ತೆಲಂಗಾಣ: ಸ್ಥಳೀಯ ಸಂಸ್ಥೆಗೆ ಸ್ಪರ್ಧಿಸಲು ಎರಡು ಮಕ್ಕಳ ಮಿತಿ ನಿಯಮ ರದ್ದು
ಹೈದರಾಬಾದ್: ಗರಿಷ್ಠ ಎರಡು ಮಕ್ಕಳನ್ನು ಹೊಂದಿರುವವರು ಮಾತ್ರ ಸ್ಥಳೀಯ ಸಂಸ್ಥೆ ಚುನಾವಣೆಗೆ ಸ್ಪರ್ಧಿಸಬಹುದು ಎಂಬ ನಿಯಮವನ್ನು ತೆಲಂಗಾಣ ರಾಜ್ಯ ಸರ್ಕಾರ ರದ್ದುಪಡಿಸಿದೆ. ನೆರೆಯ ಆಂಧ್ರಪ್ರದೇಶದಲ್ಲಿ ಈ ನಿಮಯವನ್ನು ರದ್ದುಪಡಿಸಿದ ಬೆನ್ನಲ್ಲೇ, ತೆಲಂಗಾಣ ಪಂಚಾಯತ್ ರಾಜ್ ಕಾಯ್ದೆ-2018ಕ್ಕೆ ತಿದ್ದುಪಡಿ ತರಲು ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಮಂಡಿಸಲು ತೆಲಂಗಾಣ ಸರ್ಕಾರ ಮುಂದಾಗಿದೆ.
ರಾಜ್ಯದಲ್ಲಿ ಸಂತಾನೋತ್ಪತ್ತಿ ದರ ಕುಸಿಯುತ್ತಿರುವ ಮತ್ತು ಬದಲಾದ ಸಾಮಾಜಿಕ-ಆರ್ಥಿಕ ಪರಿಸ್ಥಿತಿ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಸರ್ಕಾರ ಇತ್ತೀಚೆಗೆ ಎರಡು ಮಕ್ಕಳ ನೀತಿಯನ್ನು ರದ್ದುಪಡಿಸಿತ್ತು. ಜನಸಂಖ್ಯೆ ನಿಯಂತ್ರಣ ಸಾಧಿಸುವಲ್ಲಿ ಉತ್ತಮ ಸಾಧನೆ ಮಾಡಿರುವ ಈ ದಕ್ಷಿಣ ರಾಜ್ಯಗಳು ತಮ್ಮ ಒಳ್ಳೆ ಕೆಲಸಕ್ಕೆ ಶಿಕ್ಷೆ ವಿಧಿಸಲಾಗಿದೆ ಎಂಬ ಭಾವನೆ ಹೊಂದಿದ್ದವು.
ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ನಡುವಿನ ನಿಯಮಗಳ ವ್ಯತ್ಯಾಸದ ವಿರುದ್ಧ ಜನ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ನಗರ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರು ಸ್ಪರ್ಧಿಸಬಹುದಾದರೆ, ಅದೇ ಹಕ್ಕನ್ನು ಏಕೆ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ನಿರಾಕರಿಸಲಾಗುತ್ತಿದೆ ಎಂದು ಗ್ರಾಮೀಣರು ಪ್ರಶ್ನಿಸುತ್ತಿದ್ದಾರೆ. ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ನ್ಯಾಯಾಲಯ ಆದೇಶ ನೀಡಿದೆ ಎಂದು ಸಿಎಂ ರೇವನಾಥ ರೆಡ್ಡಿ ಹೇಳಿದ್ದಾಗಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.