ಮೈತೇಯಿ ಗುಂಪಿನಿಂದ ನನ್ನನ್ನು ರಕ್ಷಿಸಿದ್ದು ಮುಸ್ಲಿಂ ಆಟೋ ಚಾಲಕ: ಭಯಾನಕ ಘಟನೆಯನ್ನು ಬಿಚ್ಚಿಟ್ಟ ಮಣಿಪುರ ಅತ್ಯಾಚಾರ ಸಂತ್ರಸ್ತೆ

ಮೈತೇಯಿ ಪುರುಷರ ಗುಂಪಿನಿಂದ ತನ್ನನ್ನು ರಕ್ಷಿಸಿದ್ದು ಓರ್ವ ಮುಸ್ಲಿಂ ರಿಕ್ಷಾ ಚಾಲಕ, ಆ ವ್ಯಕ್ತಿಯ ಸಹಾಯದಿಂದ ತಾನು ಮೈತೇಯಿಗಳ ಕೈಯಿಂದ ತಪ್ಪಿಸಿ ತನ್ನ ಕುಟುಂಬಸ್ಥರೊಂದಿಗೆ ಸೇರಿಕೊಂಡೆ ಎಂದು 18 ವರ್ಷದ ಸಂತ್ರಸ್ತ ಯುವತಿ ತಿಳಿಸಿದ್ದಾರೆ.

Update: 2023-07-23 15:16 GMT

ಸಾಂದರ್ಭಿಕ ಚಿತ್ರ (PTI) 

ಹೊಸದಿಲ್ಲಿ: ಜಗತ್ತನ್ನೇ ಬೆಚ್ಚಿಬೀಳಿಸಿದ ಮಣಿಪುರ ಮಹಿಳೆಯರ ಬೆತ್ತಲೆ ಮೆರವಣಿಗೆ ಹಾಗೂ ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯೊಬ್ಬರು ತನ್ನ ಅನುಭವವನ್ನು thequint.com ಜೊತೆಗೆ ಹಂಚಿಕೊಂಡಿದ್ದು, ತಾನು ಎದುರಿಸಿದ ದೌರ್ಜನ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಮೈತೇಯಿ ಪುರುಷರ ಗುಂಪಿನಿಂದ ತನ್ನನ್ನು ರಕ್ಷಿಸಿದ್ದು ಓರ್ವ ಮುಸ್ಲಿಂ ರಿಕ್ಷಾ ಚಾಲಕ, ಆ ವ್ಯಕ್ತಿಯ ಸಹಾಯದಿಂದ ತಾನು ಮೈತೇಯಿಗಳ ಕೈಯಿಂದ ತಪ್ಪಿಸಿ ತನ್ನ ಕುಟುಂಬಸ್ಥರೊಂದಿಗೆ ಸೇರಿಕೊಂಡೆ ಎಂದು 18 ವರ್ಷದ ಸಂತ್ರಸ್ತ ಯುವತಿ ತಿಳಿಸಿದ್ದಾರೆ.

ತಾನು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ತನಗೆ ಏನಾಯಿತು ಎಂದು ತಿಳಿದಿಲ್ಲ ಎಂದು ಯುವತಿ ಹೇಳಿದ್ದಳಾದರೂ, ಆಕೆಯ ವೈದ್ಯಕೀಯ ವರದಿಗಳು ಆಕೆಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರವನ್ನು ಧೃಡಪಡಿಸಿದೆ.

ಸಂತ್ರಸ್ತೆಯ ಮಾತಿನಲ್ಲಿ..

