ಇಂದಿನಿಂದ ವಿಧಾನಮಂಡಲ ಅಧಿವೇಶನ; ಬಿಜೆಪಿಯಿಂದ 'ಮೋಸ ನಿಲ್ಲಿಸಿ, ಗ್ಯಾರಂಟಿ ಜಾರಿಗೊಳಿಸಿ' ಹೋರಾಟ
ಬೆಂಗಳೂರು, ಜು. 3: ಐದು ಗ್ಯಾರಂಟಿ ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ತಮ್ಮ ಆಶ್ವಾಸನೆ ಈಡೇರಿಸದೆ ಮಾತಿಗೆ ತಪ್ಪಿದೆ. ಇದರ ವಿರುದ್ಧ 'ಮೋಸ ನಿಲ್ಲಿಸಿ, ಗ್ಯಾರಂಟಿ ಜಾರಿಗೊಳಿಸಿ' ಹೋರಾಟಕ್ಕೆ ಬಿಜೆಪಿ ಮುಂದಾಗಿದೆ' ಎಂದು ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ರವಿವಾರ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ಬಳಿಕ ಗ್ಯಾರಂಟಿ ಅನುಷ್ಠಾನದ ವಿಚಾರದಲ್ಲಿ ಭಂಡತನ ತೋರುತ್ತಿದೆ. ಷರತ್ತು ಇಲ್ಲದೆ ಗ್ಯಾರಂಟಿಗಳನ್ನು ಜಾರಿ ಮಾಡಲು ಆಗ್ರಹಿಸಿ ಸದನದ ಒಳಗೆ ಮತ್ತು ಹೊರಗೆ ಹೋರಾಟ ನಡೆಸಲಿದ್ದೇವೆ ಎಂದು ಎಚ್ಚರಿಸಿದರು.
'ಶೇ.50ಕ್ಕಿಂತ ಹೆಚ್ಚು ವಿದ್ಯುತ್ ದರ ಏರಿಸಿದ್ದಾರೆ. ಇದರಿಂದ ಬೆಲೆ ಏರಿಕೆ ಆಗುತ್ತಿದೆ, ಬೆಲೆ ಏರಿಕೆಯನ್ನು ಇಳಿಸಬೇಕು. ಈ ಸರಕಾರ ಬೆಲೆ ಏರಿಕೆ, ಭ್ರಷ್ಟಾಚಾರಕ್ಕೆ ಸಾಕ್ಷಿಯಾಗುತ್ತಿದೆ. ಕೈಗಾರಿಕೆಗಳು, ಜನಸಾಮಾನ್ಯರು ವಿದ್ಯುತ್ ದರ ಏರಿಕೆಯಿಂದ ತೀವ್ರ ಸಂಕಷ್ಟೆ ಸಿಲುಕಿದ್ದಾರೆ. ಸದನದ ಹೊರಗೆ ಪಕ್ಷದ ಯಡಿಯೂರಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಹೇಳಿದರು.