ಲೋಕಸಭಾ ಚುನಾವಣೆ: 5ನೇ ಹಂತದಲ್ಲಿ ಕಡಿಮೆ ಮತದಾನ

Update: 2024-05-21 04:15 GMT

ಹೊಸದಿಲ್ಲಿ: ಪ್ರಸಕ್ತ ಲೋಕಸಭಾ ಚುನಾವಣೆಯ ಐದನೇ ಹಂತದ ಮತದಾನ ಸೋಮವಾರ ಬಹುತೇಕ ಶಾಂತಿಯುತವಾಗಿ ನಡೆದಿದ್ದು, ಶೇಕಡ 60.3ರಷ್ಟು ಮತದಾನವಾಗಿದೆ. 2019ರಲ್ಲಿ ಈ ಕ್ಷೇತ್ರಗಳಲ್ಲಿ ಶೇಕಡ 62.5ರಷ್ಟು ಮತದಾನ ಆಗಿತ್ತು. ಬಂಗಾಳದಲ್ಲಿ ಗರಿಷ್ಠ ಅಂದರೆ ಶೇಕಡ 74.7ರಷ್ಟು ಮತ್ತು ಮಹಾರಾಷ್ಟ್ರದಲ್ಲಿ ಕನಿಷ್ಠ ಅಂದರೆ ಶೇಕಡ 54.3ರಷ್ಟು ಮತದಾನ ಆಗಿದೆ. 2019ರ ಒಟ್ಟಾರೆ ಮತದಾನದಲ್ಲಿ ಪುನರ್ ವಿಂಗಡಣೆಯಾಗಿರುವ ಬಾರಾಮುಲ್ಲಾ ಕ್ಷೇತ್ರದ ಅಂಕಿ ಅಂಶಗಳು ಸೇರಿಲ್ಲ.

ರಾಯಬರೇಲಿ ಮತ್ತು ಅಮೇಥಿ ಸೇರಿದಂತೆ ಉತ್ತರ ಪ್ರದೇಶದ ಆರು ಕ್ಷೇತ್ರಗಳಲ್ಲಿ 2019ಕ್ಕಿಂತ ಅಧಿಕ ಮತದಾನ ದಾಖಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಕ್ಷೇತ್ರದಲ್ಲಿ ಶೇಕಡ 57.4ರಷ್ಟು ಮತದಾನವಾಗಿದ್ದು, ಮುಂಬೈನ ಆರು ಕ್ಷೇತ್ರಗಳಲ್ಲಿ ದಾಖಲಾದ ಪ್ರಮಾಣಕ್ಕಿಂತ ಇದು ಅಧಿಕ. ಮುಂಬೈ ದಕ್ಷಿಣ ಕ್ಷೇತ್ರದಲ್ಲಿ ಶೇಕಡ 47.7 ಹಾಗೂ ಮುಂಬೈ ಉತ್ತರ ಕ್ಷೇತ್ರದಲ್ಲಿ 55.2ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗದ ಅಂಕಿ ಅಂಶಗಳು ಹೇಳಿವೆ. ಮಹಾರಾಷ್ಟ್ರದ 13 ಕ್ಷೇತ್ರಗಳಿಗೆ ಸೋಮವಾರ ಮತದಾನ ನಡೆದಿದ್ದು, ಭಿವಂಡಿ, ಕಲ್ಯಾಣ್ ಮತ್ತು ಥಾಣೆ ಕ್ಷೇತ್ರಗಳಲ್ಲಿ ಹೆಚ್ಚು ಮತದಾನವಾಗಿದೆ.

"ಮುಂಬೈ, ಥಾಣೆ, ನಾಸಿಕ್ ಮತ್ತು ಲಕ್ನೋದಂಥ ನಗರಗಳ ಕ್ಷೇತ್ರಗಳಲ್ಲಿ 2019ರಲ್ಲಿ ಕಂಡುಬಂದಂತೆ ನಗರ ನಿರಾಸಕ್ತಿ ಪ್ರವೃತ್ತಿ ಮುಂದುವರಿದಿದೆ" ಎಂದು ಚುನಾವಣಾ ಆಯೋಗ ಹೇಳಿಕೆ ನೀಡಿದೆ.

ಈ ಹಂತದಲ್ಲಿ 6 ರಾಜ್ಯಗಳ 49 ಕ್ಷೇತ್ರಗಳಲ್ಲಿ ಮತದಾನ ಪೂರ್ಣಗೊಂಡಿದ್ದು, ಒಟ್ಟು 428 ಕ್ಷೇತ್ರಗಳಲ್ಲಿ ಮತದಾನ ಮುಗಿದಿದೆ.

ಸೋಮವಾರ ಮತದಾನ ನಡೆದ ಕ್ಷೇತ್ರಗಳ ಪೈಕಿ ಕಲ್ಯಾಣ್ ಕ್ಷೇತ್ರದಲ್ಲಿ ಅತ್ಯಂತ ಕನಿಷ್ಠ ಮತದಾನವಾಗಿದೆ. ಉಳಿದಂತೆ ಮುಂಬೈ ದಕ್ಷಿಣ (47.8%)ದಲ್ಲೂ ಕಡಿಮೆ ಮತದಾನವಾಗಿದೆ. ಪಶ್ಚಿಮ ಬಂಗಾಳದ ಅರಂಭಾಗ್ ಕ್ಷೇತ್ರದಲ್ಲಿ ಗರಿಷ್ಠ ಅಂದರೆ ಶೇಕಡ 79.5ರಷ್ಟು ಮತದಾನವಾಗಿದೆ. ಆದರೆ ಇದು ಐದು ವರ್ಷಗಳ ಹಿಂದಿನ ಸಂಖ್ಯೆಗೆ ಹೋಲಿಸಿದರೆ ಶೇಕಡ 4ರಷ್ಟು ಕಡಿಮೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News