ಲಲನ್ ಸಿಂಗ್ ನಿರ್ಗಮನ ಬೆನ್ನಲ್ಲೇ ಜೆಡಿ(ಯು) ರಾಷ್ಟ್ರೀಯ ಅಧ್ಯಕ್ಷರಾಗಿ ನಿತೀಶ್ ಕುಮಾರ್ ಆಯ್ಕೆ
ಹೊಸದಿಲ್ಲಿ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಮ್ಮ ಪಕ್ಷ ಜನತಾ ದಳ (ಯುನೈಟೆಡ್) ಇದರ ರಾಷ್ಟ್ರೀಯ ಅಧ್ಯಕ್ಷರಾಗಿ ಇಂದು ರಾಜಧಾನಿಯಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆಯಾದರು. ಅವರ ಆಪ್ತ ಹಾಗೂ ಪಕ್ಷದ ಹಿಂದಿನ ರಾಷ್ಟ್ರೀಯ ಅಧ್ಯಕ್ಷ ಲಲನ್ ಸಿಂಗ್ ಅವರು ಸ್ಪರ್ಧೆಯಿಂದ ಹಿಂದೆ ಸರಿದ ಕೂಡಲೇ ನಿತೀಶ್ ಕುಮಾರ್ ಪುನರಾಯ್ಕೆಯಾಗಿ ವಾರಗಳ ಕಾಲ ಮುಂದುವರಿದಿದ್ದ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.
ಲಲನ್ ಸಿಂಗ್ ಅವರು ಬಿಹಾರದಲ್ಲಿ ಜೆಡಿಯು ಮಿತ್ರ ಪಕ್ಷ ಲಾಲು ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾ ದಳಕ್ಕೆ ಹತ್ತಿರವಾಗಿದ್ದಾರೆಂಬ ಸುದ್ದಿಗಳ ಹಿನ್ನೆಲೆಯಲ್ಲಿ ಅವರನ್ನು ಕೈಬಿಡಲಾಗಿದೆ ಎಂದು ಹೇಳಲಾಗಿದೆ.
ಜೆಡಿಯು ಶೀಘ್ರದಲ್ಲೇ ಆರ್‌ಜೆಡಿ ಜೊತೆ ವಿಲೀನವಾಗಲಿದೆ ಎಂದು ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ಹೇಳಿಕೊಂಡಿದ್ದೂ ಸುದ್ದಿಯಾಗಿತ್ತು. ಆದರೆ ಈ ವದಂತಿಯನ್ನು ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರೇ ನಿರಾಕರಿಸಿದ್ದಾರೆ.
ಮುಂದಿನ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸ್ವಕ್ಷೇತ್ರದತ್ತ ಹೆಚ್ಚಿನ ಗಮನ ನೀಡಬೇಕಿದೆ ಎಂದು ಲಲನ್ ಸಿಂಗ್ ಅವರು ನಿತೀಶ್ ಕುಮಾರ್‌ಗೆ ಹೇಳಿದ್ದಾರೆಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ.