ಕೇರಳ: ನೆಹರೂ, ಗುಜರಾತ್ ಗಲಭೆ ಸೇರಿದಂತೆ NCERT ತೆಗೆದು ಹಾಕಿರುವ ಪಠ್ಯಗಳ ಮರುಸೇರ್ಪಡೆ

Update: 2023-08-13 08:48 GMT

ಸಾಂದರ್ಭಿಕ ಚಿತ್ರ. | ನೆಹರೂ, ಗುಜರಾತ್ ಗಲಭೆ : PTI 

ತಿರುವನಂತಪುರಂ: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ(ಎನ್ಸಿಇಆರ್ಟಿ)ಯು ತೆಗೆದು ಹಾಕಿರುವ ಪಠ್ಯ ಭಾಗಗಳನ್ನು ಸೆಪ್ಟೆಂಬರ್ ನಲ್ಲಿನ ಓಣಂ ರಜಾ ಕಾಲ ಮುಕ್ತಾಯಗೊಂಡ ನಂತರ ಪರಿಷ್ಕೃತ ಶಾಲಾ ಪಠ್ಯಕ್ರಮದಲ್ಲಿ ಸೇರ್ಪಡೆ ಮಾಡಲಾಗುವುದು ಎಂದು ಶನಿವಾರ ಕೇರಳ ರಾಜ್ಯ ಸಾಮಾನ್ಯ ಶಿಕ್ಷಣ ಸಚಿವ ವಿ. ಸಿವನ್ ಕುಟ್ಟಿ ತಿಳಿಸಿದ್ದಾರೆ ಎಂದು thenewsminute.com ವರದಿ ಮಾಡಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ಸಿವನ್ ಕುಟ್ಟಿ, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ ಅರ್ಥಶಾಸ್ತ್ರ ಹಾಗೂ ವಿಜ್ಞಾನ ಪಠ್ಯಪುಸ್ತಕಗಳಿಂದ ತೆಗೆದು ಹಾಕಿರುವ ಜವಾಹರಲಾಲ್ ನೆಹರೂ ಹಾಗೂ ಮೊಘಲ್ ದೊರೆಗಳ ಕುರಿತ ಉಲ್ಲೇಖಗಳು, ಮಹಾತ್ಮ ಗಾಂಧಿ ಹತ್ಯೆ, 2002ರ ಗುಜರಾತ್ ಗಲಭೆಗಳು ಹಾಗೂ ಇತ್ಯಾದಿಗಳನ್ನು ಕೇರಳ ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯು ಮರು ಪರಿಚಯಿಸಲಿದೆ ಎಂದು ಹೇಳಿದ್ದಾರೆ.

“ಕೇರಳ ಪಠ್ಯಕ್ರಮ ಸಮಿತಿಯು ಉಪ ಸಮಿತಿಯೊಂದನ್ನು ರಚಿಸಿದ್ದು, ಅದು ಸಮಗ್ರ ಚರ್ಚೆ ನಡೆಸಿ, ಎನ್ಸಿಇಆರ್ಟಿ ಪಠ್ಯಪುಸ್ತಕಗಳಿಂದ ಕೈಬಿಟ್ಟಿರುವ ಹಲವು ಪಠ್ಯ ಭಾಗಗಳು ಮಹತ್ವದ್ದಾಗಿರುವುದರಿಂದ ಅವನ್ನು ರಾಜ್ಯದಲ್ಲಿನ ವಿದ್ಯಾರ್ಥಿಗಳಿಗೆ ಬೋಧಿಸಬೇಕು ಎಂಬ ನಿರ್ಧಾರಕ್ಕೆ ಬಂದಿದೆ. ಹೊಸ ಪಠ್ಯಪುಸ್ತಕಗಳನ್ನು ಈಗಾಗಲೇ ಸಿದ್ಧಪಡಿಸಲಾಗಿದೆ” ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಇಲ್ಲಿಯವರೆಗೆ ಅನುಸರಿಸುತ್ತಿದ್ದ ಎನ್ಸಿಇಆರ್ಟಿ ಪಠ್ಯಕ್ರಮದ ಬದಲು ಪ್ರಾಥಮಿಕ ಪೂರ್ವ ತರಗತಿಯಿಂದ ಪ್ರೌಢ ಶಿಕ್ಷಣ ತರಗತಿವರೆಗಿನ ವಿದ್ಯಾರ್ಥಿಗಳ ಪಠ್ಯಕ್ರಮವು ಪರಿಷ್ಕರಣೆಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.

ನೂತನ ಪಠ್ಯ ಭಾಗಗಳು ಹೆಚ್ಚುವರಿ ವಾಚನಕ್ಕೆ ಮಾತ್ರ ಇರಲಿವೆ ಎಂಬ ವದಂತಿಗಳಿದ್ದರೂ, ಅದು ಸುಳ್ಳು ಎಂದು ಸಚಿವ ಸಿವನ್ ಕುಟ್ಟಿ ಸ್ಪಷ್ಟಪಡಿಸಿದ್ದಾರೆ. “ಅವು ಪಠ್ಯಕ್ರಮದಲ್ಲಿನ ಸೂಕ್ತ ಭಾಗಗಳಾಗಿ ಇರಲಿವೆಯೇ ಹೊರತು ಕೇವಲ ಹೆಚ್ಚುವರಿ ವಾಚನಕ್ಕಲ್ಲ. ವಿದ್ಯಾರ್ಥಿಗಳಿಗೆ ತಮ್ಮ ಇತಿಹಾಸ ಅರ್ಥ ಮಾಡಿಕೊಳ್ಳಲು ಪರೀಕ್ಷೆಗಳು ಒಂದು ಸಾಧನವಾಗಿರುವುದರಿಂದ, ಅವರು ಈ ಪಠ್ಯ ಭಾಗಗಳನ್ನು ಅಧ್ಯಯನ ಮಾಡಿ, ಪರೀಕ್ಷೆ ಬರೆಯಬೇಕಾಗುತ್ತದೆ” ಎಂದೂ ಅವರು ಹೇಳಿದ್ದಾರೆ.

ಶಾಲಾ ಪಠ್ಯಪುಸ್ತಕಗಳಿಂದ ಭಾರತದ ಐತಿಹಾಸಿಕ ಮಹತ್ವದ ಘಟನೆಗಳನ್ನು ಕೈಬಿಟ್ಟು ಇತಿಹಾಸವನ್ನು ಮರು ರಚಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿರುವ ಬೆನ್ನಿಗೇ, ತನ್ನ ಪಠ್ಯಪುಸ್ತಕಗಳಿಂದ ಜೀವ ವಿಕಾಸ, ಆವರ್ತಕ ಕೋಷ್ಟಕ ಹಾಗೂ ಹಲವಾರು ಹವಾಮಾನ ಸಂಬಂಧಿ ಪಠ್ಯಗಳನ್ನು ವಿವಿಧ ತರಗತಿಗಳ ಪಠ್ಯಪುಸ್ತಕಗಳಿಂದ ಕೈಬಿಟ್ಟ ಕಾರಣಕ್ಕೆ ಎನ್ಸಿಇಆರ್ಟಿ ವಿರುದ್ಧವೂ ತೀವ್ರ ಟೀಕೆ ವ್ಯಕ್ತವಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News