400 ಸೀಟು ಗೆಲ್ಲೋ ಮಾತಾಡುತ್ತಿದ್ದ ಮೋದಿಜೀ ಇದ್ದಕ್ಕಿದ್ದ ಹಾಗೆ ಹಿಂಜರಿದಿದ್ದು ಹೇಗೆ ?
400 ಸೀಟು ಗೆಲ್ಲೋ ಮಾತಾಡುತ್ತಿದ್ದ ಮೋದಿಜೀ ಇದ್ದಕ್ಕಿದ್ದ ಹಾಗೆ ಬ್ಯಾಕ್ ಫೂಟ್ ಗೆ ಹೋಗಿದ್ದು ಹೇಗೆ? ಈ ಬಾರಿ ಮತ್ತೆ ನಾನೇ ಎಂದು ಆಕ್ರಮಣಕಾರಿಯಾಗಿ ಚುನಾವಣೆ ಎದುರಿಸಲು ಹೊರಟಿದ್ದ ಪ್ರಧಾನಿ ಮೋದಿ ದಿಢೀರನೆ ರಕ್ಷಣಾತ್ಮಕ ಆಟಕ್ಕೆ ಶರಣಾದರೆ ?
ಅದಕ್ಕೇನು ಕಾರಣಗಳು? 10 ವರ್ಷಗಳಲ್ಲಿ ಒಂದೇ ಒಂದು ಸುದ್ದಿಗೋಷ್ಠಿಯನ್ನು ಎದುರಿಸದ ಪ್ರಧಾನಿ ಮೋದಿ ಈ ಚುನಾವಣೆಗೆ ಮೊದಲು ಟಿವಿ ಚಾನೆಲ್ಗೆ ಇಂಟರ್ವ್ಯೂ ಕೊಟ್ಟು, ಈಡಿ ಹಾಗೂ ಎಲೆಕ್ಟೋರಲ್ ಬಾಂಡ್ ವಿಚಾರವಾಗಿ ಮಾತಾಡಿದ್ದಾರೆ ಎಂದರೆ ಇದು ಏನನ್ನು ಸೂಚಿಸುತ್ತದೆ?ಮೋದಿ ತಮ್ಮ ಅಗ್ರೆಸಿವ್ ರಾಜಕಾರಣ ಬದಿಗಿಟ್ಟು ರಕ್ಷಣಾತ್ಮಕ ರಣತಂತ್ರದ ಮೊರೆ ಹೋದರಾ? ಯಾಕೆ ಚುನಾವಣೆಗೆ ಮೊದಲು ಮೋದಿಗೆ ಭಯವಾಗಲು ಶುರುವಾಗಿದೆ? ಯಾಕೆ ಕೆಲ ಹೆಜ್ಜೆ ಹಿಂದಕ್ಕೆ ಸರಿದಿದ್ಧಾರೆ?
ಮೊದಲ ಕಾರಣ, ಚುನಾವಣಾ ಬಾಂಡ್. ಚುನಾವಣಾ ಬಾಂಡ್ ಅಸಾಂವಿಧಾನಿಕ ಎಂದು ಆ ಯೋಜನೆ ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ಬಾಂಡ್ ವಿವರ ಬಹಿರಂಗಗೊಳಿಸುವಂತೆ ಎಸ್ಬಿಐಗೆ ಆದೇಶಿಸಿ ಎಲ್ಲ ಮಾಹಿತಿ ಪ್ರಕಟವಾದ ಬಳಿಕ, ಹೇಗೆ ಅದೊಂದು ವ್ಯವಸ್ಥಿತ ದಂಧೆಯಾಗಿತ್ತು ಎಂಬುದು ಬಯಲಾಗಿ ಹೋಯಿತು.
ಹೇಗೆ ಚುನಾವಣಾ ಬಾಂಡ್ ಮೂಲಕ ಬಿಜೆಪಿ ಲಾಭ ಮಾಡಿಕೊಂಡಿತು, ಹೇಗೆಲ್ಲ ಕಂಪನಿಗಳಿಂದ ವಸೂಲಿ ಮಾಡಲಾಯಿತು, ಹೇಗೆ ಕೇಂದ್ರ ಏಜನ್ಸಿಗಳ ಮೂಲಕ ರೇಡ್ ನಡೆದು ಕಂಪನಿಗಳೆಲ್ಲ ಬಿಜೆಪಿಯ ಪಾದದಡಿ ಕೋಟಿ ಕೋಟಿ ದೇಣಿಗೆಯನ್ನು ತಂದು ಚೆಲ್ಲಿದ್ದವು ಎಂಬುದೆಲ್ಲವೂ ಬಹಿರಂಗವಾಗಿ ಹೋಯ್ತು.
