ರಾಜ್ಯಸಭೆಯಲ್ಲಿ ‘ಅನಿಮಲ್’ ಚಲನಚಿತ್ರದ ಕುರಿತು ನಕಾರಾತ್ಮಕ ವಿಮರ್ಶೆ ; ಚಿತ್ರವು ಸಮಾಜದ ಪಾಲಿಗೆ ರೋಗ ಎಂದು ಜರಿದ ಕಾಂಗ್ರೆಸ್ ಸಂಸದೆ

Update: 2023-12-07 15:48 GMT

‘ಅನಿಮಲ್’ ಚಿತ್ರ | Photo: PTI 

ಹೊಸದಿಲ್ಲಿ: ಶೂನ್ಯವೇಳೆಯಲ್ಲಿ ‘ಅನಿಮಲ್’ ಚಿತ್ರದ ಕುರಿತು ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯೆ ರಂಜನ್, ನನ್ನ ಪುತ್ರಿ ಹಾಗೂ ಆಕೆಯ ಗೆಳತಿಯರು ಆ ಚಿತ್ರವನ್ನು ನೋಡಲು ಚಿತ್ರಮಂದಿರಕ್ಕೆ ತೆರಳಿದ್ದರಾದರೂ, ಆ ಚಿತ್ರದಲ್ಲಿನ ಹಿಂಸೆ ಹಾಗೂ ಮಹಿಳಾ ದ್ವೇಷವನ್ನು ಸಹಿಸಲಾಗದೆ ಅಳುತ್ತಾ ಅರ್ಧದಲ್ಲೇ ಚಿತ್ರಮಂದಿರದಿಂದ ಹೊರ ಬಂದರು ಎಂದು ದೂರಿದರು. ‘ಅನಿಮಲ್’ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ರಂಜನ್ ಅವರ ಈ ಆರೋಪವು ಮಹತ್ವ ಪಡೆದುಕೊಂಡಿದೆ ಎಂದು deccanherald.com ವರದಿ ಮಾಡಿದೆ.

ಎಲ್ಲರೂ ಚಲನಚಿತ್ರಗಳನ್ನು ನೋಡುತ್ತಲೇ ಬೆಳೆದಿದ್ದು, ಚಲನಚಿತ್ರಗಳು ಸಮಾಜದ ಮೇಲೆ, ವಿಶೇಷವಾಗಿ ಯುವಜನತೆಯ ಮೇಲೆ ಭಾರಿ ಪರಿಣಾಮವನ್ನುಂಟು ಮಾಡುತ್ತವೆ. ಹೀಗಿದ್ದೂ, ಕಬೀರ್, ಪುಷ್ಪಾ ಹಾಗೂ ಈಗ ಅನಿಮಲ್ ನಂಥ ಚಿತ್ರಗಳು ಭಾರಿ ಪ್ರಮಾಣದ ಹಿಂಸೆ ಹಾಗೂ ಮಹಿಳೆಯರೆಡೆಗೆ ಅಗೌರವವನ್ನು ಪ್ರದರ್ಶಿಸುತ್ತಿವೆ ಎಂದು ಅವರು ಆರೋಪಿಸಿದರು.

“ಇತ್ತೀಚಿನ ದಿನಗಳಲ್ಲಿ ಕೆಲವು ಚಲನಚಿತ್ರಗಳನ್ನು ಹಿಂಸೆಯನ್ನು ವೈಭವೀಕರಿಸಲೆಂದೇ ನಿರ್ಮಿಸಲಾಗುತ್ತಿದೆ. ಕಬೀರ್ ಚಿತ್ರದಲ್ಲಿ ಮಹಿಳೆಯರನ್ನು ಹೇಗೆ ನಡೆಸಿಕೊಳ್ಳಲಾಗುತ್ತದೆ ಎಂಬುದನ್ನು ಗಮನಿಸಿ. ಈ ಚಿತ್ರ(ಅನಿಮಲ್)ದಲ್ಲಿ ಕೂಡಾ ಪತ್ನಿಯನ್ನು ಅದೇ ಬಗೆಯಲ್ಲಿ ನಡೆಸಿಕೊಳ್ಳಲಾಗುತ್ತದೆ. ಮತ್ತದನ್ನು ಆ ಚಿತ್ರವು ಸಮರ್ಥಿಸುತ್ತಿದೆ. ಇದು ನಿಜಕ್ಕೂ ಕಳವಳಕಾರಿ ಸಂಗತಿ” ಎಂದು ಅವರು ಆತಂಕ ವ್ಯಕ್ತಪಡಿಸಿದರು.

“ಹನ್ನೊಂದು ಮತ್ತು ಹನ್ನೆರಡನೆ ತರಗತಿಯ ವಿದ್ಯಾರ್ಥಿಗಳು ನಕಾರಾತ್ಮಕ ಪಾತ್ರಗಳನ್ನು ನಿರ್ವಹಿಸುವ ಖಳರನ್ನು ಪರಿಗಣಿಸಲು ಪ್ರಾರಂಭಿಸಿದ್ದು, ಸಮಾಜದಲ್ಲಿನ ಹಿಂಸೆಯಲ್ಲಿ ಚಲಚಚಿತ್ರಗಳ ಪ್ರೇರಣೆಯನ್ನು ನೋಡಬಹುದಾಗಿದೆ” ಎಂದು ರಾಜ್ಯಸಭೆಯಲ್ಲಿ ಛತ್ತೀಸ್ ಗಢವನ್ನು ಪ್ರತಿನಿಧಿಸುವ ರಂಜನ್ ಪ್ರತಿಪಾದಿಸಿದ್ದಾರೆ.

“ಸಮಾಜದ ಪಾಲಿಗೆ ರೋಗವಾಗಿರುವ ಹಾಗೂ ಸಮಾಜಕ್ಕೆ ಒಳಿತನ್ನು ಮಾಡದ” ಇಂತಹ ಚಿತ್ರಗಳಿಗೆ ಸೆನ್ಸಾರ್ ಮಂಡಳಿಯೇಕೆ ಪ್ರಮಾಣ ಪತ್ರ ನೀಡುತ್ತಿದೆ” ಎಂದೂ ಅವರು ಪ್ರಶ್ನಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News