ಮಣಿಪುರ: ಇಂಫಾಲ ಬಂದ್; ಸಾಮಾನ್ಯ ಜನಜೀವನ ಅಸ್ತವ್ಯಸ್ತ

Update: 2023-09-19 16:52 GMT

ಸಾಂದರ್ಭಿಕ ಚಿತ್ರ.| Photo: PTI

ಇಂಫಾಲ: ಶಸ್ತ್ರಾಸ್ತ್ರಗಳನ್ನು ಸಾಗಿಸಿದ ಹಾಗೂ ಕೆಮೊಫ್ಲಾಗ್ ಸಮವಸ್ತ್ರ ಧರಿಸಿದ ಆರೋಪದಲ್ಲಿ ಬಂಧಿತರಾಗಿರುವ ಐವರು ಯುವಕರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಮೈತೈ ಮಹಿಳಾ ಸಮೂಹ ‘ಮೈರಾ ಪೈಬಿ’ ಹಾಗೂ 5 ಸ್ಥಳೀಯ ಕ್ಲಬ್ ಗಳು ಸೋಮವಾರ ಕರೆ ನೀಡಿದ 48 ಗಂಟೆಗಳ ಬಂದ್ ಹಿನ್ನಲೆಯಲ್ಲಿ ಇಂಫಾಲ ಜಿಲ್ಲೆಯಲ್ಲಿ ಮಂಗಳವಾರ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದೆ.

ಬಂದ್ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ಮಾರುಕಟ್ಟೆ ಹಾಗೂ ವಾಣಿಜ್ಯ ಸಂಕೀರ್ಣಗಳು ಮುಚ್ಚಿದ್ದವು. ರಸ್ತೆಯಲ್ಲಿ ವಾಹನಗಳ ಸಂಚಾರ ವಿರಳವಾಗಿತ್ತು. ಮಂಗಳವಾರ ಹಾಗೂ ಬುಧವಾರ ನಡೆಯಲಿದ್ದ ಮಣಿಪುರ ಸೆಕೆಂಡರಿ ಎಜುಕೇಶನ್ ಬೋರ್ಡ್ ನ 10ನೇ ತರಗತಿಯ ಎಲ್ಲಾ ಪೂರಕ ಪರೀಕ್ಷೆಗಳನ್ನು ರದ್ದುಗೊಳಿಸಲಾಯಿತು.

ಯುವಕರನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಮೈರಾ ಪೈಬಿಸ್ ಸೋಮವಾರ ಇಂಫಾಲ ಪೂರ್ವ ಜಿಲ್ಲೆಯ ಖುರೈ ಹಾಗೂ ಕೊಂಗ್ಬಾ, ಪಶ್ಚಿಮ ಜಿಲ್ಲೆಯ ಕಕ್ವಾ, ಬಿಷ್ಣುಪುರ ಜಿಲ್ಲೆಯ ನಂಬೋಲ್ ಹಾಗೂ ಥೌಬಾಲ್ ಜಿಲ್ಲೆಯ ವಿವಿಧ ಭಾಗಗಳ ಹಲವು ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ತಡೆ ಒಡ್ಡಿತು.

ಅತ್ಯಾಧುನಿಕ ಶಸ್ತ್ರಾಸ್ತ್ರ ಸಾಗಿಸಿದ ಹಾಗೂ ಕ್ಯಾಮೊಫ್ಲೇಗ್ ಸಮವಸ್ತ್ರ ಧರಿಸಿದ ಆರೋಪದಲ್ಲಿ ಮಣಿಪುರ ಪೊಲೀಸರು ಐವರನ್ನು ಶನಿವಾರ ಬಂಧಿಸಿದ್ದರು ಹಾಗೂ ನ್ಯಾಯಾಂಗ ದಂಡಾಧಿಕಾರಿ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಂಗ ದಂಡಾಧಿಕಾರಿ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘‘ಬಂಧಿತ ಐವರು ಯುವಕರು ನಾಗರಿಕರು. ಭದ್ರತಾ ಪಡೆಗಳು ತಮ್ಮ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ವಿಫಲರಾಗಿರುವುದರಿಂದ ಕುಕಿ ರೆ ಉಗ್ರರ ದಾಳಿಯಿಂದ ತಮ್ಮ ಗ್ರಾಮಗಳನ್ನು ರಕ್ಷಿಸುತ್ತಿರುವ ಗ್ರಾಮ ಸ್ವಯಂ ಸೇವಕರಾಗಿದ್ದಾರೆ. ಅವರನ್ನು ಯವುದೇ ಷರತ್ತುಗಳಲ್ಲದೇ ಬಿಡುಗಡೆ ಮಾಡುವಂತೆ ನಾವು ಆಗ್ರಹಿಸುತ್ತೇವೆ” ಎಂದು ಆಲ್ ಲಂಗ್ತಾಬಾಲ್ ಕೇಂದ್ರ ಯುನೈಟಡ್ ಕ್ಲಬ್ ನ ಸಮನ್ವಯ ಸಮಿತಿಯ ಅಧ್ಯಕ್ಷ ಯಮ್ನಾಮ್ ಹಿಟ್ಲರ್ ಹೇಳಿದ್ದಾರೆ.

‘‘ಐವರು ಯುವಕರನ್ನು ಬಿಡುಗಡೆ ಮಾಡಲು ಸರಕಾರ ವಿಫಲವಾದರೆ, ಚಳುವಳಿ ತೀವ್ರಗೊಳ್ಳಲಿದೆ” ಎಂದು ಯಮ್ನಾನ್ ಎಚ್ಚರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News