ಆದರೆ ತಾವು ಟಿವಿ ಚಾನೆಲ್ಗೆ ನೀಡಿದ ಇಂಟರ್ವ್ಯೂನಲ್ಲಿ ಅವರು ತಮ್ಮ ಈ ಯೋಜನೆಯಿಂದಾಗಿಯೇ ಯಾರೆಲ್ಲ ಯಾವ ರಾಜಕೀಯ ಪಕ್ಷಗಳಿಗೆ ಎಷ್ಟು ಕೊಟ್ಟಿದ್ದಾರೆ ಎನ್ನೋದು ಬಹಿರಂಗಕ್ಕೆ ಬರುವಂತಾಯಿತು ಎಂದು ಶುದ್ಧ ಸುಳ್ಳೊಂದನ್ನು ಹೇಳಿ ಸಮರ್ಥಿಸಿಕೊಂಡಿದ್ದಾರೆ. ಹೇಗಿದೆ ನೋಡಿ. ಎಲೆಕ್ಟೋರಲ್ ಬಾಂಡ್ ಯೋಜನೆಯೇ ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟಿದೆ. ಎಲ್ಲ ವಿವರ ಬಹಿರಂಗಪಡಿಸುವಂತೆ ಅದು ತಪರಾಕಿ ಕೊಟ್ಟು ಕೇಳಿ ಬಿಜೆಪಿ ಸರ್ಕಾರದ ದಂಧೆ ಬಯಲಾಗುವಂತೆ ಮಾಡಿದೆ.
ಆದರೆ ಮೋದಿ ಮಾತ್ರ ಇದರ ಕ್ರೆಡಿಟ್ ಅನ್ನು ತಾನು ಪಡೆಯಲು ಈ ಹೇಳಿಕೆ ಮೂಲಕ ಯತ್ನಿಸಿದ್ದಾರೆ. ತನ್ನಿಂದಲೇ ಯಾರಿಗೆ ಎಲ್ಲಿಂದ ಎಷ್ಟು ದೇಣಿಗೆ ಬಂತೆಂಬುದು ಬಯಲಾಗುವ ಹಾಗಾಯಿತು ಎನ್ನುತ್ತಿದ್ದಾರೆ. ಜನತೆಗೆ ರಾಜಕೀಯ ಪಕ್ಷಗಳಿಗೆ ಬರುವ ದೇಣಿಗೆ ಮೂಲವನ್ನು ತಿಳಿಯುವ ಅಧಿಕಾರವೇ ಇಲ್ಲ ಎಂದು ಯಾವ ಮೋದಿ ಸರ್ಕಾರ ಹೇಳಿತ್ತೊ ಅದೇ ಮೋದಿ ಈಗ ಹೇಳುತ್ತಿರುವ ಈ ಮಾತು ಎಷ್ಟು ದೊಡ್ಡ ಸುಳ್ಳು?
ಜನತೆಗೆ ಇಂಥದೊಂದು ಅಧಿಕಾರ ಇಲ್ಲ ಎಂದು ಸರ್ಕಾರವೇ ಸುಪ್ರೀಂ ಕೋರ್ಟ್ನಲ್ಲಿ ಹೇಳಿತ್ತು. ಅಷ್ಟು ಮಾತ್ರವಲ್ಲ, ಯಾವ ಮಾಹಿತಿಯೂ ಹೊರಬರದ ಹಾಗೆ ಎಸ್ಬಿಐ ಮೂಲಕವೂ ಸರ್ಕಾರ ಸುಪ್ರೀಂ ಕೋರ್ಟ್ ಎದುರು ಬಹಳ ಕಸರತ್ತು ಮಾಡಿತ್ತು. ಆ ಮಾಹಿತಿಗಳು ಚುನಾವಣೆಯೊಳಗೆ ಹೊರಬರದಂತೆ ಮಾಡಲು ಬಹಳ ಪ್ರಯತ್ನ ನಡೆಸಿತ್ತು. ಆದರೆ ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಸೂಚನೆಯಿಂದಾಗಿ ಎಸ್ಬಿಐ ಎಲ್ಲ ಮಾಹಿತಿಯನ್ನೂ ಬಹಿರಂಗ ಮಾಡಲೇಬೇಕಾಯಿತು. ಎಲ್ಲ ವಿವರಗಳೂ ಜನರ ಮುಂದೆ ಬರುವಂತಾಯಿತು.
