ಮಣಿಪುರ ವಿಶೇಷ ಅಧಿವೇಶನಕ್ಕೆ ಹಾಜರಾಗದಂತೆ ಕುಕಿ ಶಾಸಕರಿಗೆ ತಾಕೀತು
ಗುವಾಹತಿ: ಈ ತಿಂಗಳ 21ರಂದು ನಡೆಯಲಿರುವ ರಾಜ್ಯ ವಿಧಾನಸಭೆಯ ವಿಶೇಷ ಅಧಿವೇಶದನಲ್ಲಿ 10 ಮಂದಿ ಕುಕಿ ಶಾಸಕರು ಭಾಗವಹಿಸದಂತೆ ಇಂಡೀಜೀನಿಯಸ್ ಟ್ರೈಬಲ್ ಲೀಡರ್ಸ್ ಫೋರಂ (ಐಟಿಎಲ್ಎಫ್) ಎಲ್ಲ ಶಾಸಕರಿಗೆ ಎಚ್ಚರಿಕೆ ನೀಡಿದೆ.
"ಯಾವುದೇ ವಿಧದಲ್ಲಿ ಆಗಸ್ಟ್ 21ರಂದು ನಡೆಯುವ ವಿಧಾನಸಭೆ ವಿಶೇಷ ಅಧಿವೇಶನದಲ್ಲಿ ಕುಕಿ ಝೋ ಸಮುದಾಯದ ಯಾವ ಶಾಸಕರೂ ಭಾಗವಹಿಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ" ಎಂದು ಐಟಿಎಲ್ಎಫ್ 'ಎಕ್ಸ್'ನಲ್ಲಿ ಬಹಿರಂಗಪಡಿಸಿದೆ.
ರಾಜ್ಯದಲ್ಲಿರುವ 10 ಮಂದಿ ಕುಕಿ ಶಾಸಕರ ಪೈಕಿ ಏಳು ಮಂದಿ ಆಡಳಿತಾರೂಢ ಬಿಜೆಪಿಯವರು, ಇಬ್ಬರು ಕುಕಿ ಪೀಪಲ್ಸ್ ಅಲಯನ್ಸ್ ಸೇರಿದವರು. ಕುಕಿ ಪೀಪಲ್ಸ್ ಅಲಯನ್ಸ್ ಗೆ ಈಗಾಗಲೇ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಾಸು ಪಡೆದಿದೆ. ಒಬ್ಬರು ಪಕ್ಷೇತರ ಕುಕಿ ಶಾಸಕರು ವಿಧಾನಸಭೆಯಲ್ಲಿದ್ದಾರೆ. ಆದರೆ ಈ ಪೈಕಿ ಮೀಟಿ ಬಾಹುಳ್ಯದ ಇಂಫಾಲ್ ಕಣಿವೆ ಪ್ರದೇಶದಿಂದ ಯಾರೂ ಆಯ್ಕೆಯಾಗಿಲ್ಲ.
ಈ ಚಂಚಲ ಸ್ಥಿತಿಯಲ್ಲಿ ವಿಧಾನಸಭೆಯ ಅಧಿವೇಶನಕ್ಕೆ ಹಾಜರಾಗಲು ಸಾಧ್ಯವಿಲ್ಲ ಎಂದು ಕೆಲ ಶಾಸಕರು ಈಗಾಗಲೇ ಬಹಿರಂಗ ಹೇಳಿಕೆ ನೀಡಿದ್ದಾರೆ. ಈ ಮಧ್ಯೆ ಮ್ಯಾನ್ಮಾರ್ನಿಂದ ನುಸುಳಿರುವ ಚಿನ್-ಕುಕಿ ಸಮುದಾಯದ ಜನ ಈ ಜನಾಂಗೀಯ ಹಿಂಸಾಚಾರಕ್ಕೆ ಕಾರಣ ಎಂದು ಗೃಹ ಸಚಿವ ಅಮಿತ್ ಶಾ ಸಂಸತ್ತಿನಲ್ಲಿ ಹೇಳಿಕೆ ನೀಡಿರುವುದನ್ನು ಕುಕಿ ಝೋ ಶಾಸಕರು ಅಲ್ಲಗಳೆದಿದ್ದಾರೆ.