ಮಧ್ಯಪ್ರದೇಶ: ದಲಿತ ವ್ಯಕ್ತಿಯನ್ನು ಥಳಿಸಿ ಹತ್ಯೆಗೈದು, ಆತನ ತಾಯಿಯನ್ನು ವಿವಸ್ತ್ರಗೊಳಿಸಿದ ಪ್ರಕರಣ; 8 ಮಂದಿಯ ಬಂಧನ
ಭೋಪಾಲ್: 2019 ರಲ್ಲಿ ದಾಖಲಿಸಿದ್ದ ಲೈಂಗಿಕ ಕಿರುಕುಳ ಪ್ರಕರಣವನ್ನು ಹಿಂತೆಗೆದುಕೊಳ್ಳುವ ವಿಚಾರಕ್ಕೆ ಸಂಬಂಧಿಸಿ ದಲಿತ ವ್ಯಕ್ತಿ ಹಾಗೂ ಆರೋಪಿ ನಡುವೆ ವಾಗ್ವಾದ ನಡೆದ ನಂತರ ದಲಿತ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆಯು ಗುರುವಾರ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ನಡೆದಿದೆ.
18 ವರ್ಷದ ನಿತಿನ್ ಅಹಿರ್ವಾರ್, ತನ್ನ ಸಹೋದರಿ ದಾಖಲಿಸಿದ್ದ ಲೈಂಗಿಕ ಕಿರುಕುಳ ಪ್ರಕರಣವನ್ನು ಹಿಂಪಡೆಯಲು ನಿರಾಕರಿಸಿದ ಕಾರಣ ಅವರನ್ನು ಥಳಿಸಿ ಕೊಲ್ಲಲಾಗಿದೆ. ದೂರು ಹಿಂಪಡೆಯುವಂತೆ ಆರೋಪಿಯು ನಿತಿನ್ ಸಹೋದರಿಯ ಮೇಲೆ ಒತ್ತಡ ಹೇರುತ್ತಿದ್ದ.
ಆರೋಪಿ ವಿಕ್ರಮ್ ಸಿಂಗ್ ಠಾಕೂರ್ ಮೊದಲು ನಿತಿನ್ ಮನೆಯನ್ನು ಧ್ವಂಸಗೊಳಿಸಿ ನಂತರ ಆತನನ್ನು ಕೊಲೆ ಮಾಡಿದ್ದ. ಸಂತ್ರಸ್ತೆಯ ತಾಯಿ ಮಧ್ಯಪ್ರವೇಶಿಸಲು ಬಂದಾಗ, ಅವರನ್ನು ವಿವಸ್ತ್ರಗೊಳಿಸಿದ್ದ.
ಪ್ರಮುಖ ಆರೋಪಿ ಸೇರಿದಂತೆ ಎಂಟು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಗ್ರಾಮದ ಮುಖಂಡರ ಪತಿ ಸೇರಿದಂತೆ ಕೆಲ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಅವರನ್ನು ಬಂಧಿಸಲು ಪೊಲೀಸ್ ತಂಡಗಳು ವಿವಿಧೆಡೆ ಶೋಧ ನಡೆಸುತ್ತಿವೆ
ಆರೋಪಿಗಳಾದ ಕೋಮಲ್ ಸಿಂಗ್, ವಿಕ್ರಮ್ ಸಿಂಗ್ ಹಾಗೂ ಆಝಾದ್ ಸಿಂಗ್ ತಮ್ಮ ಮನೆಗೆ ಬಂದು ಲೈಂಗಿಕ ಕಿರುಕುಳ ಪ್ರಕರಣವನ್ನು ಹಿಂಪಡೆಯುವಂತೆ ಮನವೊಲಿಸಿದ್ದರು. ಆದರೆ, ನನ್ನ ತಾಯಿ ನಿರಾಕರಿಸಿದಾಗ ಆಕೆಗೆ ಬೆದರಿಕೆ ಹಾಕಿ ನಮ್ಮ ಮನೆಯನ್ನು ಧ್ವಂಸಗೊಳಿಸಿದ್ದಾರೆ ಎಂದು ಮೃತ ನಿತಿನ್ ಸಹೋದರಿ ಹೇಳಿದ್ದಾರೆ.
ಮೂವರು ನಮ್ಮ ಮನೆಯಿಂದ ಹೊರಬಂದು ಗ್ರಾಮದ ಬಸ್ ನಿಲ್ದಾಣದ ಬಳಿ ನಿತಿನ್ ನನ್ನು ಭೇಟಿಯಾಗಿ ಥಳಿಸಲು ಆರಂಭಿಸಿದರು. ನನ್ನ ತಾಯಿ ಮಧ್ಯಪ್ರವೇಶಿಸಲು ಅಲ್ಲಿಗೆ ಹೋದಾಗ, ಆರೋಪಿಗಳು ತಾಯಿಯ ಮೇಲೂ ಹಲ್ಲೆ ನಡೆಸಿ ವಿವಸ್ತ್ರಗೊಳಿಸಿದರು. ಅವರನ್ನು ಬಿಟ್ಟುಬಿಡಿ ಎಂದು ನಾನು ಅಂಗಲಾಚಿದೆ. ಆದರೆ, ನನ್ನ ಮೇಲೆ ಅತ್ಯಾಚಾರ ಮಾಡುವುದಾಗಿ ಅವರು ಬೆದರಿಕೆ ಹಾಕಿದ್ದಾರೆ. ನಾನು ಕಾಡಿನೊಳಗೆ ಓಡಿ ಪೊಲೀಸರನ್ನು ಸಹಾಯಕ್ಕಾಗಿ ಕರೆದಿದ್ದೇನೆ ಎಂದು ನಿತಿನ್ ಸಹೋದರಿ ಬಹಿರಂಗಪಡಿಸಿದ್ದಾರೆ