ಮಣಿಪುರ ಹೊತ್ತಿ ಉರಿಯುತ್ತಿದೆ, ಬಿಜೆಪಿ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದೆ: ಮಲ್ಲಿಕಾರ್ಜುನ ಖರ್ಗೆ
ಹೊಸದಿಲ್ಲಿ: ಮಣಿಪುರ ಹೊತ್ತಿ ಉರಿಯುತ್ತಿದೆ. ಆದರೆ, ಬಿಜೆಪಿ ಇತರ ರಾಜ್ಯಗಳಲ್ಲಿ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ ಆರೋಪಿಸಿದ್ದಾರೆ. ಹೊಸದಿಲ್ಲಿಯ ತಾಲಕ್ಟೋರಾ ಕ್ರೀಡಾಂಗಣದಲ್ಲಿ ಮಹಿಳಾ ಕಾಂಗ್ರೆಸ್ ಸದಸ್ಯರು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಪಕ್ಷದ ನಾಯಕಿಯರು ಕಷ್ಟಪಟ್ಟು ಕೆಲಸ ಮಾಡಬೇಕು ಹಾಗೂ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸರಕಾರವನ್ನು ಅಧಿಕಾರದಿಂದ ಕಿತ್ತೊಗೆಯಬೇಕು ಎಂದರು.
‘‘ರಾಹುಲ್ ಗಾಂಧಿ ಅವರಿಗೆ ಮಣಿಪುರಕ್ಕೆ ಭೇಟಿ ನೀಡಲು ಸಾಧ್ಯವಾಗುವುದಾದರೆ, ಪ್ರಧಾನಿ ಅವರಿಗೆ ಭೇಟಿ ನೀಡಲು ಯಾಕೆ ಸಾಧ್ಯವಾಗುವುದಿಲ್ಲ? ಮಣಿಪುರದಲ್ಲಿ ಮಹಿಳೆಯರಿಗೆ ಬಿಜೆಪಿ ಯಾವ ರಕ್ಷಣೆ ನೀಡಿದೆ? ಅಲ್ಲಿನ ಮಹಿಳೆಯರು ಮನೆಯಿಂದ ಪರಾರಿಯಾಗುತ್ತಿದ್ದಾರೆ, ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ, ಹತ್ಯೆಯಾಗುತ್ತಿದ್ದಾರೆ. ಆದರೆ, ಬಿಜೆಪಿ ಇತರ ರಾಜ್ಯಗಳಲ್ಲಿ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದೆ’’ ಎಂದು ಖರ್ಗೆ ಹೇಳಿದರು.
‘‘2024ರ ಚುನಾವಣೆ ಕಾರ್ಯತಂತ್ರದ ಬಗ್ಗೆ ನಮ್ಮ ಪಕ್ಷದ ಮಹಿಳಾ ಕಾರ್ಯಕರ್ತರು ಚರ್ಚೆ ನಡೆಸಲಿದ್ದಾರೆ. ಮುಂದಿನ ವರ್ಷ ಅವರು ಬಿಜೆಪಿ ಸರಕಾರವನ್ನು ಕಿತ್ತೊಗೆಯಲಿದ್ದಾರೆ ಎಂಬುದು ನಾನು ಖಚಿತವಾಗಿ ಹೇಳುತ್ತೇನೆ’’ ಎಂದು ಖರ್ಗೆ ತಿಳಿಸಿದರು. ಮಣಿಪುರದಲ್ಲಿ ನಡೆಯುತ್ತಿರುವ ದೌರ್ಜನ್ಯದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಮೌನವಾಗಿದ್ದಾರೆ. ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿದ ಬಳಿಕವಷ್ಟೇ ಅವರು ಈ ವಿಷಯದ ಕುರಿತು ಸಂಸತ್ತಿನಲ್ಲಿ ಮಾತನಾಡಿದ್ದಾರೆ ಎಂದು ಅವರು ಹೇಳಿದ್ದಾರೆ.
‘‘ಗಲಭೆಗಳು ದೇಶಾದ್ಯಂತ ನಡೆಯುತ್ತಿರುತ್ತವೆ. ಮಣಿಪುರದಲ್ಲಿ ನಡೆಯುತ್ತಿರುವ ದೌರ್ಜನ್ಯದ ಕುರಿತು ಮಾತನಾಡುವಂತೆ ನಾವು ಪ್ರಧಾನಿ ಅವರಲ್ಲಿ ಮನವಿ ಮಾಡಿದ್ದೆವು. ಆದರೆ, ನಾವು ಅವಿಶ್ವಾಸ ನಿರ್ಣಯ ಮಂಡಿಸಿದ ಬಳಿಕವಷ್ಟೇ ಅವರು ಮಾತನಾಡಿದರು. ಮಣಿಪುರದಲ್ಲಿ ಹಲವು ಜನರು ಸಾವನ್ನಪ್ಪಿದ್ದಾರೆ. ಹಲವು ಮನೆಗಳು ಬೆಂಕಿಗಾಹುತಿಯಾಗಿವೆ, ಸಾವಿರಾರು ಜನರು ನಿರ್ವಸಿತರಾಗಿದ್ದಾರೆ. ಆದರೂ ಪ್ರಧಾನಿ ಅವರು ಈ ಕುರಿತು ಇದುವರೆಗೆ ಮಾತನಾಡಿಲ್ಲ’’ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.