ಪ್ರಧಾನಿ ಮೋದಿಯ ಪಾದ ಸ್ಪರ್ಶಿಸುವ ಮೂಲಕ ನಿತೀಶ್ ಕುಮಾರ್ ಬಿಹಾರದ ಮಾನ ಕಳೆದಿದ್ದಾರೆ: ಪ್ರಶಾಂತ್ ಕಿಶೋರ್ ವಾಗ್ದಾಳಿ

Update: 2024-06-15 06:15 GMT

Photo: NDTV

ಭಗಲ್ಪುರ್ (ಬಿಹಾರ): ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಮ್ಮ ಅಧಿಕಾರಾವಧಿ ಮುಂದುವರಿಯುವುದನ್ನು ಖಾತರಿ ಪಡಿಸಿಕೊಳ್ಳಲು ಪ್ರಧಾನಿ ಮೋದಿಯವರ ಪಾದ ಸ್ಪರ್ಶಿಸಿದ್ದಾರೆ ಎಂದು ಶುಕ್ರವಾರ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ವಾಗ್ದಾಳಿ ನಡೆಸಿದ್ದಾರೆ.

ಬಿಹಾರದಲ್ಲಿ ‘ಜನ್ ಸುರಾಜ್’ ಅಭಿಯಾನವನ್ನು ನಡೆಸುತ್ತಿರುವ ಪ್ರಶಾಂತ್ ಕಿಶೋರ್, ಅದರ ಭಾಗವಾಗಿ ಭಗಲ್ಪುರ್ ನಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, “ನಿತೀಶ್ ಕುಮಾರ್ ಅವರೊಂದಿಗೆ ಈ ಹಿಂದೆ ಕೆಲಸ ಮಾಡಿದ್ದರೂ, ಈಗೇಕೆ ಅವರನ್ನು ಟೀಕಿಸುತ್ತಿದ್ದೀರಿ ಎಂದು ಜನರು ನನ್ನನ್ನು ಪ್ರಶ್ನಿಸುತ್ತಾರೆ. ನಾನು ಅವರೊಂದಿಗೆ ಕೆಲಸ ಮಾಡಿದ್ದ ಸಮಯದಲ್ಲಿ ಅವರು ವಿಭಿನ್ನ ವ್ಯಕ್ತಿಯಾಗಿದ್ದರು. ಅವರು ತಮ್ಮ ಆತ್ಮಸಾಕ್ಷಿಯನ್ನು ಮಾರಿಕೊಂಡಿರಲಿಲ್ಲ” ಎಂದು ಹೇಳಿದ್ದಾರೆ.

2015ರಲ್ಲಿ ಸಂಯುಕ್ತ ಜನತಾದಳದ ಅಧ್ಯಕ್ಷೀಯ ಚುನಾವಣೆಯನ್ನು ನಿರ್ವಹಿಸಿದ್ದ ಪ್ರಶಾಂತ್ ಕಿಶೋರ್, ಎರಡು ವರ್ಷಗಳ ನಂತರ ಆ ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಯಾಗಿದ್ದರು.

“ರಾಜ್ಯ ಮಟ್ಟದ ನಾಯಕನೊಬ್ಬ ಅಲ್ಲಿನ ಜನರ ಹೆಮ್ಮೆಯಾಗಿರುತ್ತಾನೆ. ಆದರೆ, ನಿತೀಶ್ ಕುಮಾರ್ ಅವರು ಪ್ರಧಾನಿ ಮೋದಿಯವರ ಪಾದ ಸ್ಪರ್ಶಿಸುವ ಮೂಲಕ ಬಿಹಾರಕ್ಕೆ ಅಪಮಾನವೆಸಗಿದ್ದಾರೆ” ಎಂದು ಕಳೆದ ವಾರ ದಿಲ್ಲಿಯಲ್ಲಿ ನಡೆದಿದ್ದ ಎನ್ಡಿಎ ಸಭೆಯನ್ನು ಉಲ್ಲೇಖಿಸಿ ಅವರು ಟೀಕಿಸಿದ್ದಾರೆ.

“ಪ್ರಧಾನಿ ಮೋದಿ ಅಧಿಕಾರಕ್ಕೆ ಮರಳುವಲ್ಲಿ ನಿತೀಶ್ ಕುಮಾರ್ ಬಹು ಮುಖ್ಯ ಪಾತ್ರ ನಿರ್ವಹಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ಬಿಹಾರ ಮುಖ್ಯಮಂತ್ರಿಯು ತಮ್ಮ ಸ್ಥಾನವನ್ನು ಹೇಗೆ ಬಳಸಿಕೊಳ್ಳುತ್ತಿದ್ದಾರೆ? ಅವರು ತಮ್ಮ ಪ್ರಭಾವವನ್ನು ರಾಜ್ಯಕ್ಕೆ ಅನುಕೂಲವಾಗುವುದನ್ನು ಖಾತರಿ ಪಡಿಸಲು ಬಳಸುತ್ತಿಲ್ಲ. ಆದರೆ, 2025ರ ವಿಧಾನಸಭಾ ಚುನಾವಣೆಯ ಬಳಿಕವೂ ಬಿಜೆಪಿಯ ಬೆಂಬಲದೊಂದಿಗೆ ಅಧಿಕಾರದಲ್ಲಿ ಮುಂದುವರಿಯಲು ಅವರು ಪ್ರಧಾನಿ ಮೋದಿಯ ಪಾದ ಸ್ಪರ್ಶಿಸಿದ್ದಾರೆ” ಎಂದು ಆರೋಪಿಸಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷವು 12 ಸ್ಥಾನಗಳನ್ನು ಗಳಿಸುವ ಮೂಲಕ ಬಿಜೆಪಿಯ ಮತ್ತೊಂದು ಮೈತ್ರಿಪಕ್ಷವಾದ ಟಿಡಿಪಿಯ ನಂತರ ಅತಿ ಹೆಚ್ಚು ಸ್ಥಾನ ಗಳಿಸಿರುವ ಎರಡನೆಯ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಸ್ವಂತ ಬಲದಲ್ಲಿ ಬಹುಮತ ಪಡೆಯುವಲ್ಲಿ ವಿಫಲವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News