ಈಗ ಅದು ತನ್ನ ಕಾರಣದಿಂದ ಆಯ್ತು ಎಂದು ಜನರ ಎದುರು ಬಿಂಬಿಸಲು ಮೋದಿ ಪ್ರಯತ್ನ ನಡೆಸಿರುವುದು ಗೊತ್ತಾಗುತ್ತಿದೆ. ಏಕೆ ಮೋದಿ ಸ್ವಲ್ಪ ಹಿಂಜರಿದ ಹಾಗೆ ಕಾಣುತ್ತಿದ್ದಾರೆ ಎಂಬುದಕ್ಕೆ ಎರಡನೇ ಕಾರಣ ಏನೆಂದು ನೋಡುವುದಾದರೆ, ಮೋದಿ ಸರ್ಕಾರ ಬಂದಾಗಿನಿಂದಲೂ ನೊಡುತ್ತಲೇ ಇದ್ದೇವೆ. ಹೇಗೆ ಮೋದಿ ಸರ್ಕಾರ ಈಡಿ ಸಿಬಿಐ ಅಂಥ ಏಜನ್ಸಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಲೇ ಬಂದಿದೆ ಎಂಬುದನ್ನು ಕಂಡಿದ್ದೇವೆ.
ಮತ್ತು ಆ ಏಜನ್ಸಿಗಳನ್ನು ವಿಪಕ್ಷಗಳನ್ನು ಹಣಿಯುವುದಕ್ಕೆ ಮಾತ್ರವೇ ಬಳಸಲಾಗುತ್ತಿರುವುದೂ ನಿಚ್ಚಳವಾಗಿದೆ. ಬಿಜೆಪಿ ಜೊತೆ ಹೋದರೆ ಬಚಾವ್. ಬಿಜೆಪಿ ಜೊತೆ ಕೈಜೋಡಿಸಲು ತಯಾರಾಗದೇ ಹೋದರೆ ಕಥೆ ಮುಗಿಯಿತು. ಈಡಿ, ಸಿಬಿಐ ಬಲೆಯಲ್ಲಿ ಕೆಡವಿ, ಮೇಲೇಳದಂತೆ ಮಾಡುವುದು ನಡೆದೇ ಇದೆ. ಇದರ ಬಗ್ಗೆಯೂ ಅದೇ ಸಂದರ್ಶನದಲ್ಲಿ ಹೇಳಿಕೆ ಕೊಟ್ಟಿರುವ ಮೋದಿ, ಈಡಿ ಸ್ವತಂತ್ರ ಸಂಸ್ಥೆ. ಅದನ್ನು ತಡೆಯುವ ಮಾತಾಗಲೀ ಯಾರದೋ ವಿರುದ್ಧ ಕಳಿಸುವ ಪ್ರಶ್ನೆಯಾಗಲಿ ಬರುವುದೇ ಇಲ್ಲ. ಈಡಿಯನ್ನು ಬಿಜೆಪಿ ತನ್ನ ಅಸ್ತ್ರವಾಗಿಸಿಕೊಂಡಿದೆ ಎಂಬ ವಿಪಕ್ಷಗಳ ಆರೋಪ ಆಧಾರ ರಹಿತ ಎಂದಿದ್ದಾರೆ.
