ತಂಬಾಕು ಪರ ಪ್ರಚಾರ: ಬಾಲಿವುಡ್ ನಟರಾದ ಶಾರೂಖ್ ಖಾನ್, ಅಕ್ಷಯ್ ಕುಮಾರ್, ಅಜಯ್ ದೇವಗನ್ ಗೆ ನೋಟಿಸ್
ಅಲಹಾಬಾದ್: ಅಕ್ಟೋಬರ್ 20ರಂದು ತಂಬಾಕು ಪರ ಪ್ರಚಾರ ಮಾಡಿದ್ದಕ್ಕಾಗಿ ಬಾಲಿವುಡ್ ನಟರಾದ ಶಾರೂಖ್ ಖಾನ್, ಅಕ್ಷಯ್ ಕುಮಾರ್ ಹಾಗೂ ಅಜಯ್ ದೇವಗನ್ ಅವರಿಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರವು ನೋಟಿಸ್ ಜಾರಿಗೊಳಿಸಿದೆ ಎಂದು ಅಲಹಬಾಬಾದ್ ಹೈಕೋರ್ಟ್ ನ ಲಕ್ನೋ ಪೀಠಕ್ಕೆ ಉಪ ಸಾಲಿಸಿಟರ್ ಜನರಲ್ ಎಸ್.ಬಿ.ಪಾಂಡೆ ಮಾಹಿತಿ ನೀಡಿದ್ದಾರೆ. ಅವರು ನ್ಯಾಯಾಂಗ ನಿಂದನೆ ದೂರಿಗೆ ಪ್ರತಿಯಾಗಿ ಈ ಹೇಳಿಕೆ ನೀಡಿದ್ದಾರೆ ಎಂದು indiatoday.in ವರದಿ ಮಾಡಿದೆ.
ಸಾರ್ವಜನಿಕರ ಆರೋಗ್ಯಕ್ಕೆ ತೀವ್ರ ಸ್ವರೂಪದಲ್ಲಿ ಹಾನಿಯೆಸಗುವ ನಿರ್ದಿಷ್ಟ ಉತ್ಪನ್ನಗಳ ಪರ ಪ್ರಚಾರ ನಡೆಸುವುದು ಅಥವಾ ಜಾಹೀರಾತಿನಲ್ಲಿ ಪಾಲ್ಗೊಳ್ಳುವುದು, ವಿಶೇಷವಾಗಿ, ಪದ್ಮ ಪ್ರಶಸ್ತಿ ಪುರಸ್ಕೃತ ನಟರು ಭಾಗಿಯಾಗುವುದರ ಬಗ್ಗೆ ಕಳವಳ ವ್ಯಕ್ತಪಡಿಸಿ ವಕೀಲ ಮೋತಿಲಾಲ್ ಯಾದವ್ ಅವರು ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದರು.
ಅರ್ಜಿದಾರರಿಗೆ ಭಾರತ ಸರ್ಕಾರವನ್ನು ಎದುರುಗೊಳ್ಳುವಂತೆ ತಾನು ಸೆಪ್ಟೆಂಬರ್ 2022ರಲ್ಲಿ ನೀಡಿದ್ದ ಆದೇಶಕ್ಕೆ ಅನುಗುಣವಾಗಿ ಕ್ರಮ ಕೈಗೊಳ್ಳದಿರುವುದನ್ನು ಪರಿಗಣಿಸಿ, ಆಗಸ್ಟ್ 2023ರಲ್ಲಿ ದಾಖಲಾಗಿದ್ದ ನ್ಯಾಯಾಂಗ ನಿಂದನೆ ದೂರನ್ನು ಆಧರಿಸಿ ಸಂಪುಟ ಕಾರ್ಯದರ್ಶಿ, ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರದ ಮುಖ್ಯ ಆಯುಕ್ತರಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿತ್ತು.
ಈ ನೋಟಿಸ್ ಗೆ ಪ್ರತಿಕ್ರಿಯಿಸಿದ ಉಪ ಸಾಲಿಸಿಟರ್ ಜನರಲ್ ಎಸ್.ಬಿ.ಪಾಂಡೆ, ಅಕ್ಟೋಬರ್ 20ರಂದು ನಟರಾದ ಶಾರೂಖ್ ಖಾನ್, ಅಕ್ಷಯ್ ಕುಮಾರ್ ಹಾಗೂ ಅಜಯ್ ದೇವಗನ್ ಅವರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ನ್ಯಾ. ರಾಜೇಶ್ ಸಿಂಗ್ ಚೌಹಾಣ್ ನೇತೃತ್ವದ ನ್ಯಾಯಪೀಠಕ್ಕೆ ಮಾಹಿತಿ ನೀಡಿದರು.
ಅಮಿತಾಭ್ ಬಚ್ಚನ್ ತಮ್ಮ ಗುತ್ತಿಗೆ ಕರಾರರನ್ನು ರದ್ದುಗೊಳಿಸಿದ್ದರೂ, ತಾವಿರುವ ಜಾಹಿರಾತನ್ನು ಪ್ರಸಾರ ಮಾಡಿರುವ ತಂಬಾಕು ಕಂಪನಿಯ ವಿರುದ್ಧ ಅವರು ಕಾನೂನು ನೋಟಿಸ್ ಜಾರಿಗೊಳಿಸಿದ್ದಾರೆ ಎಂದೂ ಅವರು ಹೇಳಿದರು.
ಮುಂದಿನ ವಿಚಾರಣೆಯನ್ನು ಮೇ 9, 2024ಕ್ಕೆ ನಿಗದಿಗೊಳಿಸಲಾಗಿದೆ.