ಸಿಲ್ಕ್ಯಾರಾ ಸುರಂಗ ಕುಸಿತ: ಗುತ್ತಿಗೆದಾರ ಸಂಸ್ಥೆಯ ವಿರುದ್ಧ ಇನ್ನೂ ಎಫ್‌ಐಆರ್ ದಾಖಲಿಸದ ಎನ್‌ಎಚ್‌ಐಡಿಸಿಎಲ್

Update: 2024-01-07 12:12 GMT

Photo: PTI

ಹೊಸದಿಲ್ಲಿ: ಕಳೆದ ನವಂಬರ್‌ನಲ್ಲಿ ಉತ್ತರಾಖಂಡದಲ್ಲಿ ನಿರ್ಮಾಣ ಹಂತದಲ್ಲಿದ್ದ ಸಿಲ್ಕ್ಯಾರಾ ಸುರಂಗ ಕುಸಿದಾಗ ಅದರೊಳಗೆ ಸಿಲುಕಿದ್ದ 42 ಕಾರ್ಮಿಕರ ಜೀವವನ್ನುಳಿಸಲು ಕೈಗೊಳ್ಳಲಾಗಿದ್ದ ಅತ್ಯಂತ ಸವಾಲಿನ ರಕ್ಷಣಾ ಕಾರ್ಯಾಚರಣೆಯು ಬರೋಬ್ಬರಿ 17 ದಿನಗಳನ್ನು ತೆಗೆದುಕೊಂಡಿತ್ತು. ಆದರೆ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ (ಎನ್‌ಎಚ್‌ಐಡಿಸಿಎಲ್)ವು ಸುರಂಗ ನಿರ್ಮಾಣದ ಹೊಣೆ ಹೊತ್ತಿದ್ದ ಗುತ್ತಿಗೆದಾರ ಸಂಸ್ಥೆಯ ವಿರುದ್ಧ ಈವರೆಗೂ ಎಫ್‌ಐಆರ್ ದಾಖಲಿಸಿಲ್ಲ ಎನ್ನುವುದನ್ನು ಆರ್‌ಟಿಐ ಉತ್ತರವು ಬಹಿರಂಗಗೊಳಿಸಿದೆ ಎಂದು thewire.in ವರದಿ ಮಾಡಿದೆ.

ಅನಿರೀಕ್ಷಿತ ಅವಘಡಗಳ ಸಂದರ್ಭದಲ್ಲಿ ಕಾರ್ಮಿಕರು ಪಾರಾಗಲು ಪ್ರತ್ಯೇಕ ಸುರಂಗ ನಿರ್ಮಾಣವು ಯೋಜನೆಯ ಮೂಲವಿನ್ಯಾಸದಲ್ಲಿ ಒಳಗೊಂಡಿತ್ತು. ಕಾಮಗಾರಿಯ ಸಂದರ್ಭದಲ್ಲಿ ವೆಚ್ಚ ಮತ್ತು ಸಮಯವನ್ನು ಉಳಿಸಲು ಈ ಪ್ರತ್ಯೇಕ ಸುರಂಗ ನಿರ್ಮಾಣದ ಆಯ್ಕೆಯನ್ನು ಕೈಬಿಟ್ಟಿರದಿದ್ದರೆ ಅವಘಡವನ್ನು ತಪ್ಪಿಸಬಹುದಿತ್ತು ಎಂದು ಯೋಜನೆಯ ಪರಿಸರ ಪ್ರಭಾವ ಮೌಲ್ಯಮಾಪನ ವರದಿಯ ವಿಶ್ಲೇಷಣೆಯು ಬೆಟ್ಟು ಮಾಡಿತ್ತು.

ಎಡಭಾಗದಲ್ಲಿ ಪ್ರತ್ಯೇಕ ಸುರಂಗ ಮಾರ್ಗದ ಬದಲು ಉಭಯ ಕಡೆಗಳಲ್ಲಿ ಏಕಮುಖ ಸಂಚಾರಕ್ಕಾಗಿ ಸುರಂಗದ ಮಧ್ಯದಲ್ಲಿ ವಿಭಾಜಕವನ್ನು ನಾವು ಅಳವಡಿಸಿದ್ದೆವು. ಇದು ವಾಹನಗಳ ಸಂಚಾರಕ್ಕೆ ಹೆಚ್ಚಿನ ಸ್ಥಳವನ್ನು ಒದಗಿಸಿತ್ತು ಮತ್ತು ಮುಖಾಮುಖಿ ಡಿಕ್ಕಿಗಳ ಅಪಾಯವನ್ನು ನಿವಾರಿಸಿತ್ತು ಎಂದು ಹಿರಿಯ ಪ್ರಾಜೆಕ್ಟ್ ಇಂಜಿನಿಯರ್ ಓರ್ವರು ಮಾಧ್ಯಮಗಳಿಗೆ ತಿಳಿಸಿದ್ದರು. ಆದರೆ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಸುರಂಗ ತಜ್ಞರೋರ್ವರು,ಸಿಲ್ಕ್ಯಾರಾ ಸುರಂಗವು ಸಂಪೂರ್ಣವಾಗಿ ಮುಚ್ಚಿ ಹೋಗಿದ್ದು ವಿಭಾಜಕದ ಸ್ಥಾನವನ್ನು ಅಪ್ರಸ್ತುತಗೊಳಿಸಿತ್ತು ಮತ್ತು ಕಾರ್ಮಿಕರನ್ನು ತೆರವುಗೊಳಿಸಲು ಪ್ರತ್ಯೇಕ ಸುರಂಗ ಮಾರ್ಗವು ಮಾತ್ರ ನೆರವಾಗಬಹುದಿತ್ತು ಎಂದು ಹೇಳಿದ್ದರು.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಅಧೀನದಲ್ಲಿರುವ ಎನ್‌ಎಚ್‌ಐಡಿಸಿಎಲ್ ಡಿ.31ರಂದು ನೀಡಿರುವ ಆರ್‌ಟಿಐ ಉತ್ತರದಲ್ಲಿ ಈ ವಿಷಯದಲ್ಲಿ ಗುತ್ತಿಗೆದಾರ ಸಂಸ್ಥೆ ನವಯುಗ ಇಂಜಿನಿಯರಿಂಗ್ ಕಂಪನಿ ಲಿ.ವಿರುದ್ಧ ಯಾವುದೇ ಎಫ್‌ಐಆರ್‌ನ್ನು ದಾಖಲಿಸಲಾಗಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ.

