ಜೀವಾವಧಿ ಶಿಕ್ಷೆಗೆ ಗುರಿಯಾದ ಶತಾಯುಷಿ ಬಿಡುಗಡೆಗೆ ಸುಪ್ರೀಂ ಆದೇಶ
ಹೊಸದಿಲ್ಲಿ: ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಅಸಹಕಾರ ಚಳವಳಿ ಆರಂಭಿಸಿದ ವರ್ಷವಾದ 1920ರಲ್ಲಿ ಮಾಲ್ಡಾ ಜಿಲ್ಲೆಯ ಗ್ರಾಮವೊಂದರಲ್ಲಿ ಜನಿಸಿದ ವ್ಯಕ್ತಿಯೊಬ್ಬರು ನೂರು ವರ್ಷ ದಾಟಿದ ಕಾರಣಕ್ಕೆ ಜೈಲಿನಿಂದ ಬಿಡುಗಡೆ ಮಾಡುವಂತೆ ಕೋರಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂಕೋರ್ಟ್ ಪುರಸ್ಕರಿಸಿ ಶತಾಯುಷಿಯ ಬಿಡುಗಡೆಗೆ ಆದೇಶ ನೀಡಿದೆ.
1988ರ ಹತ್ಯೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 1994ರಲ್ಲಿ 68 ವರ್ಷ ವಯಸ್ಸಾಗಿದ್ದ ರಸಿಕ್ಚಂದ್ರ ಮಂಡಲ್ಗೆ ಜೀವಾವಧಿ ಶಿಕ್ಷೆಯಾಗಿತ್ತು. ಆದರೆ ಆ ಬಳಿಕ ವಯೋಸಂಬಂಧಿ ಸಮಸ್ಯೆಗಳ ಕಾರಣದಿಂದ ಈತನನ್ನು ಜೈಲಿನಿಂದ ಪಶ್ಚಿಮ ಬಂಗಾಳದ ಬಲೂರ್ ಘಾಟ್ ನಲ್ಲಿರುವ ಸುಧಾರಣಾಗೃಹಕ್ಕೆ ಕಳುಹಿಸಲಾಗಿತ್ತು. ಶಿಕ್ಷೆ ರದ್ದುಪಡಿಸುವಂತೆ ಕೋರಿ ಆತ ಸಲ್ಲಿಸಿದ್ದ ಅರ್ಜಿಯನ್ನು 2018ರಲ್ಲಿ ಪಶ್ಚಿಮ ಬಂಗಾಳ ಹೈಕೋರ್ಟ್ ಮತ್ತು ಆ ಬಳಿಕ ಸುಪ್ರೀಂಕೋರ್ಟ್ ರದ್ದುಪಡಿಸಿತ್ತು.
2020ರಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿ, ನೂರು ವರ್ಷವಾಗಲು ಒಂದು ವರ್ಷ ಮಾತ್ರ ಬಾಕಿ ಇದ್ದು, ವೃದ್ಧಾಪ್ಯ ಹಾಗೂ ವೃದ್ಧಾಪ್ಯ ಸಂಬಂಧಿ ಸಮಸ್ಯೆಗಳ ಕಾರಣಕ್ಕೆ ಅವಧಿಪೂರ್ವದಲ್ಲೇ ಜೈಲಿನಿಂದ ಬಿಡುಗಡೆ ಮಾಡಬೇಕು ಎಂದು ಕೋರಿದ್ದ. ಪರೋಲ್ ಅಥವಾ ಶಿಕ್ಷೆ ಉಪಶಮನಕ್ಕೆ ಅರ್ಹತೆ ಪಡೆಯಲು ಕನಿಷ್ಠ 14 ವರ್ಷ ಸೆರೆಮನೆಯಲ್ಲಿ ಕಳೆದಿರಬೇಕು ಎಂಬ ನಿಯಮ ಸಡಿಲಿಸುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.
ಅಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿದ್ದ ಅಬ್ದುಲ್ ನಜೀರ್ ಮತ್ತು ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು 2021ರ ಮೇ 7ರಂದು ಪಶ್ಚಿಮ ಬಂಗಾಳ ಸರ್ಕಾರಕ್ಕೆ ನೋಟಿಸ್ ನೀಡಿ, 2019ರ ಜನವರಿ 14ರಿಂದ ಜೈಲಿನಲ್ಲಿರುವ ಮಂಡಲ್ ಅವರ ದೈಹಿಕ ಮತ್ತು ಆರೋಗ್ಯ ಸ್ಥಿತಿ ಬಗ್ಗೆ ವರದಿ ನೀಡುವಂತೆ ಸೂಚಿಸಿದ್ದರು. ಇದೀಗ ಸಿಜೆಐ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರನ್ನೊಳಗೊಂಡ ಪೀಠದ ಮುಂದೆ ಹಾಜರಾದ ಪಶ್ಚಿಮ ಬಂಗಾಳ ಸರ್ಕಾರದ ಪರ ವಕೀಲರಾದ ಆಸ್ಥಾ ಶರ್ಮಾ, 104ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲು ಸಜಾಗಿರುವ ಮಂಡಲ್ ಅವರಿಗೆ ವಯೋಸಂಬಂಧಿ ಅಸ್ವಸ್ಥತೆ ಹೊರತುಪಡಿಸಿ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಿದ್ದರು. ಅರ್ಜಿದಾರರ ವಯಸ್ಸಿನ ಆಧಾರದಲ್ಲಿ ಮಧ್ಯಂತರ ಆದೇಶ ಹೊರಡಿಸಿದ ಸುಪ್ರೀಂಕೋರ್ಟ್, ಮಂಡಲ್ ನನ್ನು ಮಧ್ಯಂತರ ಜಾಮೀಜು/ ಪರೋಲ್ ನಲ್ಲಿ ಬಿಡುಗಡೆ ಮಾಡುವಂತೆ ಸೂಚಿಸಿದೆ.