ಓಣಂ: ಮೊದಲ 9 ದಿನ ಕೇರಳದಲ್ಲಿ 665 ಕೋಟಿ ರೂಪಾಯಿಯ ಮದ್ಯ ಮಾರಾಟ!
ತಿರುವನಂತಪುರಂ: ಕೇರಳದಲ್ಲಿ ಓಣಂ ಹಬ್ಬದ ಮೊದಲ ಒಂಬತ್ತು ದಿನಗಳಲ್ಲಿ ಅಂದರೆ ಸೋಮವಾರದ ವರೆಗೆ 665 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದೆ. ಇದು ಕಳೆದ ವರ್ಷ ಇದೇ ಅವಧಿಯಲ್ಲಿ ಮಾರಾಟವಾದ ಮದ್ಯದ ಪ್ರಮಾಣಕ್ಕಿಂತ 41 ಕೋಟಿ ರೂಪಾಯಿಯಷ್ಟು ಅಧಿಕ ಎಂದು ವರದಿಗಳು ತಿಳಿಸಿವೆ.
ಬೆವ್ಕೊ (ಕೇರಳ ರಾಜ್ಯ ಪಾನೀಯ ನಿಗಮ) ಮಳಿಗೆಗಳಲ್ಲಿ ಉತ್ತರಡಮ್ (ಒಂಬತ್ತನೇ ದಿನ) ದಿನವೇ ಮದ್ಯ ಮಾರಾಟ 116.1 ಕೋಟಿ ರೂಪಾಯಿ ಆಗಿದೆ. ಕಳೆದ ವರ್ಷ ಈ ಒಂದು ದಿನದಲ್ಲಿ 112 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿತ್ತು. ಈ ದಿನ ಇರಿಂಜಲಕ್ಕೂಡ ಮಳಿಗೆಯಲ್ಲಿ ದಾಖಲೆಯ ಅಂದರೆ 1.06 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದೆ. ಕೊಲ್ಲಂನ ಅಸ್ರಾಮಂ ಬಂದರು ಮಳಿಗೆಯಲ್ಲಿ 1.01 ಕೋಟಿ ರೂಪಾಯಿ ಮೌಲ್ಯದ ಮದ್ಯ ಬಿಕರಿಯಾಗಿದೆ.
ಚಂಗನಸ್ಸೇರಿ (95.7 ಲಕ್ಷ), ಕೋರ್ಟ್ ಜಂಕ್ಷನ್ ಚೆತ್ರಾಲ (ರೂ. 93.7 ಲಕ್ಷ) ಮತ್ತು ಪಯ್ಯನೂರು (ರೂ. 91.6 ಲಕ್ಷ) ಮಳಿಗೆಗಳಲ್ಲಿ 90 ಲಕ್ಷಕ್ಕಿಂತ ಅಧಿಕ ಮೌಲ್ಯದ ಮದ್ಯ ಮಾರಾಟವಾಗಿದೆ.
ಅವಿತ್ತಂ (ಬುಧವಾರ) ವರೆಗೆ ಒಟ್ಟು 770 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗುವ ನಿರೀಕ್ಷೆ ಇದೆ ಎಂದು ಬೆವ್ಕೊ ಅಧಿಕಾರಿಗಳು ಹೇಳಿದ್ದಾರೆ. ಕಳೆದ ವರ್ಷ ಈ ಅವಧಿಯಲ್ಲಿ 700.6 ಕೋಟಿ ರೂಪಾಯಿಯ ಮದ್ಯ ಮಾರಾಟವಾಗಿತ್ತು.