ಮಣಿಪುರದಲ್ಲಿ ಹಿಂಸಾಚಾರ ಆರಂಭವಾದಾಗ, ಈ ಸಮಸ್ಯೆ ಹೆಚ್ಚು ದಿನ ಉಳಿಯಲಿಕ್ಕಿಲ್ಲ ಎಂದು ಭಾವಿಸಿ ನಾನು ನನ್ನ ಗೆಳತಿಯ ಮನೆಯಲ್ಲಿ ನೆಲೆಸಿದ್ದೆ. ಆಕೆ ಓರ್ವ ಮುಸಲ್ಮಾನನ್ನು ಮದುವೆಯಾಗಿದ್ದಳು. ಅವರ ಕುಟುಂಬದೊಂದಿಗೆ ನಾನು ನೆಲೆಸಿದ್ದೆ. ಆದರೆ, ಈ ಹಿಂಸಾಚಾರವು ಇನ್ನಷ್ಟು ದಿನ ಮುಂದುವರಿಯಬಹುದು ಎಂದು ನನ್ನ ಕುಟುಂಬಸ್ಥರು ಕರೆ ಮಾಡಿ ತಿಳಿಸಿದರು. ಮೇ 16 ರ ಬೆಳಿಗ್ಗೆ ಮನೆಗೆ ಹಿಂತಿರುಗುವಂತೆ ನನ್ನಲ್ಲಿ ಹೇಳಿದರು, ನನ್ನೊಂದಿಗೆ ಬರಬಲ್ಲ ಜನರನ್ನು ನಾನು ಹುಡುಕತೊಡಗಿದೆ.

ಮೇ 15 ರಂದು ನಾನು ಇಂಫಾಲ್‌ನ ಎಟಿಎಂನಿಂದ ನನ್ನ ಸ್ನೇಹಿತರು ಕಳುಹಿಸಿದ ಹಣವನ್ನು ಡ್ರಾ ಮಾಡಲು ಹೋಗಿದ್ದೆ. ಆ ವೇಳೆ ಎರಡು ವಾಹನಗಳು ನನ್ನ ಹತ್ತಿರ ಬಂದವು. ಒಂದು ನನ್ನ ಮುಂದೆ ನಿಂತಿತು, ಮತ್ತು ಇನ್ನೊಂದು ನನ್ನ ಹಿಂದೆ ನಿಂತಿತು. ಅವರು ನನ್ನ ಆಧಾರ್ ಕಾರ್ಡ್ ಕೇಳಿದರು. ಅವರು ಮೈತೇಯಿಗಳೆಂದು ನನಗೆ ತಿಳಿಯಿತಾದ್ದರಿಂದ ನನ್ನ ಬಳಿ ಆಧಾರ್ ಇಲ್ಲ ಎಂದು ಅವರಿಗೆ ಹೇಳಿದೆ. ನನ್ನ ಮಾತಿನ ಶೈಲಿಯಿಂದಲೇ ನಾನು ಕುಕಿಬುಡಕಟ್ಟಿನವಳು ಎಂದು ಅವರು ಕಂಡು ಹಿಡಿದರು. ನಂತರ ನನ್ನನ್ನು ಬಲವಂತವಾಗಿ ಎತ್ತಿ ವಾಹನದೊಳಗೆ ಹಾಕಿದರು.

ಅವರು ನನ್ನನ್ನು ಮೈತೇಯಿ ಬಾಹುಳ್ಯದ ವಾಂಗ್‌ಖೈ ಪ್ರದೇಶಕ್ಕೆ ಕರೆದೊಯ್ದರು, ಅಲ್ಲಿ ನನ್ನನ್ನು ಕೂಡಿ ಹಾಕಿ ಇತರ ಪುರುಷರು ಮತ್ತು ಮಹಿಳೆಯರನ್ನು ಕರೆದರು. ನಮ್ಮ (ಮೈತೇಯಿ) ಮಹಿಳೆಯರಿಗೆ ಥಳಿಸಲಾಗುತ್ತದೆ ಎಂದು ಕೂಗಿ ನನಗೆ ಹೊಡೆಯಲು ಆರಂಭಿಸಿದರು. ಸುಮಾರು ಸಂಜೆ 5 ಗಂಟೆಯಿಂದ ಬೆಳಗಿನ ಜಾವದವರೆಗೂ ಥಳಿಸುತ್ತಿದ್ದರು. ಅಲ್ಲಿಗೆ ಬಂದ ಮೈತೇಯಿ ಹೆಂಗಸರೆಲ್ಲ ನನ್ನ ಮೇಲೆ ಕೈ ಹಾಕಿದರು. ಪೊಲೀಸರು ಬಂದು ನನ್ನನ್ನು ರಕ್ಷಿಸಬಹುದು ಎಂದು ತಮ್ಮತಮ್ಮಲ್ಲೇ ಚರ್ಚಿಸಿ, ನನ್ನನ್ನು ಯಾರೂ ಇಲ್ಲದ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಹೊಡೆದರು.

