ʼಕ್ಲಬ್ ನಲ್ಲಿ ತಂದೆಯ ಧಾರ್ಮಿಕ ಚಟುವಟಿಕೆʼ | ಸ್ಟಾರ್ ಬ್ಯಾಟರ್ ಜೆಮಿಮಾಗೆ ಮುಂಬೈನ ಖಾರ್ ಜಿಮ್ಖಾನಾ ನೀಡಿದ್ದ ಗೌರವ ಸದಸ್ಯತ್ವ ರದ್ದು
ಮುಂಬೈ : ಮುಂಬೈನ ಅತ್ಯಂತ ಹಳೆಯ ಕ್ಲಬ್‌ಗಳಲ್ಲೊಂದಾಗಿರುವ ಖಾರ್ ಜಿಮ್ಖಾನಾ ಭಾರತದ ಸ್ಟಾರ್ ಕ್ರಿಕೆಟರ್ ಜೆಮಿಮಾ ರಾಡ್ರಿಗಸ್ ಅವರ ಸದಸ್ಯತ್ವವನ್ನು ರದ್ದುಗೊಳಿಸಲು ನಿರ್ಧರಿಸಿದೆ. ಜೆಮಿಮಾರ ತಂದೆ ಐವಾನ್ ರಾಡ್ರಿಗಸ್ ಅವರು ಧಾರ್ಮಿಕ ಸಭೆಗಳನ್ನು ನಡೆಸಲು ಕ್ಲಬನ್ ಆವರಣವನ್ನು ಬಳಸಿಕೊಳ್ಳುತ್ತಿದ್ದಾರೆ ಮತ್ತು ಜನರನ್ನು ಮತಾಂತರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕೆಲವು ಸದಸ್ಯರು ಆಕ್ಷೇಪಗಳನ್ನು ವ್ಯಕ್ತಪಡಿಸಿದ ಬಳಿಕ ಅ.20ರಂದು ನಡೆದ ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಕ್ಲಬ್‌ನ ಅಧಿಕಾರಿಗಳು ಮತ್ತು ಸಮಿತಿ ಸದಸ್ಯರು ತಿಳಿಸಿದ್ದಾರೆ.
2023ರಲ್ಲಿ ಸದಸ್ಯೆಯಾಗುವಂತೆ ಮತ್ತು ತನ್ನ ಸೌಲಭ್ಯಗಳನ್ನು ಬಳಸಿಕೊಳ್ಳುವಂತೆ ಜೆಮಿಮಾ(24)ರನ್ನು ಆಹ್ವಾನಿಸಿದ್ದ ಕ್ಲಬ್, ಅವರಿಗೆ ಮೂರು ವರ್ಷಗಳ ಗೌರವ ಸದಸ್ಯತ್ವವನ್ನು ನೀಡಿತ್ತು.
‘ಜೆಮಿಮಾ ಬಗ್ಗೆ ನಮಗೆ ಹೆಮ್ಮೆಯಿದೆ. ಅವರು ದೇಶಕ್ಕೆ ಗೌರವವನ್ನು ತರುತ್ತಿದ್ದಾರೆ. ಆದರೆ ಅವರ ತಂದೆ ಒಂದು ವರ್ಷದಿಂದ ಕಾಯ್ದರಿಸಿದ್ದ ಕ್ಲಬ್‌ನ ಸಭಾಂಗಣದಲ್ಲಿ ಸುಮಾರು 35 ಸಭೆಗಳನ್ನು ನಡೆಸಿದ್ದರು. ಬ್ರದರ್ ಮ್ಯಾನ್ಯುಯೆಲ್ ಮಿನಿಸ್ಟ್ರೀಸ್ ಎಂಬ ಸಂಘಟನೆ ಇಲ್ಲಿ ನಿಯಮಿತವಾಗಿ ಸಭೆಗಳನ್ನು ನಡೆಸಿತ್ತು ಮತ್ತು ಸಭಾಂಗಣವನ್ನು ವೈಯಕ್ತಿಕವಾಗಿ ಜೆಮಿಮಾ ಹೆಸರಿನಲ್ಲಿ ಕಾಯ್ದಿರಿಸಲಾಗಿತ್ತು’ ಎಂದು ತಿಳಿಸಿದ ಸಮಿತಿಯ ಸದಸ್ಯ ಶಿವ ಮಲ್ಹೋತ್ರಾ ಅವರು,‘ಅಧ್ಯಕ್ಷರು ಕ್ಲಬ್‌ನ ನಿಯಮಗಳಿಗೆ ವಿರುದ್ಧವಾಗಿ ಭದ್ರತಾ ಠೇವಣಿಯನ್ನೂ ಮನ್ನಾ ಮಾಡಿದ್ದರು. ಈ ನಿಯಮಗಳು ಧಾರ್ಮಿಕ ಚಟುವಟಿಕೆಗಳ ಪ್ರಸಾರವನ್ನು ನಿಷೇಧಿಸಿವೆ. ಸಭಾಂಗಣವನ್ನು ರಿಯಾಯಿತಿ ದರದಲ್ಲಿ ಕಾದಿರಿಸಲಾಗಿತ್ತು ಎನ್ನುವುದನ್ನು ನಮ್ಮ ಕಚೇರಿಯು ದೃಢಪಡಿಸಿದೆ. ಕೆಲವು ತಿಂಗಳ ಹಿಂದೆ ಎಂಎನ್‌ಎಸ್ ನಾಯಕರೋರ್ವರು ಸಹ ಕ್ಲಬ್‌ಗೆ ಮತ್ತು ಖಾರ್ ಪೋಲಿಸ್ ಠಾಣೆಗೆ ಈ ಬಗ್ಗೆ ಪತ್ರ ಬರೆದಿದ್ದರು. ಇನ್ನೊಂದು ಸಮಸ್ಯೆ ಎಂದರೆ ಇತರ ಸದಸ್ಯರಿಗೆ ಸಭಾಂಗಣವನ್ನು ಬುಕ್ ಮಾಡಲು ಸಾಧ್ಯವಾಗುತ್ತಿರಲಿಲ್ಲ ’ಎಂದರು.
‘ಉಪಾಧ್ಯಕ್ಷರು ಮತ್ತು ಇತರ ಸಮಿತಿ ಸದಸ್ಯರಿಗೆ ಈ ಚಟುವಟಿಕೆಗಳ ಬಗ್ಗೆ ಗೊತ್ತಿರಲಿಲ್ಲ. ನಂತರ ಮೂರು ಲಕ್ಷಗಳ ಹೆಚ್ಚುವರಿ ಮೊತ್ತವನ್ನು ಸಂಗ್ರಹಿಸಲಾಗಿತ್ತು. ಜೆಮಿಮಾರ ತಂದೆ ಸವಲತ್ತುಗಳನ್ನು ದುರುಪಯೋಗಿಸಿಕೊಂಡಿದ್ದರು. ನಾವು ಸಾಮಾನ್ಯವಾಗಿ ಕ್ರೀಡಾ ಸದಸ್ಯತ್ವಗಳನ್ನು ನೀಡುತ್ತೇವೆ. ಪಿ.ವಿ.ಸಿಂಧು ಮತ್ತು ಲಿಯಾಂಡರ್ ಫೇಸ್ ಅವರಂತಹ ಕ್ರೀಡಾಪಟುಗಳೂ ನಮ್ಮೊಂದಿಗೆ ಗುರುತಿಸಿಕೊಂಡಿದ್ದಾರೆ,ಈಗ ನಡೆದಿರುವುದು ಸ್ವೀಕರಾರ್ಹವಲ್ಲ. ಹಲವಾರು ನಿಯಮಗಳನ್ನು ಉಲ್ಲಂಘಿಸಲಾಗಿತ್ತು ಮತ್ತು ಈಗ ಈ ಚಟುವಟಿಕೆಗಳು ಇತರ ಗಣ್ಯ ಕ್ಲಬ್‌ಗಳಿಗೂ ಹರಡಿವೆ”, ಎಂದು ಮಲೋತ್ರಾ ತಿಳಿಸಿದರು.
ಸಮಾವೇಶಗಳು ನೃತ್ಯ, ದುಬಾರಿ ಸಂಗೀತೋಪಕರಣಗಳು ಮತ್ತು ಬೃಹತ್ ಪರದೆಗಳನ್ನು ಒಳಗೊಂಡಿದ್ದವು. ಖಾರ್ ಜಿಮ್ಖಾನಾದ ಬೈಲಾಗಳ ಪ್ರಕಾರ ಸಂವಿಧಾನದ ನಿಯಮ 4ಎ ಯಾವುದೇ ಧಾರ್ಮಿಕ ಚಟುವಟಿಕೆಯನ್ನು ನಿಷೇಧಿಸಿದೆ. ಹಲವಾರು ಸಂದರ್ಭಗಳಲ್ಲಿ ಉಪಕರಣಗಳನ್ನು ಟೆಂಪೋಗಳಲ್ಲಿ ತರಲಾಗಿತ್ತು ಎನ್ನಲಾಗಿದೆ.