ಎಂವಿಎ ಸ್ಥಾನ ಹೊಂದಾಣಿಕೆ ಅಂತಿಮ: ಪ್ರಮುಖ ಪಕ್ಷಗಳಿಗೆ ತಲಾ 85 ಸ್ಥಾನ
ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಮೈತ್ರಿಕೂಟವಾದ ಮಹಾರಾಷ್ಟ್ರ ವಿಕಾಸ ಅಗಾಡಿ (ಎಂವಿಎ) ಸ್ಥಾನ ಹೊಂದಾಣಿಕೆಗೆ ಸಂಬಂಧಿಸಿದಂತೆ ಅಂತಿಮ ಒಪ್ಪಂದಕ್ಕೆ ಬಂದಿವೆ. ಶಿವಸೇನೆ (ಯುಬಿಟಿ), ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಶರದ್ ಪವಾರ್) ಮತ್ತು ಕಾಂಗ್ರೆಸ್ ಹೀಗೆ ಮೂರು ಪಕ್ಷಗಳೂ ತಲಾ 85 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿವೆ. 288 ಸದಸ್ಯಬಲದ ವಿಧಾನಸಭೆಯ ಇತರ 33 ಸ್ಥಾನಗಳು ಮೈತ್ರಿಕೂಟದ ಇತರ ಸಣ್ಣ ಪಕ್ಷಗಳ ಪಾಲಾಗಿವೆ.
ಕೆಲವು ವಾರಗಳ ಎಡೆಬಿಡದ ಚರ್ಚೆಯ ಬಳಿಕ ಸ್ಥಾನ ಹೊಂದಾಣಿಕೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಇದು ಬಹುತೇಕ ಅಂತಿಮ ಎಂದು ಹೇಳಲಾಗಿದೆ. ಆದರೆ ಪಟ್ಟಿಯಲ್ಲಿ ಸಣ್ಣ ಬದಲಾವಣೆಗಳು ಆಗಬಹುದು ಎಂಬ ಇಂಗಿತವನ್ನು ಶಿವಸೇನೆ ಯುಬಿಟಿ ಮುಖಂಡ ಸಂಜಯ್ ರಾವತ್ ವ್ಯಕ್ತಪಡಿಸಿದ್ದಾರೆ.
ಬುಧವಾರ ಸಂಜೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಸೇನಾ ಯುಬಿಟಿಯ ಸಂಜಯ್ ರಾವತ್ ಹಾಗೂ ಕಾಂಗ್ರೆಸ್ನ ನಾನಾ ಪಟೋಲೆ ಈ ಘೋಷಣೆ ಮಾಡಿದರು. "ಪವಾರ್ ಸಾಹೇಬ್ ಅವರ ಜತೆ ನಮ್ಮ ಮಾತುಕತೆ ಅಂತಿಮಗೊಂಡಿದೆ. ಎಂಪಿಎ ಸ್ಥಾನ ಹೊಂದಾಣಿಕೆ ಕೂಡಾ ಮುಕ್ತಾಯವಾಗಿದೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡುವಂತೆ ಅವರು ಸೂಚಿಸಿದ್ದಾರೆ. 85-85-85 ಸೂತ್ರವನ್ನು ನಾವು ಅಂತಿಪಡಿಸಿದ್ದೇವೆ. ಇಲ್ಲಿಗೆ 270 ಸ್ಥಾನಗಳು ಆಗುತ್ತವೆ. ಉಳಿದ 18 ಸ್ಥಾನಗಳನ್ನು ಇತರ ಮಿತ್ರಪಕ್ಷಗಳಿಗೆ ನೀಡಲಿದ್ದೇವೆ" ಎಂದು ಸಂಜಯ್ ರಾವುತ್ ಹೇಳಿದರು. ಇದೇ ಸಂದೇಶವನ್ನು ಹಿಂದಿಯಲ್ಲಿ ನಾನಾ ಪಟೋಲೆ ಪುನರುಚ್ಚರಿಸಿದರು.
ಆದರೆ ಮೂರು ಪಕ್ಷಗಳು ತಲಾ 85 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದರಿಂದ 255 ಸ್ಥಾನಗಳಾಗುತ್ತವೆ ಎಂದು ಪತ್ರಕರ್ತರು ಗಮನಕ್ಕೆ ತಂದಾಗ ಸೇನಾದ ಅನಿಲ್ ದೇಸಾಯಿ ವಿವರಣೆ ನೀಡಿ, ತಲಾ 85 ಸ್ಥಾನಗಳಿಗೆ ನಾಮಪತ್ರ ಸಲ್ಲಿಸಲು ಸಿದ್ಧತೆ ನಡೆಸಿದ್ದೇವೆ. ಉಳಿಕೆ ಸ್ಥಾನಗಳನ್ನು ಚರ್ಚೆ ಬಳಿಕ ಮಿತ್ರಪಕ್ಷಗಳಿಗೆ ನೀಡುತ್ತೇವೆ. ಉಳಿಕೆ ಸ್ಥಾನಗಳನ್ನು ಸಮಾನವಾಗಿ ಹಂಚಿಕೊಳ್ಳಲಿದ್ದೇವೆ ಎಂದು ಸ್ಪಷ್ಟಪಡಿಸಿದರು.