ನಂತರ, ಅವರು ಕಪ್ಪು ಟಿ-ಶರ್ಟ್‌ಗಳನ್ನು ಧರಿಸಿರುವ ಕೆಲವು ಪುರುಷರನ್ನು ಕರೆದರು, ಬಹುಶಃ ಅರಾಂಬೈ ಮೈತೈಯಿಗಳಾಗಿರಬೇಕು. ಅವರು ಶಸ್ತ್ರಾಸ್ತ್ರಗಳು, ಚಾಕುಗಳು ಮತ್ತು ಹಗ್ಗಗಳನ್ನು ಹೊಂದಿದ್ದರು. 7-8 ಗುಂಪುಗಳಲ್ಲಿ ಬಿಳಿ ಬೊಲೆರೋಗಳಲ್ಲಿ ಅವರು ಬಂದರು. ನನ್ನನ್ನು ಅವರಿಗೆ ಒಪ್ಪಿಸಿ, ನನ್ನನ್ನು ಕೊಲ್ಲಬೇಕು ಎಂದು ಒತ್ತಾಯಿಸಿದರು.

ಅರಾಂಬೈಗಳು ನನ್ನನ್ನು ವಾಂಗ್‌ಖೈಯಿಂದ ಲಾಂಗೋಲ್‌ಗೆ ಕರೆದೊಯ್ದರು. ಅವರು ನನ್ನ ಕಣ್ಣಿಗೆ ಬಟ್ಟೆ ಕಟ್ಟಿದ್ದರು, ನನ್ನ ಕೈಗಳನ್ನು ಕಟ್ಟಿ, ಗುಂಡು ಹಾರಿಸಲು ಸಿದ್ಧರಾಗಿದ್ದರು. ನಂತರ, ಒಬ್ಬ ವ್ಯಕ್ತಿ, ಪೊಲೀಸ್ ಠಾಣೆ ಹತ್ತಿರದಲ್ಲಿದೆ, ಗುಂಡಿನ ಶಬ್ದವು ಪೊಲೀಸರಿಗೆ ಕೇಳಬಹುದು ಎಂದು ಎಚ್ಚರಿಸಿದನು.

ನಂತರ ಅವರು ನನ್ನನ್ನು ಬಿಷ್ಣುಪುರದ ಕಡೆಗೆ ಕರೆದುಕೊಂಡು ಹೋದರು. ಅವರು ಆಗ ನನ್ನನ್ನು ಲಮ್ಕಾ ತಲುಪುವ ಮೊದಲೇ ಕೊಂದು ಎಸೆಯಬೇಕೇ ಎಂದು ಲೆಕ್ಕಾಚಾರ ಮಾಡುತ್ತಿದ್ದರು. ಅವರು ನನ್ನನ್ನು ಬಿಷ್ಣುಪುರದ ಬೆಟ್ಟದ ತುದಿಗೆ ಕರೆದೊಯ್ದರು. ಅವರು ನನ್ನನ್ನು ಥಳಿಸುತ್ತಲೇ ಇದ್ದರು. ನನ್ನ ಗಲ್ಲ ಮತ್ತು ಕಿವಿಯಲ್ಲಿ ರಕ್ತಸ್ರಾವವಾಗಲು ಪ್ರಾರಂಭಿಸಿತು.

