನಲ್ಲಿ ಭಯ ಹುಟ್ಟಿಸಿರುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ. ಪೊಲೀಸರು ಲ್ಯಾಪ್ಟಾಪ್ ನ ಬ್ರೌಸರ್ ಹಿಸ್ಟರಿಯನ್ನು ಪರಿಶೀಲಿಸಿದ್ದಾರೆ. ಆದರೆ, ಬಾಲಕ ಯಾವುದೇ ಅನಧಿಕೃತ ವೆಬ್ಸೈಟ್ ಗೆ ಲಾಗ್ ಆಗಿರುವ ಸೂಚನೆ ಕಂಡು ಬಂದಿಲ್ಲ ಎಂದು ಅವರು ತಿಳಿಸಿದ್ದಾರೆ.

ಆತ ಅದನ್ನು ಅಳಿಸಿದ್ದಾನೆಯೇ ಎಂಬ ಬಗ್ಗೆ ನಮಗೆ ತಿಳಿದಿಲ್ಲ. ಆದರೆ, ಸತ್ಯವನ್ನು ಹೊರತರಲು ವಿಸ್ತೃತ ವೈಜ್ಞಾನಿಕ ತನಿಖೆಯ ಅಗತ್ಯತೆ ಇದೆ. ಪೊಲೀಸರು ಈಗಾಗಲೇ ತನಿಖೆ ಆರಂಭಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News