‘ಸಚಿವಾಲಯವು ರಚಿಸಿರುವ ಸಮಿತಿಯು ನಡೆಸುತ್ತಿರುವ ತನಿಖೆಯ ಫಲಿತಾಂಶಕ್ಕಾಗಿ ನಾವು ಕಾಯುತ್ತಿದ್ದೇವೆ’ಎಂದು ಎನ್‌ಎಚ್‌ಐಡಿಸಿಎಲ್(ಬಾರ್ಕೋಟ್)ನ ಜನರಲ್ ಮ್ಯಾನೇಜರ್ ಕರ್ನಲ್ ಪ್ರದೀಪ ಪಾಟೀಲ್ ಅವರು ಆರ್‌ಟಿಐ ಅರ್ಜಿದಾರ ಅಮರಾವತಿ ನಿವಾಸಿ ಅಜಯ ಬೋಸ್ ಅವರಿಗೆ ನೀಡಿರುವ ಉತ್ತರದಲ್ಲಿ ತಿಳಿಸಿದ್ದಾರೆ. ಸಮಿತಿಯು 12.12.2023 ಮತ್ತು 15.12.2023ರ ನಡುವೆ ಸುರಂಗ ಕುಸಿತ ಸ್ಥಳಕ್ಕೆ ಭೇಟಿ ನೀಡಿದ್ದು,ತನ್ನ ಅಂತಿಮ ತನಿಖಾ ವರದಿಯನ್ನು ಅದು ಇನ್ನಷ್ಟೇ ಪ್ರಕಟಿಸಬೇಕಿದೆ.

ಮಹಾರಾಷ್ಟ್ರದ ಠಾಣೆ ಜಿಲ್ಲೆಯಲ್ಲಿ ನಾಗಪುರ-ಮುಂಬೈ ಸಮೃದ್ಧಿ ಎಕ್ಸ್‌ಪ್ರೆಸ್‌ವೇದ ಮೂರನೇ ಹಂತದ ನಿರ್ಮಾಣ ಸಂದರ್ಭ ಗರ್ಡರ್ ಕುಸಿದು 20 ಕಾರ್ಮಿಕರು ಮತ್ತು ಇಂಜಿನಿಯರ್‌ಗಳು ಸಾವನ್ನಪ್ಪಿದ್ದರು ಈ ಅವಘಡ ಸಂಭವಿಸಿದ ಮೂರು ತಿಂಗಳಲ್ಲೇ ಸಿಲ್ಕ್ಯಾರಾ ಸುರಂಗ ಕುಸಿದಿತ್ತು. ನವಯುಗ ಕಂಪೆನಿಯೇ ಸಮೃದ್ಧಿ ಎಕ್ಸ್‌ಪ್ರೆಸ್‌ವೇ ಯೋಜನೆಗೂ ಪ್ರಮುಖ ಗುತ್ತಿಗೆದಾರನಾಗಿತ್ತು. ಆದರೆ ಸಮೃದ್ಧಿ ಎಕ್ಸ್‌ಪ್ರೆಸ್‌ವೇ ಪ್ಯಾಕೇಜ್ 16ರ ನಿರ್ಮಾಣಕ್ಕಾಗಿ ನಿಯೋಜಿಸಲಾಗಿದ್ದ ಉಪಗುತ್ತಿಗೆದಾರನ ವಿರುದ್ಧ ಮಾತ್ರ ಎಫ್‌ಐಆರ್ ದಾಖಲಾಗಿತ್ತು.

ಸಿಲ್ಕ್ಯಾರಾ ಸುರಂಗ ನಿರ್ಮಾಣವು ನರೇಂದ್ರ ಮೋದಿ ಸರಕಾರದ ಚಾರ್ ಧಾಮ್ ಸರ್ವಋತು ರಸ್ತೆ ಯೋಜನೆಯ ಭಾಗವಾಗಿದೆ. 

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News