ಅವರು ನನ್ನನ್ನು ಕೊಲ್ಲುವ ಮೊದಲು ಅತ್ಯಾಚಾರ ಮಾಡಲು ನಿರ್ಧರಿಸಿದ್ದರು. ನಿಮಗೆ ಸಹೋದರ ಸಹೋದರಿಯರು ಇಲ್ಲವೇ ಎಂದು ನಾನು ಕೇಳಿದಾಗ ಮತ್ತೆ ಹೊಡೆಯತೊಡಗಿದರು. ಅವರು ತಮ್ಮ ಗನ್ ಲೋಡ್ ಮಾಡುತ್ತಿರುವ ಶಬ್ಧ ನನಗೆ ಕೇಳಿಸಿತು. ನನ್ನನ್ನು ಹೆದರಿಸಲು ಒಂದೆಡು ಬಾರಿ ಬೇರೆ ಗಾಳಿಯಲ್ಲಿ ಗುಂಡು ಹಾರಿಸಿದರು. ನಂತರ ಅವರು ನನ್ನತ್ತ ಬಂದೂಕುಗಳನ್ನು ತೋರಿಸಿದರು. ಅವರಲ್ಲಿ ಕೆಲವರು ನನ್ನ ಮುಂದೆ, ಹಿಂದೆ ಮತ್ತು ತಲೆಗೆ ತಮ್ಮ ಬಂದೂಕಿನ ಬ್ಯಾರೆಲ್ ನಿಂದ ಗುದ್ದಿದರು. ನನ್ನ ಕಣ್ಣುಗಳ ಬಳಿ ಬಂದೂಕಿನ ಬುಡದಿಂದ ಮೂರು ಬಾರಿ ಹೊಡೆದ ಬಳಿಕ ನಾನು ಪ್ರಜ್ಞೆ ಕಳೆದುಕೊಂಡೆ. ನಂತರ ಏನಾಯಿತು ಎಂದು ನನಗೆ ತಿಳಿದಿಲ್ಲ. ಅವರು ಬಾಟಲಿಯಿಂದ ಸ್ವಲ್ಪ ನೀರನ್ನು ನನ್ನ ಮೇಲೆ ಎರಚಿದ ಬಳಿಕ ನನಗೆ ಪ್ರಜ್ಞೆ ಮರಳಿ ಬಂತು.

ನಾನು ಮೂತ್ರ ವಿಸರ್ಜನೆ ಮಾಡಲು ಅನುವು ಮಾಡಿಕೊಡುವಂತೆ ಬೇಡಿಕೊಂಡೆ. ಅವರಲ್ಲಿ ಒಬ್ಬಾತ ನನ್ನ ಕೈಗಳನ್ನು ಮಾತ್ರ ಬಿಚ್ಚಿದ. ನಾನು ಕೆಲವು ಹೆಜ್ಜೆಗಳನ್ನು ಮುಂದಕ್ಕೆ ಇಟ್ಟು, ಬಿಷ್ಣುಪುರ ಬೆಟ್ಟದಿಂದ ಉರುಳಿ ಬಿದ್ದೆ. ಅಲ್ಲಿಂದ ನಾನು ಹೇಗೋ ಮುಖ್ಯ ರಸ್ತೆ ತಲುಪಿದೆ. ಅಲ್ಲಿ ಒಂದು ಆಟೋ ಕಂಡಿತು. ಅದೂ ಮೈತೇಯಿಗಳದ್ದಾಗಿರಬಹುದು ಎಂಬ ಭಯವಾಗಿ ಆಟೋಗೆ ಕೈ ತೋರಿಸಲು ಹಿಂಜರಿದೆ. ಆದರೆ ಇದು ಜೀವನ್ಮರಣದ ವಿಷಯವಾಗಿದ್ದರಿಂದ ನಾನು ಆಟೋವನ್ನು ನಿಲ್ಲಿಸಿದೆ. ಅದರ ಚಾಲಕ ಓರ್ವ ಪಂಗಲ್ ಮುಸ್ಲಿಂ ವ್ಯಕ್ತಿಯಾಗಿದ್ದರು. ಅವರು ತರಕಾರಿ ಸಾಗಣೆದಾರರಾಗಿದ್ದು, ಅವರು ಮುಂಜಾನೆ ತರಕಾರಿಗಳನ್ನು ಸಾಗಿಸುತ್ತಿದ್ದರು. ಅವರು ನನ್ನನ್ನು ತರಕಾರಿ ಚೀಲಗಳ ನಡುವೆ ಅಡಗಿಸಿ ಕೂರಿಸಿದರು.

