ಮುಂದುವರಿದ ಮರಾಠ ಮೀಸಲಾತಿ ಪ್ರತಿಭಟನೆ; ಮುಂಬೈ-ಬೆಂಗಳೂರು ಹೆದ್ದಾರಿಗೆ ತಡೆ

Update: 2023-10-31 12:56 GMT

Photo: PTI

ಮುಂಬೈ: ಮರಾಠ ಸಮುದಾಯಕ್ಕೆ ಒಬಿಸಿ ವಿಭಾಗದಲ್ಲಿ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮೀಸಲಾತಿ ಆಗ್ರಹಿಸಿ ಮಹಾರಾಷ್ಟ್ರದ ವಿವಿಧೆಡೆ ಇಂದು ಕೂಡ ಮರಾಠ ಸಮುದಾಯದವರು ಪ್ರತಿಭಟನೆಗಳನ್ನು ನಡೆಸಿದ್ದಾರೆ.

ಪ್ರತಿಭಟನಾಕಾರರ ಒಂದು ಗುಂಪು ಮಂಗಳವಾರ ಅಪರಾಹ್ನ ಮುಂಬೈ-ಬೆಂಗಳೂರು ಹೆದ್ದಾರಿಯಲ್ಲಿ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದ ಪರಿಣಾಮ ಎರಡೂ ಕಡೆಗಳಲ್ಲಿ ವಾಹನಗಳ ಉದ್ದನೆಯ ಸರತಿ ಕಂಡುಬಂತು.

ಮರಾಠ ಕ್ರಾಂತಿ ಮೋರ್ಚಾದ ಕಾರ್ಯಕರ್ತರ ಗುಂಪೊಂದು ಸೋಲಾಪುರದಲ್ಲಿ ರೈಲ್ವೆ ಹಳಿಗಳನ್ನು ತಡೆದು ಪ್ರತಿಭಟನೆ ನಡೆಸಿದೆ. ರೈಲು ಹಳಿಗಳಲ್ಲಿ ಕೇಸರಿ ಧ್ವಜ ಹಿಡಿದ ಪ್ರತಿಭಟನಾಕಾರರು ಟಯರುಗಳಿಗೆ ಬೆಂಕಿ ಹಚ್ಚುತ್ತಿರುವುದೂ ಕಂಡು ಬಂತು.

ರೈಲ್ವೆ ಪೊಲೀಸರು ಮತ್ತು ಸೋಲಾಪುರ ಪೊಲೀಸರು ಇಬ್ಬರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ.

ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ಘನ್ಸವಂಗಿ ಎಂಬಲ್ಲಿ ಪ್ರತಿಭಟನಾಕಾರರ ಒಂದು ಗುಂಪು ಪಂಚಾಯತ್‌ ಸಮಿತಿ ಕಚೇರಿಗೆ ಬೆಂಕಿ ಹಚ್ಚಿದೆ. ಪ್ರತಿಭಟನಾಕಾರರು “ಏಕ್‌ ಮರಾಠ ಲಾಖ್‌ ಮರಾಠ” ಎಂಬ ಘೋಷಣೆಗಳನ್ನೂ ಕೂಗುತ್ತಿದ್ದರು. ಬೆಂಕಿಯಿಂದಾಗಿ ಕಚೇರಿಯ ಪೀಠೋಪಕರಣಗಳು ಮತ್ತು ಕೆಲ ಪ್ರಮುಖ ದಾಖಲೆಗಳು ಹಾನಿಗೀಡಾಗಿವೆ.

ಜಲ್ನಾ ಜಿಲ್ಲೆಯ ಬದ್ನಾಪುರ್‌ ತೆಹ್ಸಿಲ್‌ನ ಶೆಲ್ಗಾಂವ್‌ ಗ್ರಾಮದಲ್ಲಿ ಪ್ರತಿಭಟನಾಕಾರರು ರೈಲ್ವೆ ಗೇಟ್‌ ಒಂದರಲ್ಲಿ ರೈಲುಗಳನ್ನು ತಡೆಯುವ ಉದ್ದೇಶದಿಂದ ಹಳಿಗಳ ಮೇಲೆ ಕುಳಿತರು.

ಪ್ರತಿಭಟನಾಕಾರರ ಒಂದು ಗುಂಪು ಎನ್‌ಸಿಪಿ (ಅಜಿತ್‌ ಪವಾರ್‌ ಬಣ) ನಾಯಕ ಅಮರ್‌ಸಿಂಗ್‌ ಪಂಡಿತ್ ಅವರ ಮನೆಯೆದುರು ಜಮಾಯಿಸಿತ್ತು. ಪೊಲೀಸರು ಅಶ್ರುವಾಯು ಸಿಡಿಸಿ ಪ್ರತಿಭಟನಾಕಾರರನ್ನು ಚದುರಿಸಿದ್ಧಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News