ಮಣಿಪುರ: ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ; ಜಿಲ್ಲಾಧಿಕಾರಿ ಕಚೇರಿ ಧ್ವಂಸ, 2 ವಾಹನಗಳಿಗೆ ಬೆಂಕಿ

Update: 2023-09-28 16:52 GMT

                                                                               Photo: PTI 

ಹೊಸದಿಲ್ಲಿ: ಇಬ್ಬರು ವಿದ್ಯಾರ್ಥಿಗಳ ಹತ್ಯೆ ಕುರಿತಂತೆ ಮಣಿಪುರದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ಗುರುವಾರ ಕೂಡ ಮುಂದುವರಿದಿದೆ. ಉದ್ರಿಕ್ತ ಗುಂಪು ಇಂಫಾಲ ಪಶ್ಚಿಮದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯನ್ನು ಧ್ವಂಸಗೊಳಿಸಿದೆ. ಎರಡು ವಾಹನಗಳಿಗೆ ಬೆಂಕಿ ಹಚ್ಚಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜುಲೈಯಲ್ಲಿ ನಾಪತ್ತೆಯಾದ ಇಬ್ಬರು ವಿದ್ಯಾರ್ಥಿಗಳ ಮೃತದೇಹಗಳ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಇಂಫಾಲದಲ್ಲಿ ಮಂಗಳವಾರ ವಿದ್ಯಾರ್ಥಿಗಳು ಪ್ರತಿಭಟನಾ ರ‍್ಯಾಲಿ ನಡೆಸಿದರು. ಅನಂತರ ಹಿಂಸಾಚಾರ ಭುಗಿಲೆದ್ದಿದೆ. ಹತ್ಯೆಯಾದ ಇಬ್ಬರು ವಿದ್ಯಾರ್ಥಿಗಳನ್ನು ಮೈತೈ ಸಮುದಾಯದ ಹಿಜಾಮ್ ಲಿಂತೋಯಿಂಗಾಂಬಿ (17) ಹಾಗೂ ಫಿಜಾಮ್ ಹೆಮ್ಜಿ (20) ಎಂದು ಗುರುತಿಸಲಾಗಿದೆ.

ಬುಧವಾರ ರಾತ್ರಿ ಉರಿಪೊಕ್, ಯೈಸ್ಕುಲ್, ಸಾಗೊಲ್‌ಬಾಂಡ್ ಹಾಗೂ ಟೆರಾ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪ್ರತಿಭಟನಕಾರರು ಹಾಗೂ ಭದ್ರತಾ ಪಡೆಗಳ ನಡುವೆ ಘರ್ಷಣೆ ನಡೆದಿದೆ.

ಜುಲೈಯಲ್ಲಿ ವಿದ್ಯಾರ್ಥಿಗಳ ನಾಪತ್ತೆ ಕುರಿತಂತೆ ಪ್ರಕರಣ ದಾಖಲಿಸಲಾಗಿತ್ತು. ಈಗ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲಾಗಿದೆ. ಸಿಬಿಐ ತಂಡ ಅಪರಾಧ ನಡೆದ ಸ್ಥಳಕ್ಕೆ ಭೇಟಿ ನೀಡಿ ಘಟನೆಯನ್ನು ಮರು ಸೃಷ್ಟಿಸಿದೆ. ವಿಧಿವಿಜ್ಞಾನದ ಪುರಾವೆಗಳನ್ನು ಸಂಗ್ರಹಿಸಿದೆ ಹಾಗೂ ಅದನ್ನು ಕೇಂದ್ರ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದೆ.

ಪ್ರತಿಭಟನಕಾರರು ಟಯರ್, ಬಂಡೆ ಹಾಗೂ ಕಬ್ಬಿಣದ ಪೈಪ್‌ಗಳನ್ನು ರಸ್ತೆ ಅಡ್ಡ ಇರಿಸಿ ಸಂಚಾರಕ್ಕೆ ತಡೆ ಒಡ್ಡಿದರು. ಪರಿಸ್ಥಿತಿ ನಿಯಂತ್ರಿಸಲು ಭದ್ರತಾ ಪಡೆಗಳು ಅಶ್ರುವಾಯು ಸೆಲ್‌ಗಳನ್ನು ಸಿಡಿಸಿದರು. ಅಂತಿಮವಾಗಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾದರು.

ಮಂಗಳವಾರದಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ 65 ಪ್ರತಿಭಟನಕಾರರು ಗಾಯಗೊಂಡಿದ್ದು, ಪ್ರತಿಭಟನೆ ಹಿಂಸಾತ್ಮಕವಾಗುತ್ತಿದ್ದಂತೆ ಇಂಫಾಲ ಪೂರ್ವ ಹಾಗೂ ಪಶ್ಚಿಮದಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ.

ಹಿಂಸಾಚಾರ ನಿಯಂತ್ರಿಸಲು ‘ಒಂದು ಪಡೆ, ಒಂದು ಜಿಲ್ಲೆ’:

ಮಣಿಪುರದಲ್ಲಿ ಹಿಂಸಾಚಾರವನ್ನು ನಿಯಂತ್ರಿಸಲು ಭದ್ರತಾ ಪಡೆಗಳ ನಡುವೆ ಉತ್ತಮ ಸಮನ್ವಯತೆಗಾಗಿ ಸರಕಾರ ‘ಒಂದು ಜಿಲ್ಲೆ, ಒಂದು ಪಡೆ’ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಸಾಧ್ಯತೆ ಇದೆ. ಈ ವ್ಯವಸ್ಥೆಯ ಪ್ರಕಾರ ಒಂದು ಅರಸೇನಾ ಪಡೆ ಒಂದು ಜಿಲ್ಲೆಯ ಕಾನೂನು ಹಾಗೂ ಸುವ್ಯವಸ್ಥೆಯನ್ನು ನಿಯಂತ್ರಿಸಲು ಹೊಣೆಗಾರನಾಗಿದೆ.

ಈ ಕ್ರಮವು ಮಣಿಪುರದಲ್ಲಿ ಭದ್ರತಾ ಪಡೆಗಳ ನಡುವಿನ ಸಂಘರ್ಷದ ಸಾಧ್ಯತೆಯನ್ನು ಕಡಿಮೆ ಮಾಡಲಿದೆ ಎಂದು ದಿಲ್ಲಿಯ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಅರೆ ಸೇನಾ ಪಡೆಯು ರಾಜ್ಯ ಪೊಲೀಸರೊಂದಿಗೆ ಸಂಯೋಜಿತವಾಗಿ ಕಾರ್ಯ ನಿರ್ವಹಿಸಲಿದೆ ಎಂದು ಅವರು ತಿಳಿಸಿದ್ದಾರೆ.

ಆದರೆ, ಇದಕ್ಕೆ ಸಂಬಂಧಿಸಿ ಇದುವರೆಗೆ ಅಧಿಕೃತ ಆದೇಶ ಹೊರಬಿದ್ದಿಲ್ಲ. ಈ ಆದೇಶ ಶೀಘ್ರ ಜಾರಿಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.

ರಾಕೇಶ್ ಬಲ್ವಾಲ್‌ರನ್ನು ಮತ್ತೆ ಮಣಿಪುರಕ್ಕೆ ವರ್ಗಾಯಿಸಿದ ಕೇಂದ್ರ:

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದ ನಡುವೆ ಕೇಂದ್ರ ಸರಕಾರ ಹಿರಿಯ ಐಪಿಎಸ್ ಅಧಿಕಾರಿ ರಾಕೇಶ್ ಬಲ್ವಾಲ್ ಅವರನ್ನು ಜಮ್ಮು ಹಾಗೂ ಕಾಶ್ಮೀರದಿಂದ ಮತ್ತೆ ಮಣಿಪುರ ಕೇಡರ್‌ಗೆ ವರ್ಗಾಯಿಸಿದೆ. ಬಲ್ವಾಲ್ ಅವರು 2012ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿ.

ರಾಕೇಶ್ ಬಲ್ವಾಲ್ ಅವರನ್ನು ಎಜಿಎಂಯುಟಿ ಕೇಡರ್‌ನಿಂದ ಮಣಿಪುರ ಕೇಡರ್‌ಗೆ ಅವಧಿಪೂರ್ವ ವಾಪಸಾತಿಗೆ ಗೃಹ ಸಚಿವಾಲಯದ ಪ್ರಸ್ತಾವಕ್ಕೆ ಸಂಪುಟದ ನೇಮಕಾತಿ ಸಮಿತಿ ಅನುಮೋದನೆ ನೀಡಿದೆ ಎಂದು ಅಧಿಕೃತ ಆದೇಶ ತಿಳಿಸಿದೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News