ಪ್ರಧಾನಿ ತಳಮಳಗೊಂಡಿದ್ದಾರೆ, ವೇದಿಕೆಯಲ್ಲಿ ಮುಂದೆ ಕಣ್ಣೀರು ಕೂಡ ಸುರಿಸಬಹುದು: ರಾಹುಲ್‌ ಗಾಂಧಿ

Update: 2024-04-26 12:45 GMT

Photo:X/@INCIndia

ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಇತ್ತೀಚಿನ ದಿನಗಳಲ್ಲಿ ತಮ್ಮ ಭಾಷಣಗಳಲ್ಲಿ ತುಂಬಾ ತಳಮಳಗೊಂಡವರಂತೆ ಕಾಣಿಸುತ್ತಿದ್ದಾರೆ ಮತ್ತು ಮುಂದಿನ ಕೆಲ ದಿನಗಳಲ್ಲಿ ಅವರು ವೇದಿಕೆಯಲ್ಲಿ ಕಣ್ಣೀರು ಕೂಡ ಸುರಿಸಬಹುದು ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

ಕರ್ನಾಟಕದ ವಿಜಯಪುರದಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ವಿವಿಧ ವಿಧಾನಗಳ ಮೂಲಕ ಜನರ ಗಮನ ಬೇರೆಡೆ ಸೆಳೆದು ಪ್ರಮುಖ ವಿಚಾರಗಳಾದ ಬಡತನ, ನಿರುದ್ಯೋಗ ಮತ್ತು ಬೆಲೆ ಏರಿಕೆ ಸಮಸ್ಯೆಗಳನ್ನು ಅವರು ಕಡೆಗಣಿಸುತ್ತಿದ್ದಾರೆ ಎಂದು ರಾಹುಲ್‌ ಆರೋಪಿಸಿದ್ದಾರೆ.

“ಮೋದಿ ಗಮನ ಬೇರೆಡೆ ಹರಿಸಲು ಯತ್ನಿಸುತ್ತಿದ್ದಾರೆ. ಕೆಲವೊಮ್ಮೆ ಚೀನಾ ಬಗ್ಗೆ ಮತ್ತು ಪಾಕಿಸ್ತಾನದ ಬಗ್ಗೆ ಮಾತನಾಡುತ್ತಾರೆ, ನೀವು ತಟ್ಟೆಗಳನ್ನು ಬಾರಿಸುವಂತೆ ಮಾಡುತ್ತಾರೆ, ಮೊಬೈಲ್‌ ಫೋನ್‌ಗಳ ಟಾರ್ಚ್‌ಲೈಟ್‌ ಸ್ವಿಚ್‌ ಆನ್‌ ಮಾಡಲು ಹೇಳುತ್ತಾರೆ,” ಎಂದು ರಾಹುಲ್‌ ಹೇಳಿದರು.

“ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ದೇಶದ ಜನರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಮತ್ತು ಮೈತ್ರಿ ಕೂಟ ಶ್ರಮಿಸಲಿದೆ. ದೇಶದ ಪ್ರತಿಯೊಬ್ಬ ಪ್ರಜೆಯ ಬದುಕನ್ನೂ ಸುಧಾರಿಸಲಿದೆ” ಎಂದು ತಿಳಿಸಿದರು.

‘ನರೇಂದ್ರ ಮೋದಿ ತಮ್ಮ 10 ವರ್ಷದ ಆಡಳಿತ ಅವಧಿಯಲ್ಲಿ ಶ್ರೀಮಂತರನ್ನು ಹುಟ್ಟು ಹಾಕಿದರು ಮತ್ತು ಅವರ ಪರವಾಗಿಯೇ ಆಳ್ವಿಕೆ ನಡೆಸಿದರು. ಆದರೆ, ನಮ್ಮ ಸರ್ಕಾರವು ಅಧಿಕಾರಕ್ಕೆ ಬಂದರೆ, ಬಡವರು, ದುರ್ಬಲ, ಹಿಂದುಳಿದವರ್ಗ, ದಲಿತ, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲರ ಬದುಕನ್ನು ಸುಧಾರಿಸಲಿದೆ’ ಎಂದರು.

ಮುಖ್ಯಮಂತ್ರಿಗಳಾದ  ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ, ಸಚಿವರಾದ ಶಿವಾನಂದ ಪಾಟೀಲ, ಜಿಲ್ಲೆಯ ಕಾಂಗ್ರೆಸ್ ಶಾಸಕರು, ವಿಧಾನಪರಿಷತ್ತಿನ ಸದಸ್ಯರು, ಡಿಸಿಸಿ ಅಧ್ಯಕ್ಷರು, ಪಕ್ಷದ ಪದಾಧಿಕಾರಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News