ಅಮಾನತುಗೊಂಡ ಸಂಸದರಿಗೆ ಷರತ್ತು ವಿಧಿಸಿ ಲೋಕಸಭಾ ಸಚಿವಾಲಯ ಸುತ್ತೋಲೆ

Update: 2023-12-21 04:36 GMT

Photo: PTI 

 ಹೊಸದಿಲ್ಲಿ: ಲೋಕಸಭೆ ಹಾಗೂ ರಾಜ್ಯ ಸಭೆಯ ಒಟ್ಟು 141 ಸಂಸದರನ್ನು ಅಮಾನತುಗೊಳಿಸಿದ ಬಳಿಕ ಲೋಕಸಭಾ ಸೆಕ್ರೇಟರಿಯೇಟ್ ಸುತ್ತೋಲೆ ಜಾರಿಗೊಳಿಸಿ ಅವರಿಗೆ ಕೆಲವು ಷರತ್ತುಗಳನ್ನು ವಿಧಿಸಿದೆ.

‘‘ಅಮಾನತಿನಿಂದಾಗಿ ಕೆಳಗಿನ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಹಾಗೂ ಇದು ಅಮಾನತಿನ ಅವಧಿಯಲ್ಲಿ ಜಾರಿಯಲ್ಲಿರುತ್ತವೆ: ಅಮಾನತುಗೊಂಡ ಸಂಸದರು ಸಂಸತ್ತಿನ ಚೇಂಬರ್, ಲಾಬಿ ಹಾಗೂ ಗ್ಯಾಲರಿಗೆ ಪ್ರವೇಶಿಸುವಂತಿಲ್ಲ. ಅವರು ಸದಸ್ಯರಾಗಿರುವ ಸಂಸದೀಯ ಸಮಿತಿಗಳ ಸಭೆಗಳಿಂದಲೂ ಅಮಾನತುಗೊಳಿಸಲಾಗಿದೆ. ಅವರ ಹೆಸರಿನಲ್ಲಿ ಯಾವುದೇ ವಸ್ತುವನ್ನು ಇರಿಸುವಂತಿಲ್ಲ’’ ಎಂದು ಲೋಕಸಭೆಯ ಸುತ್ತೋಲೆಯಲ್ಲಿ ಹೇಳಲಾಗಿದೆ.

‘‘ಅಮಾನತಿನ ಅವಧಿಯಲ್ಲಿ ಅವರು ಮಂಡಿಸಿದ ಯಾವುದೇ ಸೂಚನೆ ಸ್ವೀಕಾರಾರ್ಹವಲ್ಲ. ಅವರು ತಮ್ಮ ಅಮಾನತು ಅವಧಿಯಲ್ಲಿ ಸಮಿತಿಗಳಿಗೆ ನಡೆಯುವ ಚುನಾವಣೆಯಲ್ಲಿ ಮತ ಹಾಕುವಂತಿಲ್ಲ. ಅಮಾನತಿನ ಅವಧಿಯಲ್ಲಿ ಅವರು ದೈನಂದಿನ ಭತ್ಯೆಗೆ ಅರ್ಹರಾಗಿರುವುದಿಲ್ಲ’’ ಎಂದು ಸುತ್ತೋಲೆ ಹೇಳಿದೆ.

ಸಂಸತ್ತಿನ ಭದ್ರತಾ ಉಲ್ಲಂಘನೆ ಘಟನೆ ಕುರಿತಂತೆ ಕೇಂದ್ರ ಸಚಿವ ಅಮಿತ್ ಶಾ ಅವರು ಹೇಳಿಕೆ ನೀಡುವಂತೆ ಆಗ್ರಹಿಸಿ ಪ್ರತಿಪಕ್ಷದ ಸಂಸದರು ದಾಂಧಲೆ ನಡೆಸಿದ ಆರೋಪದಲ್ಲಿ ಲೋಕಸಭೆಯಿಂದ 95 ಹಾಗೂ ರಾಜ್ಯ ಸಭೆಯಿಂದ 46 ಹೀಗೆ ಒಟ್ಟು 141 ಸಂಸದರನ್ನು ಅಮಾನತುಗೊಳಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News