ಮುಡಿಪು: ಎಂಡಿಎಂಎ ಮಾರಾಟ ಯತ್ನ; ಇಬ್ಬರು ಆರೋಪಿಗಳ ಸಹಿತ 4.95 ಲಕ್ಷರೂ. ಮೌಲ್ಯದ ಸೊತ್ತು ವಶ
ಮಂಗಳೂರು, ನ. 24: ಉಳ್ಳಾಲದ ಮುಡಿಪು ಎಂಬಲ್ಲಿ ಎಂಡಿಎಂಎ ಅಕ್ರಮ ಮಾದಕ ವಸ್ತುವನ್ನು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಮಾರಟ ಮಾಡಲು ಯತ್ನಿಸುತ್ತಿದ್ದ ಆರೋಪದಲ್ಲಿ ಸಿಸಿಬಿ ಪೊಲೀಸರು ಇಬ್ಬರು ಆರೋಪಿಗಳನ್ನು ಶುಕ್ರವಾರ ಬಂಧಿಸಿದ್ದಾರೆ.
ಬಂಧಿತರನ್ನು ಬಂಟ್ವಾಳ ಕೊಳ್ನಾಡು ನಿವಾಸಿ ಅಬ್ದುಲ್ ರಹಿಮಾನ್ (42), ಬೆಳ್ತಂಗಡಿ ಇಳಂತಿಲ ಗ್ರಾಮದ ಮುಹಮ್ಮದ್ ಝಿಯಾದ್ (22) ಎಂದು ಗುರುತಿಸಲಾಗಿದೆ.
ಬಂಧಿತರಿಂದ 35 ಗ್ರಾಂ ಎಂಡಿಎಂಎ (1.75 ಲಕ್ಷರೂ. ಮೌಲ್ಯ), 2 ಮೊಬೈಲ್ ಫೋನ್‌ಗಳು, ಡಿಜಿಟಲ್ ತೂಕ ಮಾಪನ, ಮಾರುತಿ ಆಲ್ಟೋ ಕಾರು, ಸೇರಿದಂತೆ ಒಟ್ಟು 4.95 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಅಬ್ದುಲ್ ರಹಿಮಾನ್ ವಿರುದ್ಧ ಈ ಹಿಂದೆ ದ.ಕ. ಜಿಲ್ಲೆಯ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ವಿಗ್ರಹ ಕಳವು ಪ್ರಕರಣ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಗಲಾಟೆ ಪ್ರಕರಣ, ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ಹಾಗೂ ಉಪ್ಪಿನಂಗಡಿ ಠಾಣೆಯಲ್ಲಿ ಎಂಡಿಎಂಎ ಮಾರಾಟ ಪ್ರಕರಣಗಳು ದಾಖಲಾಗಿವೆ.
ಮುಹಮ್ಮದ್ ಝಿಯಾದ್ ಎಂಬಾತನ ವಿರುದ್ಧ ಈ ಹಿಂದೆ ಉಪ್ಪಿನಂಗಡಿ ಠಾಣೆಯಲ್ಲಿ ಎಂಡಿಎಂಎ ಸೇವನೆ ಪ್ರಕರಣ ದಾಖಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಪೊಲೀಸ್ ಆಯುಕ್ತರು ಹಾಗೂ ಡಿಸಿಪಿಗಳ ನಿರ್ದೇಶನದಂತೆ ಮಂಗಳೂರು ಸಿಸಿಬಿ ಘಟಕದ ಪಿ.ಎ. ಹೆಗಡೆ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ಬೆಂಗಳೂರಿನ ವಿದೇಶಿ ಪ್ರಜೆಯಿಂದ ಎಂಡಿಎಂಎ ಖರೀದಿ
ಬಂಧಿತ ಆರೋಪಿಗಳು ಬೆಂಗಳೂರಿನಲ್ಲಿರುವ ವಿದೇಶಿ ಪ್ರಜೆಯಿಂದ ಎಂಡಿಎಂಎ ಖರೀದಿಸಿ ಮಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸ್ ಪ್ರಕಟನೆ ತಿಳಿಸಿದೆ.