ನನ್ನನ್ನು ಹಿಡಿದಿಟ್ಟಿದ್ದ ಜನರು ನಾನು ಅವರಿಂದ ದೂರ ಓಡಿಹೋಗಲು ಸಾಧ್ಯವಿಲ್ಲ ಎಂದು ಭಾವಿಸಿ, ನನ್ನನ್ನು ಬೆನ್ನಟ್ಟಲು ಪ್ರಾರಂಭಿಸಿದರು. ನಮ್ಮ ಕಡೆಗೆ ಗುಂಡು ಹಾರಿಸುವುದು ಕೇಳಿಸುತ್ತಿತ್ತು. ನಾವು ಬಿಷ್ಣುಪುರ್ ಪೊಲೀಸ್ ಠಾಣೆ ಒಳಗೆ ಓಡಿದೆವು. ಅಲ್ಲಿ, 3 ಪೊಲೀಸರು [ಗ್ರಾಮ ರಕ್ಷಣಾ ಪಡೆ ಅಥವಾ ವಿಡಿಎಫ್] ಹೊರಬಂದು ನಮ್ಮ ಹಿಂದೆ ಇದ್ದ ವಾಹನ ನನ್ನನ್ನು ಹಿಂಬಾಲಿಸುತ್ತಿದೆಯೇ ಎಂದು ಕೇಳಿದರು. ಅದಕ್ಕೆ ನಾನು ಹೌದು ಎಂದೆ. ಅವರು ವಾಹನವನ್ನು ನಿಲ್ಲಿಸಿದರು, ಆದರೆ, ವಾಹನದಲ್ಲಿ ಶಸ್ತ್ರಾಸ್ತ್ರ ಮತ್ತು ಆಯುಧಗಳಿವೆ ಎಂದು ಹೇಳಿದೆ.

ಪೊಲೀಸರು ವಾಹನವನ್ನು ಪರಿಶೀಲಿಸಲು ಮುಂದಾದ ತಕ್ಷಣ ಅವರು ತಪ್ಪಿಸಿಕೊಂಡರು.

ಮೇಲಧಿಕಾರಿಗಾಗಿ ಕಾಯಲು ಸಿದ್ದರಿದ್ದೀರಾ ಎಂದು ಅಲ್ಲಿದ್ದ ಪೊಲೀಸರು ನನ್ನನ್ನು ಕೇಳಿದರು. ನನ್ನನ್ನು ಕರೆದುಕೊಂಡು ಬಂದ ಪಂಗಲ್ ಮುಸ್ಲಿಂ ಡ್ರೈವರ್, ಆ ಅಧಿಕಾರಿ ಮೈತೇಯಿರಬಹುದು ಎಂದು ಶಂಕೆ ವ್ಯಕ್ತಪಡಿಸಿದರು, ಹಾಗಾಗಿ, ನನ್ನ ಸಮುದಾಯದ ಜನರಿರುವಲ್ಲಿಯೇ ನನ್ನನ್ನು ತಲುಪಿಸಲು ಅವರು ಮುಂದಾದರು. ಆಟೋ ಹತ್ತಲೂ ತ್ರಾಣವಿಲ್ಲದ ನನಗೆ ಆಟೋ ಏರಲು ಆ ವ್ಯಕ್ತಿ ಸಹಾಯ ಮಾಡಿದರು. ನಂತರ ನನ್ನನ್ನು ನನ್ನ ಸಮುದಾಯದ ಜನರಿರುವ ಕಡೆಗೆ ತಲುಪಿಸಿದರು. ನನ್ನ ದಯನೀಯ ಪರಿಸ್ಥಿತಿಯನ್ನು ಅಲ್ಲಿದ್ದ ಮಹಿಳೆಯರಿಗೆ ನೋಡಲು ಧೈರ್ಯ ಸಾಲಲಿಲ್ಲ. ಅಲ್ಲಿಂದ ನನ್ನನ್ನು (ಬಿಜೆಪಿ ಮಾಜಿ ಶಾಸಕ) ಟಿಟಿ ಹಾಕಿಪ್ ಅವರ ನಿವಾಸಕ್ಕೆ ಕರೆದೊಯ್ಯಲಾಯಿತು. ಅವರ ನಿವಾಸದಲ್ಲಿ ನಾನು ಎರಡು ದಿನಗಳ ಕಾಲ (ಮೇ 16-17) ನಾನು ಅಸಹಾಯಕಳಾಗಿ ಬಿದ್ದಿದ್ದೆ.

ಮೇ 18 ರಂದು, ನನ್ನನ್ನು ನೇರವಾಗಿ ವೈದ್ಯರ ಬಳಿಗೆ ಕರೆದೊಯ್ದರು. ವೈದ್ಯರು ನನ್ನ ಕಣ್ಣು ಮತ್ತು ಕಿವಿಗಳನ್ನು ಪರೀಕ್ಷಿಸಿ, ಔಷಧಿಗಳನ್ನು ಬರೆದರು. ನನ್ನ ತಪಾಸಣೆಯ ನಂತರ, ನಾನು ಸಪರ್ಮಿನಾ ಗ್ರಾಮದ ಪರಿಹಾರ ಶಿಬಿರದಲ್ಲಿ ಉಳಿದುಕೊಂಡೆ. ಕೆಲವು ನಾಯಕರು ಮತ್ತು ಪಾದ್ರಿಗಳು ನನ್ನನ್ನು ಭೇಟಿ ಮಾಡಿದರು. ಅವರಿಗೂ ನನ್ನ ದಯನೀಯ ಸ್ಥಿತಿಯನ್ನು ನೋಡಲಾಗಲಿಲ್ಲ.

