ಕುಕಿ ಸಮುದಾಯ ಕುರಿತು ಅಮಿತ್‌ ಶಾ ಹೇಳಿಕೆ ವಿರೋಧಿಸಿದ ಮಿಜೋ ಸಂಸದರ ಮೈಕ್‌ ಆಫ್!

Update: 2023-08-11 10:33 GMT

ಹೊಸದಿಲ್ಲಿ: ಮಣಿಪುರದ ಬುಡಕಟ್ಟು ಜನರನ್ನು ಮ್ಯಾನ್ಮಾರ್‌ನವರು ಎಂದು ಹೇಳುವುದು ತಪ್ಪು ಎಂದು ಹೇಳಲು ಯತ್ನಿಸಿದ ಮಿಜೋ ನ್ಯಾಷನಲ್‌ ಫ್ರಂಟ್‌ ಸಂಸದ ಕೆ ವನ್ಲಲ್ವೇನಾ ಅವರ ಮೈಕ್ರೋಫೋನ್‌ ಅನ್ನು ಸ್ವಿಚ್‌ ಆಫ್‌ ಮಾಡಿದ ಘಟನೆ ಗುರುವಾರ ರಾಜ್ಯಸಭೆಯಲ್ಲಿ ನಡೆದಿದೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಬುಧವಾರ ಲೋಕಸಭೆಯಲ್ಲಿ ಮಾಡಿದ ಭಾಷಣದಲ್ಲಿ ಅವರು ಮಣಿಪುರ ಹಿಂಸಾಚಾರ ಉಲ್ಲೇಖಿಸುವಾಗ ಮಿಜೋರಾಂನಿಂದ ವಲಸೆ ಬರುವವರನ್ನು ಉಲ್ಲೇಖಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿ ಗುರುವಾರ ಮಾತನಾಡಿದ ವನ್ಲಲ್ವೇನಾ “ನಾನೊಬ್ಬ ಬುಡಕಟ್ಟು ಸಂಸದ. ಮಾನ್ಯ ಗೃಹ ಸಚಿವರು ಮಣಿಪುರದ ಬುಡಕಟ್ಟು ಜನರು ಮ್ಯಾನ್ಮಾರ್‌ನವರು ಎಂದು ಹೇಳಿದರು. ನಾವು ಮ್ಯಾನ್ಮಾರ್‌ನವರು ಅಲ್ಲ. ನಾವು ಭಾರತೀಯರು. ಬ್ರಿಟಿಷರ ಆಡಳಿತಕ್ಕಿಂತಲೂ ಮುಂಚೆ ನಾವಿಲ್ಲೇ ಇದ್ದೆವು,” ಎಂದು ಹೇಳಿದರು.

ಅವರ ಹೇಳಿಕೆಯನ್ನು ಕಡತದಲ್ಲಿ ಸೇರಿಸದಂತೆ ನಂತರ ರಾಜ್ಯಸಭಾ ಸಭಾಪತಿ ಹೇಳಿದರು.

ನಂತರ ಮಾಧ್ಯಮವೊಂದರ ಜೊತೆ ಮಾತನಾಡಿದ ಸಂಸದ, ತಮ್ಮ ಪಕ್ಷ ಕೇಂದ್ರ ಸರ್ಕಾರವನ್ನು ಬೆಂಬಲಿಸುತ್ತದೆ, ಅವಿಶ್ವಾಸ ನಿರ್ಣಯವನ್ನು ಮಣಿಪುರ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ಪಕ್ಷ ಬೆಂಬಲಿಸುತ್ತದೆ. ಅದರ ಹೊರತಾಗಿ ನಮ್ಮ ಬೆಂಬಲ ಎನ್‌ಡಿಎಗೆ” ಎಂದು ಅವರು ಹೇಳಿದರು.

ಬುಧವಾರ ಮಣಿಪುರ ಕುರಿತ ಚರ್ಚೆಯಲ್ಲಿ ಮಾತನಾಡಿದ್ದ ಶಾ, ಮ್ಯಾನ್ಮಾರ್‌ನಲ್ಲಿ 2021ರಲ್ಲಿ ನಡೆದ ಮಿಲಿಟರಿ ಕ್ಷಿಪ್ರ ಕ್ರಾಂತಿಯಲ್ಲಿ ಕೂಕಿ ಡೆಮಾಕ್ರೆಟಿಕ್‌ ಫ್ರಂಟ್‌ ಎಂಬ ಸಂಘಟನೆ ಮಿಲಿಟರಿ ನಾಯಕತ್ವದ ವಿರುದ್ಧ ಹೋರಾಡಿತ್ತು. ಅಲ್ಲಿನ ಸಮಸ್ಯೆಯಿಂದಾಗಿ ಮ್ಯಾನ್ಮಾರ್‌ನಿಂದ ಮಣಿಪುರಕ್ಕೆ ಹಲವಾರು ಕೂಕಿಗಳು ಬಂದಿದ್ದರು ಎಂದಿದ್ದರು.

ಈ ವಲಸೆಯು ರಾಜ್ಯದ ಬಹುಸಂಖ್ಯಾತ ಮೈತ ಜನರಲ್ಲಿ ಆತಂಕಕ್ಕೆ ಕಾರಣವಾಗಿತ್ತು ಎಂದು ಅವರು ಹೇಳಿದ್ದರು.

ಭಾರತದಲ್ಲಿ ಕೂಕಿ ಡೆಮಾಕ್ರೆಟಿಕ್‌ ಫ್ರಂಟ್‌ ಎಂಬ ಕೂಕಿ ಸಂಘಟನೆಯಿಲ್ಲ ಎಂದು ಕೂಕಿ ನ್ಯಾಷನಲ್‌ ಆರ್ಗನೈಜೇಶನ್‌ (ಬರ್ಮಾ) ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿತ್ತು. ಮ್ಯಾನ್ಮಾರ್‌ ಮಿಲಿಟರಿ ಆಡಳಿತದ ವಿರುದ್ಧ ಹೋರಾಡುವ ಏಕೈಕ ಸಂಘಟನೆ ಕೂಕಿ ನ್ಯಾಷನಲ್‌ ಆರ್ಮಿ (ಬರ್ಮಾ) ಎಂದಾಗಿದೆ ಎಂದೂ ಪತ್ರದಲ್ಲಿ ಹೇಳಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News