ಉತ್ತರಪ್ರದೇಶ: ಕಳ್ಳನೆಂದು ಶಂಕಿಸಿ ವ್ಯಕ್ತಿಯೋರ್ವನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಥಳಿತ
Update: 2024-11-30 05:03 GMT
ಲಕ್ನೋ: ಉತ್ತರಪ್ರದೇಶದ ಗೋರಖ್ ಪುರದಲ್ಲಿ ಕಳ್ಳನೆಂದು ಶಂಕಿಸಿ ವ್ಯಕ್ತಿಯೋರ್ವನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿರುವ ಆಘಾತಕಾರಿ ಘಟನೆ ನಡೆದಿದೆ.
ದಿಯೋರಿಯಾ ಜಿಲ್ಲೆಯ ತರ್ಕುಲ್ವಾ ಗ್ರಾಮದಲ್ಲಿನ ಕಲ್ಯಾಣ ಮಂಟಪವೊಂದರಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವ್ಯಕ್ತಿಯೋರ್ವ ಕುಡಿದ ಮತ್ತಿನಲ್ಲಿ ದಾರಿ ತಪ್ಪಿ ಮನೆಯೊಂದರ ಬಾಗಿಲು ಬಡಿದಿದ್ದಾನೆ. ಕಳ್ಳನೆಂದು ಶಂಕಿಸಿ ಮನೆಮಂದಿ ʼಕಳ್ಳʼ, ʼಕಳ್ಳʼ ಎಂದು ಕೂಗಿದ್ದಾರೆ. ಈ ವೇಳೆ ಜಮಾಯಿಸಿದ ಜನ ಆತನನ್ನು ವಿದ್ಯತ್ ಕಂಬಕ್ಕೆ ಕಟ್ಟಿ ಹಾಕಿ ಮನಬಂದಂತೆ ಥಳಿಸಿದ್ದಾರೆ. ಘಟನೆಯಲ್ಲಿ ಆತ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಹೇಳಲಾಗಿದೆ. ಸ್ಥಳೀಯರು ಹಲ್ಲೆಯ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದು ವೈರಲ್ ಮಾಡಿದ್ದಾರೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ತೀವ್ರ ಗಾಯಗೊಂಡಿದ್ದ ವ್ಯಕ್ತಿಯನ್ನು ರಕ್ಷಿಸಿ ಪೊಲೀಸ್ ಠಾಣೆಗೆ ಕರೆದೊಯ್ದು ಬಳಿಕ ಆತನನ್ನು ಮನೆಯವರ ಜೊತೆ ಕಳುಹಿಸಿಕೊಟ್ಟಿದ್ದಾರೆ.