ಇಲ್ಲೇ ನಾವು ನಿರ್ಮಲಾ ಸೀತಾರಾಮನ್ ಅವರು ಒಂದು ಸಂದರ್ಶನದಲ್ಲಿ ಏನು ಹೇಳಿದ್ದರು ಎನ್ನೋದನ್ನು ನೋಡಬೇಕು. ಏನೇ ಕಳಂಕ ಮೆತ್ತಿಕೊಂಡವರು, ಬಿಜೆಪಿಯಿಂದಲೇ ಆರೋಪಕ್ಕೆ ಒಳಗಾದವರು, ಈಡಿ, ಸಿಬಿಐ ಕೇಸ್ಗಳಲ್ಲಿ ಆರೋಪ ಹೊತ್ತವರಿದ್ದರೂ ಪಕ್ಷ ಎಲ್ಲರನ್ನೂ ಸ್ವಾಗತಿಸುತ್ತದೆ, ಬಿಜೆಪಿ ಎಲ್ಲರಿಗೂ ಮುಕ್ತವಾಗಿದೆ ಎಂದಿದ್ದರು.
ಅವರು ಹಾಗೆ ಹೇಳುತ್ತಿದ್ದರೆ, ಇವರು ಹೀಗೆ ಹೇಳುವುದು. ಮತ್ತಿದು ಬಿಜೆಪಿಯ ಅಸಲೀ ಬಣ್ಣ. ಇನ್ನು ಮೂರನೇ ಕಾರಣ ಏನು?
ಚುನಾವಣಾ ಬಾಂಡ್ ವಿಚಾರವಾಗಿ ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ಸರಿಯಾಗಿಯೇ ಏಟು ತಿಂದಿರುವ ಮೋದಿ ಸರ್ಕಾರ ಈಗ ಸುಪ್ರೀಂ ಕೋರ್ಟ್ ಮೇಲೆಯೇ ತಿರುಗಿಬೀಳುವ ಯತ್ನವೊಂದನ್ನು ಬಹಳ ಜಾಣ್ಮೆಯಿಂದ ನಡೆಸಿದೆ. 600 ವಕೀಲರು ಈಚೆಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿರುವುದು ಗೊತ್ತಿರುವ ವಿಚಾರ.
ಈ ಪತ್ರದಲ್ಲಿ, ರಾಜಕೀಯ ನಾಯಕರು ಆರೋಪಿಗಳಾಗಿರುವ ಭ್ರಷ್ಟಾಚಾರದ ಪ್ರಕರಣಗಳಲ್ಲಿ ನ್ಯಾಯಾಂಗದ ಮೇಲೆ ಒತ್ತಡ ತರುವ ಮತ್ತು ಪ್ರಭಾವ ಬೀರುವ ಯತ್ನದಲ್ಲಿ ವಕೀಲರ ಗುಂಪೊಂದು ತೊಡಗಿದೆ ಎಂದು ಆರೋಪಿಸಲಾಗಿದೆ.
ಆ ಗುಂಪಿನ ಅಂಥ ಪ್ರಯತ್ನ ನ್ಯಾಯಾಂಗದ ವಿಶ್ವಾಸಾರ್ಹತೆಗೆ ಧಕ್ಕೆ ತರುವ ವಿಚಾರವಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ. ಆದರೆ ಈ ಪತ್ರದ ಹಿಂದಿನ ರಾಜಕೀಯ ಏನು ಎನ್ನುವುದು ರಹಸ್ಯವಾಗಿ ಉಳಿದಿಲ್ಲ. ವಕೀಲರು ಆ ಪತ್ರವನ್ನು ಸಿಜೆಐಗೆ ಬರೆಯುತ್ತಿದ್ದಂತೆ ಅದನ್ನು ಮೋದಿ ಶೇರ್ ಮಾಡಿಕೊಳ್ಳುತ್ತಾರೆ ಮತ್ತು ಕಾಂಗ್ರೆಸ್ ಮೇಲೆ ಟೀಕಾ ಪ್ರಹಾರ ಮಾಡುತ್ತಾರೆ.
ಅತ್ತ ವಕೀಲರ ಮೂಲಕ ಹಾಗೆ ಹೇಳಿಸುವುದು ಮತ್ತು ಈ ಕಡೆಯಿಂದ ಆ ಪತ್ರವನ್ನೇ ಉಲ್ಲೇಖಿಸಿ, ಅಂಥ ಕೆಲಸವನ್ನೆಲ್ಲ ಕಾಂಗ್ರೆಸ್ ಮಾಡುತ್ತಲೇ ಬಂದಿದೆ ಎಂದು ತಾವೇ ಹೇಳುವುದು. ನ್ಯಾಯಾಂಗದ ಬಗ್ಗೆ ತಮಗೆ ಅಪಾರ ಕಾಳಜಿ, ಕಳಕಳಿ ಎಂಬಂತೆ ಬಿಂಬಿಸಿಕೊಳ್ಳುವುದು.