ನನಗೆ ಗ್ಲೂಕೋಸ್ ಡ್ರಿಪ್ ನೀಡಲಾಯಿತು. ಕತ್ತು ಹಿಸುಕಿದ್ದರಿಂದ ಕುತ್ತಿಗೆಯಲ್ಲಿ ಅಸಹನೀಯ ನೋವಿತ್ತು, ನೀರನ್ನೂ ಸಹ ಕುಡಿಯಲು ಸಾಧ್ಯವಿರಲಿಲ್ಲ, ಏನಾದರೂ ತಿನ್ನಲು ನನಗೆ ತುಂಬಾ ಕಷ್ಟವಾಯಿತು. ನನಗೆ ಗ್ಲುಕೋಸ್‌ ನೀಡುತ್ತಿದ್ದರೂ, ನನ್ನ ಸ್ಥಿತಿ ಹದಗೆಡುತ್ತಲೇ ಹೋಗಿತ್ತು. ನನ್ನ ಚಿಕ್ಕ ವಯಸ್ಸಿನಿಂದಾಗಿ ನನ್ನ ಗಾಯಗಳಿಂದ ಚೇತರಿಸಿಕೊಳ್ಳಲು ನನಗೆ ಕಷ್ಟವಾಗುತ್ತಿದೆ ಎಂದು ವೈದ್ಯರು ಹೇಳಿದರು.

ನಾನು ಕಣ್ಣು ಮುಚ್ಚಿದಾಗಲೆಲ್ಲಾ, ನನಗೆ ಚಿತ್ರಹಿಂಸೆ ನೀಡಿದವರ ಮುಖಗಳೇ ಎದುರು ಬರುತ್ತಿದ್ದವು. ನಾನು ಅವರ ವಿರುದ್ಧ ಎಫ್‌ಐಆರ್ ದಾಖಲಿಸಿದರೆ, ಅವರು ನನ್ನನ್ನು ಹುಡುಕಿ ಕೊಲ್ಲುತ್ತಾರೆ ಎಂಬ ಭಯದಿಂದ ಇಂದಿನವರೆಗೂ ಎಫ್‌ಐಆರ್ ದಾಖಲಿಸುವ ಧೈರ್ಯ ನಾನು ಮಾಡಿಲ್ಲ, ರಾತ್ರಿಯೆಲ್ಲಾ ಅವರ ಮುಖಗಳೇ ಕಣ್ಣಮುಂದೆ ಬರುವುದರಿಂದ ಬೆಚ್ಚಿ ಬೀಳುತ್ತಿದ್ದೆ. ನಾನು ಇನ್ನೂ ಆಘಾತದಿಂದ ಹೊರ ಬಂದಿಲ್ಲ. ಅವರು ನನ್ನ ಮೇಲೆ ದಾಳಿ ಮಾಡುತ್ತಿರುವ ದೃಶ್ಯಗಳು ಇನ್ನೂ ಕಣ್ಣಮುಂದೆ ಬರುತ್ತಲೇ ಇವೆ. ರಾತ್ರಿಯಲ್ಲಿ, ನನಗೆ ಈಗಲೂ ತುಂಬಾ ಭಯವಾಗುತ್ತಿದೆ. ನನಗೆ ಅವರ ಮುಖ ನೆನಪಿದೆ. ನಾನು ಇಂಫಾಲ್‌ಗೆ ಮರಳಲು ಭಯಪಡುತ್ತಿದ್ದೇನೆ, ನನ್ನ ಯಾವುದೇ ಮೈತೇಯಿ ಸ್ನೇಹಿತರೊಂದಿಗೆ ಸಂಪರ್ಕದಲ್ಲಿ ಇಲ್ಲ. ನನಗೆ ಈಗ ಅವರ ಬಗ್ಗೆ ಭಯ ಇದೆ.

ಕೃಪೆ: thequint.com

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News