ಬಿಜೆಪಿಗೆ ಮತ ನೀಡದವರಿಗೆ ನೀರಿಲ್ಲ; ಮಧ್ಯಪ್ರದೇಶದ ಗ್ರಾಮದಲ್ಲಿ ಬೆಳಕಿಗೆ ಬಂದ ಘಟನೆ

Update: 2023-11-22 18:14 GMT

Photo: X \ @rssurjewala

ಹೊಸದಿಲ್ಲಿ: ಮಧ್ಯಪ್ರದೇಶ ವಿಧಾನಸಭೆಗೆ ಶಾಂತಿಯುತ ಮತದಾನ ನಡೆದ ಕೇವಲ ಎರಡು ದಿನಗಳ ಬಳಿಕ ಆಡಳಿತಾರೂಢ ಬಿಜೆಪಿಗೆ ತಾವು ಮತಚಲಾಯಿಸಿರುವುದಾಗಿ ಪ್ರಮಾಣ ಮಾಡದೆ ಇದ್ದಲ್ಲಿ ಸರಕಾರಿ ನಿರ್ಮಿತ ಕೊಳವೆಬಾವಿಗಳಿಂದ ನೀರನ್ನು ತೆಗೆಯಲು ಗ್ರಾಮೀಣ ಮಹಿಳೆಯರಿಗೆ ನಿರಾಕರಿಸಲಾಗುತ್ತಿದೆ ಎಂಬ ಕಳವಳಕಾರಿ ವಿಷಯ ಬೆಳಕಿಗೆ ಬಂದಿದೆ.

ಮುಂಗಾವಲಿ ವಿಧಾನಸಭಾ ಕ್ಷೇತ್ರದಲ್ಲಿನ ನಾಯಖೇಡ ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ. ‘‘ಬಿಜೆಪಿಗೆ ಮತಚಲಾಯಿಸಿದ್ದೀರಾ ಅಥವಾ ಇಲ್ಲವಾ ಎಂದು ಅವರು ಗ್ರಾಮಸ್ಥರನ್ನು ಕೇಳುತ್ತಿದ್ದಾರೆ. ಒಂದು ವೇಳೆ ನಾವು ಇಲ್ಲವೆಂದು ಹೇಳಿದರೆ, ಅವರು ಮೋಟಾರ್ ಬಂದ್ ಮಾಡಿ, ನಮ್ಮನ್ನು ಅಲ್ಲಿಂದ ಹೊರದಬ್ಬುತ್ತಾರೆ’’ ಎಂದು ಎಂದು ಶ್ಯಾಮ ಬಾಯಿ ಎಂಬ ಮಹಿಳೆ ಆರೋಪಿಸಿದ್ದಾರೆ.

ಮತದಾನದ ಮುಕ್ತಾಯದ ಬೆನ್ನಿಗೇ ಅವರು ಬೋರ್ ವೆಲ್ ನಿಂದ ನೀರು ಬಿಡುವುದನ್ನು ಸಂಪೂರ್ಣ ನಿಲ್ಲಿಸಿಬಿಟ್ಟಿದ್ದಾರೆ ಎಂದು ಅದೇ ಗ್ರಾಮದ ಇನ್ನೋರ್ವ ಯುವತಿಯೊಬ್ಬಳು ಹೇಳಿದ್ದಾರೆ.

ಇತರ ನಿವಾಸಿಗಳು ಕೂಡಾ ಇದೇ ರೀತಿಯ ಆರೋಪಗಳನ್ನು ಮಾಡಿದ್ದರಾದರೂ ಬಿಜೆಪಿಯನ್ನು ನೇರವಾಗಿ ಹೆಸರಿಸಿಲ್ಲ ಹೂವಿಗೆ (ಬಿಜೆಪಿಯ ಚಿಹ್ನೆ ತಾವರೆ)ಗೆ ಮತಹಾಕದೆ ಇದ್ದವರಿಗೆ ನೀರು ನೀಡಲಾಗುವುದಿಲ್ಲವೆಂದು ಹೇಳಲಾಗುತ್ತಿದೆ ಎಂದವರು ದೂರಿದ್ದಾರೆ.

ಆದರೆ ಮಧ್ಯಪ್ರದೇಶದ ಸಚಿವ ಬ್ರಿಜೇಂದ್ರ ಸಿಂಗ್ ಯಾದವ್ ಈ ಆರೋಪವನ್ನು ನಿರಾಕರಿಸಿದ್ದಾರೆ. ಗ್ರಾಮದಲ್ಲಿ 4 ಸರಕಾರಿ ಕೊಳವೆ ಬಾವಿಗಳಿದ್ದು, ಅವುಗಳಿಂದ ಪ್ರತಿಯೊಬ್ಬರಿಗೂ ಸರಕಾರಿ ನೀರನ್ನು ಒದಗಿಸುತ್ತಿದ್ದೇವೆ ಎಂದವರು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷವು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದೆ. ಬಿಜೆಪಿಯ ಕ್ರೌರ್ಯದ ಉತ್ತುಂಗವನ್ನು ನೋಡಿ. ತಮಗೆ ಮತಹಾಕದವರಿಗೆ ನೀರು ಕೊಡದೆ ಕೊಲ್ಲಲು ಅವರು ಕಟಿಬದ್ಧರಾಗಿದ್ದಾರೆ’’ ಎಂದು ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ‘x’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮಧ್ಯಪ್ರದೇಶ ವಿಧಾನಸಭೆಗೆ ನ.17ರಂದು ಒಂದೇ ಹಂತದಲ್ಲಿ ಮತದಾನ ನಡೆದಿತ್ತು.



Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News