ಹೇಗಿದೆಯಲ್ಲವೆ ತಂತ್ರ? ಚುನಾವಣಾ ಬಾಂಡ್ ವಿಚಾರದಲ್ಲಿ ಸುಪ್ರೀಂ ತೀರ್ಪಿನ ಬಳಿಕ ಪೆಟ್ಟು ತಿಂದ ಮೇಲೆ ಇಂಥದೊಂದು ಪತ್ರವನ್ನು ವಕೀಲರ ಕಡೆಯಿಂದ ಬರೆಸುವ ಮೂಲಕ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಏನನ್ನು ಹೇಳಲು ಮೋದಿ ಬಯಸಿದ್ದಾರೆ?
ಇದೆಲ್ಲವೂ ಚುನಾವಣೆಯ ಬಗೆಗಿನ ಭಯದಿಂದಲೇ ಬಿಜೆಪಿ ಮಾಡುತ್ತಿರುವುದಲ್ಲವೆ? ಮೋದಿ ಮಂಕಾಗಲು ನಾಲ್ಕನೇ ಕಾರಣ,
ಸ್ವಂತ ಬಲದಿಂದ ಚುನಾವಣೆ ಗೆಲ್ಲುವ ವಿಶ್ವಾಸ ಇಲ್ಲದ ಮೋದಿ, ವಿಪಕ್ಷಗಳನ್ನು ಹೆದರಿಸುವ ಕೆಲಸದಲ್ಲಿ ತೊಡಗಿದ್ದಾರೆ. ಮನೀಶ್ ಸಿಸೋಡಿಯಾ, ಸತ್ಯೇಂದ್ರ ಜೈನ್, ಸಂಜಯ್ ಸಿಂಗ್, ಹೇಮಂತ್ ಸೊರೇನ್, ಕವಿತಾ, ಅರವಿಂದ್ ಕೇಜ್ರಿವಾಲ್ ಅಂಥ ನಾಯಕರನ್ನು ಮೋದಿ ಸರ್ಕಾರ ಜೈಲಿಗೆ ಕಳಿಸಿದೆ. ಕಾಂಗ್ರೆಸ್ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿ, ಅದನ್ನು ಅಸಹಾಯಕವಾಗಿಸುವ ಹುನ್ನಾರ ಮಾಡಿದೆ.
ಮುಂಬೈನಲ್ಲಿ ಅಮೋಲ್ ಕೀರ್ತಿಕರ್ ಅವರನ್ನು ಲೋಕಸಭೆ ಚುನಾವಣೆಗೆ ಅಭ್ಯರ್ಥಿಯೆಂದು ಉದ್ಧವ್ ಠಾಕ್ರೆ ಘೋಷಿಸಿದ ಒಂದು ತಾಸಿನೊಳಗೇ ಈಡಿ ಸಮನ್ಸ್ ಹೋಗುತ್ತದೆ. 2018ರಲ್ಲಿ ಸ್ವೀಡನ್ ಮೂಲದ ವೆರೈಟೀಸ್ ಆಫ್ ಡೆಮಾಕ್ರಸಿ ಇನ್ಸ್ಟಿಟ್ಯೂಟ್ ತನ್ನ ವರದಿಯಲ್ಲಿ ಭಾರತದಲ್ಲಿ ಚುನಾವಣಾ ನಿರಂಕುಶತೆ ಇದೆ ಎಂದು ಹೇಳಿತ್ತು.
ಅದಾಗಿ ಈಗ ಆರು ವರ್ಷಗಳಾಗಿವೆ. ಆಗಲೇ ಅದು ಅಂಥದೊಂದು ಅಭಿಪ್ರಾಯ ಕೊಟ್ಟಿತ್ತು ಎಂದರೆ ಈಗ ಸ್ಥಿತಿ ಇನ್ನೆಷ್ಟು ಹದಗೆಟ್ಟಿರಬಹುದು?
ಮೊನ್ನೆ ಭಾನುವಾರ ದೆಹಲಿಯ ರಾಮ್ಲೀಲಾ ಮೈದಾನದಲ್ಲಿ ನಡೆದ ವಿಪಕ್ಷ ಒಕ್ಕೂಟದ ರ್ಯಾಲಿಯಲ್ಲಿ ಕೂಡ ಪ್ರತಿಯೊಬ್ಬ ವಿಪಕ್ಷ ನಾಯಕರೂ ಪ್ರಜಾಸತ್ತೆಯನ್ನು ನಾಶಗೊಳಿಸುವ ಕೆಲಸವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರಲ್ಲದೆ, ಪ್ರಜಾಪ್ರಭುತ್ವವನ್ನು ರಕ್ಷಿಸಿಕೊಳ್ಳುವುದಕ್ಕೆ ಎಲ್ಲರೂ ನಿಲ್ಲಬೇಕಾಗಿದೆ ಎಂದೇ ಹೇಳಿದರು.
ನಿರುದ್ಯೋಗ, ಬೆಲೆಯೇರಿಕೆ ಅಂಥ ವಿಚಾರಗಳನ್ನೂ ಮೀರಿ ಪ್ರಜಾಪ್ರಭುತ್ವ ಅಪಾಯದಲ್ಲಿರುವುದರ ಬಗ್ಗೆ ಅಲ್ಲಿ ಆತಂಕ ವ್ಯಕ್ತವಾಯಿತು.
ಚುನಾವಣೆಯಲ್ಲಿ ಲೆವೆಲ್ ಪ್ಲೇಯಿಂಗ್ ಫೀಲ್ಡ್ ಇಲ್ಲವಾದರೆ ಎಲ್ಲ ಅನುಕೂಲವೂ ಒಂದು ಪಕ್ಷದ ಪರವಾಗಿ ವಾಲುತ್ತದೆ ಎಂಬ ಕಳವಳ ಅಲ್ಲಿ ವ್ಯಕ್ತವಾಯಿತು.
ಮಾತೆತ್ತಿದರೆ ತಾವು 400 ಸೀಟುಗಳನ್ನು ಗೆಲ್ಲುತ್ತೇವೆ ಎನ್ನುವ ಬಿಜೆಪಿ ಮಂದಿ, ಆ ವಿಶ್ವಾಸ ಅವರಿಗಿದ್ದಲ್ಲಿ ಯಾಕೆ ವಿಪಕ್ಷ ನಾಯಕರ ಬಗ್ಗೆ ಇಷ್ಟೊಂದು ಹೆದರಿಕೊಂಡಿದ್ದಾರೆ? ಇದರ ಕಾರಣ ಸ್ಪಷ್ಟ. ಸೋತುಹೋಗುತ್ತೇವೆ ಎಂಬ ಭಯ ಬಿಜೆಪಿಯನ್ನು, ಮೋದಿಯನ್ನು ಆವರಿಸಿಬಿಟ್ಟಿದೆ. ಇದಕ್ಕಾಗಿ ವಿಪಕ್ಷಗಳ ಬಗ್ಗೆ ಭಯವಾಗಿದೆ. ವಿಪಕ್ಷಗಳ ಧೈರ್ಯ ಕುಗ್ಗಿಸುವ ತಂತ್ರಗಳನ್ನು ಅದು ಶುರು ಮಾಡಿಕೊಂಡಿದೆ. ಈ ಹೊತ್ತಲ್ಲಿ ವಿಪಕ್ಷ ಒಕ್ಕೂಟ ನಿಜವಾಗಿಯೂ ದೇಶದಲ್ಲಿ ಆಗುತ್ತಿರುವುದೇನು ಎಂಬ ಸತ್ಯವನ್ನು ಜನರ ಬಳಿಗೆ ಮುಟ್ಟಿಸಬೇಕಾಗಿದೆ, ಜನತೆಗೆ ಕಟು ವಾಸ್ತವದ ಬಗ್ಗೆ ಮನವರಿಕೆ ಮಾಡಿಕೊಡಲೇಬೇಕಿದೆ.