HSRP ನಂಬರ್‌ ಪ್ಲೇಟ್‌ ಅಳವಡಿಸದ ವಾಹನ ಚಾಲಕರ ವಿರುದ್ಧ ಬಲವಂತದ ಕ್ರಮವಿಲ್ಲ : ಕರ್ನಾಟಕ ಸಾರಿಗೆ ಆಯುಕ್ತ ಯೋಗೇಶ್

Update: 2024-09-15 06:24 GMT

ಬೆಂಗಳೂರು : ವಾಹನಗಳಿಗೆ HSRP ನಂಬರ್ ಪ್ಲೇಟ್‌ ಅಳವಡಿಸುವ ಗಡುವು ನಾಳೆಗೆ(ಸೆ.15) ಮುಕ್ತಾಯಗೊಳ್ಳಲಿದ್ದು, HSRP ನಂಬರ್‌ ಪ್ಲೇಟ್‌ ಅಳವಡಿಸದ ವಾಹನ ಚಾಲಕರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳುವುದಿಲ್ಲ ಹಾಗೂ ಗಡುವನ್ನು ವಿಸ್ತರಿಸುವ ಕುರಿತು ಚಿಂತಿಸಲಾಗುವುದು ಎಂದು ಕರ್ನಾಟಕ ರಾಜ್ಯ ಸಾರಿಗೆ ರಸ್ತೆ ಸುರಕ್ಷತಾ ಇಲಾಖೆ ಶುಕ್ರವಾರ ಸ್ಪಷ್ಟಪಡಿಸಿದೆ. ಈ ಸಂಬಂಧ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆಯು ರಾಜ್ಯ ಹೈಕೋರ್ಟ್ ನಲ್ಲಿ ಸೆಪ್ಟೆಂಬರ್ 18ರಂದು ನಡೆಯಲಿದೆ.

ಇದಕ್ಕೂ ಮುನ್ನ, ಸೆಪ್ಟೆಂಬರ್ 16ರಿಂದ HSRP ಸಂಖ್ಯಾಫಲಕ ಅಳವಡಿಸದ ಚಾಲಕರಿಗೆ ಮೊದಲ ಬಾರಿಗೆ ರೂ. 500 ಹಾಗೂ ಪುನರಾವರ್ತಿಸಿದರೆ ರೂ. 1000 ದಂಡ ವಿಧಿಸಲು ರಾಜ್ಯ ಸಾರಿಗೆ ಇಲಾಖೆ ಅಧಿಕಾರಿಗಳು ಚಿಂತಿಸುತ್ತಿದ್ದಾರೆ ಎಂದು ವರದಿಯಾಗಿತ್ತು. HSRP ಸಂಖ್ಯಾಫಲಕ ಅಳವಡಿಸಿಕೊಳ್ಳಲು ನಿಗದಿಪಡಿಸಲಾಗಿರುವ ಗಡುವು ಸೆಪ್ಟೆಂಬರ್ 15ಕ್ಕೆ ಅಂತ್ಯಗೊಳ್ಳಲಿದೆ.

ಈ ಕುರಿತು The Indian Express ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ರಾಜ್ಯ ಸಾರಿಗೆ ಆಯುಕ್ತ ಯೋಗೇಶ್ ಎ.ಎಂ., ಗಡುವನ್ನು ಉಲ್ಲಂಘಿಸಿದ ವಾಹನ ಚಾಲಕರಿಗೆ ದಂಡ ವಿಧಿಸಲಾಗಲಿ ಅಥವಾ HSRP ಸಂಖ್ಯಾಫಲಕ ಅಳವಡಿಸಿಕೊಳ್ಳಲು ಇನ್ನೂ ಹೆಚ್ಚು ಕಾಲಾವಕಾಶ ನೀಡುವ ಕುರಿತಾಗಲಿ ಸಾರಿಗೆ ಇಲಾಖೆಯಿನ್ನೂ ನಿರ್ಧರಿಸಿಲ್ಲ ಎಂದು ಹೇಳಿದ್ದಾರೆ.

ಸಾರಿಗೆ ಇಲಾಖೆಯ ಪ್ರಕಾರ, 2 ಕೋಟಿ ವಾಹನ ಚಾಲಕರ ಪೈಕಿ ಕೇವಲ ಶೇ. 26ರಷ್ಟು ಚಾಲಕರು ಮಾತ್ರ ಇದುವರೆಗೆ ತಮ್ಮ ವಾಹನಗಳಿಗೆ HSRP ಸಂಖ್ಯಾಫಲಕವನ್ನು ಅಳವಡಿಸಿಕೊಂಡಿದ್ದಾರೆ. HSRP ಸಂಖ್ಯಾಫಲಕವನ್ನು ಅಳವಡಿಸಿಕೊಳ್ಳಲು ಹಲವು ಬಾರಿ ಗಡುವು ವಿಧಿಸಿದರೂ, ವಾಹನ ಚಾಲಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹೇಳಲಾಗಿದೆ.

ಈ ನಡುವೆ, HSRP ಸಂಖ್ಯಾಫಲಕವನ್ನು ಕಡ್ಡಾಯಗೊಳಿಸಿ ಆಗಸ್ಟ್ 17, 2023ರಂದು ಹೊರಡಿಸಲಾಗಿರುವ ಸಾರಿಗೆ ಇಲಾಖೆಯ ಅಧಿಸೂಚನೆಯನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್ ಗೆ ಅರ್ಜಿ ಸಲ್ಲಿಕೆಯಾಗಿದೆ. ಈ ಅಧಿಸೂಚನೆಯ ಪ್ರಕಾರ ಅಸಲಿ ಸಾಧನ ತಯಾರಕರು ಮಾತ್ರ HSRP ಸಂಖ್ಯಾಫಲಕಗಳನ್ನು ಅಳವಡಿಸಬಹುದಾಗಿದೆ. ಆದರೆ, ಈ ಸಂಖ್ಯಾಫಲಕಗಳನ್ನು ಅಳವಡಿಸಲು ಮಾದರಿ ಅನುಮೋದನೆ ಪ್ರಮಾಣ ಪತ್ರ ಹೊಂದಿರುವವರಿಗೂ ಅವಕಾಶ ನೀಡಬೇಕು ಎಂದು ಮನವಿ ಮಾಡಲಾಗಿದೆ.

ಸೌಜನ್ಯ : indianexpress.com

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News