ಶಿವಸೇನೆಯ 40 ಶಾಸಕರು, ಉದ್ಧವ್ ಬಣದ 14 ಶಾಸಕರಿಗೆ ನೋಟಿಸ್ ಜಾರಿ ಮಾಡಿದ ಮಹಾರಾಷ್ಟ್ರ ಸ್ಪೀಕರ್
ಮುಂಬೈ: ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ 40 ಶಾಸಕರು ಹಾಗೂ ಉದ್ಧವ್ ಠಾಕ್ರೆ ಬಣದ 14 ಶಾಸಕರಿಗೆ ತಮ್ಮ ವಿರುದ್ಧದ ಅನರ್ಹತೆ ಅರ್ಜಿಗಳಿಗೆ ಉತ್ತರ ನೀಡುವಂತೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್ ಶನಿವಾರ ಹೇಳಿದ್ದಾರೆ.
ಭಾರತೀಯ ಚುನಾವಣಾ ಆಯೋಗದಿಂದ ಶಿವಸೇನೆಯ ಸಂವಿಧಾನದ ಪ್ರತಿಯನ್ನು ಸ್ವೀಕರಿಸಿದ್ದೇನೆ. ಸಿಎಂ ಶಿಂಧೆ ಸೇರಿದಂತೆ 16 ಶಿವಸೇನೆ ಶಾಸಕರ ವಿರುದ್ಧದ ಅನರ್ಹತೆ ಅರ್ಜಿಗಳ ವಿಚಾರಣೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ನಾರ್ವೇಕರ್ ಹೇಳಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ.
ಏಕನಾಥ್ ಶಿಂಧೆ-ಶಿವಸೇನೆ ಬಣದ 40, ಉದ್ಧವ್ ಠಾಕ್ರೆ ಬಣದ 14 ಶಾಸಕರಿಗೆ ಅನರ್ಹತೆಗೆ ಉತ್ತರ ಕೋರಿ ನೋಟಿಸ್ ನೀಡಲಾಗಿದೆ ಎಂದು ನಾರ್ವೇಕರ್ ಪಿಟಿಐಗೆ ತಿಳಿಸಿದ್ದಾರೆ
ಈ ವಾರದ ಆರಂಭದಲ್ಲಿ, ಶಿವಸೇನೆ (ಯುಬಿಟಿ) ಅನರ್ಹತೆ ಅರ್ಜಿಗಳನ್ನು ತ್ವರಿತವಾಗಿ ಆಲಿಸಲು ಅಸೆಂಬ್ಲಿ ಸ್ಪೀಕರ್ ಗೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್ ಗೆ ಮೊರೆ ಹೋಗಿತ್ತು.
ಕಳೆದ ವರ್ಷ ಶಿಂಧೆ ಮತ್ತು ಇತರ 15 ಶಾಸಕರು ಬಂಡಾಯವೆದ್ದು ಜೂನ್ 2022 ರಲ್ಲಿ ಹೊಸ ಸರಕಾವನ್ನು ರಚಿಸಲು ಬಿಜೆಪಿಯೊಂದಿಗೆ ಕೈಜೋಡಿಸಿದ ನಂತರ ಬಂಡಾಯ ಶಾಸಕರ ವಿರುದ್ಧ ಶಾಸಕ ಸುನೀಲ್ ಪ್ರಭು ಅವರು ಅವಿಭಜಿತ ಶಿವಸೇನೆಯ ಮುಖ್ಯ ಸಚೇತಕರಾಗಿ ಅನರ್ಹತೆ ಅರ್ಜಿಯನ್ನು ಸಲ್ಲಿಸಿದ್ದರು.