ಒಂದು ರಾಷ್ಟ್ರ, ಒಂದು ಚುನಾವಣೆ | ಮೋದಿ ಸರಕಾರದ ಅವಧಿಯಲ್ಲೇ ಜಾರಿ : ಕೇಂದ್ರದ ಮೂಲಗಳಿಂದ ಮಾಹಿತಿ

Update: 2024-09-15 16:03 GMT

PC : smartneta.com

ಹೊಸದಿಲ್ಲಿ : ‘ಒಂದು ರಾಷ್ಟ್ರ ಒಂದು ಚುನಾವಣೆ’ ನೀತಿಯನ್ನು ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರವು ತನ್ನ ಹಾಲಿ ಅಧಿಕಾರಾವಧಿಯಲ್ಲಿಯೇ ಜಾರಿಗೊಳಿಸಲಿದೆಯೆಂದು ಮೂಲಗಳು ತಿಳಿಸಿವೆ. ಈ ಮಹತ್ವದ ಚುನಾವಣಾ ಸುಧಾರಣಾ ಕ್ರಮಕ್ಕೆ ಪಕ್ಷಭೇದ ಮೀರಿ ಬೆಂಬಲ ದೊರೆಯಲಿದೆಯೆಂಬ ಆತ್ಮವಿಶ್ವಾಸವನ್ನು ಅವು ವ್ಯಕ್ತಪಡಿಸಿವೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮೂರನೇ ಅವಧಿಯ ಎನ್‌ಡಿಎ ಸರಕಾರವು ತನ್ನ ಅಧಿಕಾರಾವಧಿಯ 100 ದಿನಗಳನ್ನು ಪೂರ್ಣಗೊಳಿಸಿದ್ದು, ಇನ್ನುಳಿದ ಅವಧಿಯಲ್ಲೂ ಆಡಳಿತಾರೂಢ ಮೈತ್ರಿಕೂಟದ ಪಕ್ಷಗಳ ಒಗ್ಗಟ್ಟು ಮುಂದುವರಿಯಲಿದೆಯೆಂದು ಮೂಲಗಳು ತಿಳಿಸಿವೆ.

‘‘ಖಂಡಿತವಾಗಿಯೂ, ಈ ಅವಧಿಯಲ್ಲಿಯೇ ಒಂದು ರಾಷ್ಟ್ರ ಒಂದು ಚುನಾವಣೆಯನ್ನು ಜಾರಿಗೊಳಿಸಲಾಗುವುದು. ಅದು ವಾಸ್ತವವಾಗಲಿದೆ’’ ಎಂದು ಹೆಸರು ಬಹಿರಂಗಪಡಿಸಲಿಚ್ಚಿಸದ ಕೇಂದ್ರ ಸರಕಾರದ ಮೂಲವೊಂದು ತಿಳಿಸಿದೆ.

ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿಯವರು ಕೆಂಪುಕೋಟೆಯಲ್ಲಿ ಮಾಡಿದ ಸ್ವಾತಂತ್ರ್ಯದಿನಾಚರಣೆಯ ಭಾಷಣದಲ್ಲಿ ‘ಒಂದು ರಾಷ್ಟ್ರ, ಒಂದು ಚುನಾವಣೆ’ಯ ಅಗತ್ಯವನ್ನು ಪ್ರಬಲವಾಗಿ ಪ್ರತಿಪಾದಿಸಿದ್ದರು. ಆಗಾಗ್ಗೆ ಚುನಾವಣೆಗಳನ್ನು ನಡೆಸುವುದರಿಂದ ದೇಶದ ಪ್ರಗತಿ ಕುಂಠಿತವಾಗುತ್ತದೆ. ಆದುದರಿಂದ ‘ಒಂದು ರಾಷ್ಟ್ರ, ಒಂದು ಚುನಾವಣೆ’ ನೀತಿಯನ್ನು ಅಳವಡಿಸಿಕೊಳ್ಳಲು ದೇಶವು ಮುಂದಾಗಬೇಕಾಗಿದೆ ಎಂದು ಅವರು ಕರೆ ನೀಡಿದ್ದರು.

ರಾಷ್ಟ್ರೀಯ ಸಂಪನ್ಮೂಲಗಳು ಶ್ರೀಸಾಮಾನ್ಯನಿಗಾಗಿಯೇ ಬಳಕೆಯಾಗುವುದನ್ನು ಖಾತರಿಪಡಿಸಿಕೊಳ್ಳಬೇಕೆಂದು ಅವರು ರಾಜಕೀಯ ಪಕ್ಷಗಳಿಗೆ ಕರೆ ನೀಡಿದ್ದರು. ‘ ಒಂದು ರಾಷ್ಟ್ರ, ಒಂದು ಚುನಾವಣೆ’ಯ ಕನಸನ್ನು ನನಸು ಮಾಡಲು ನಾವು ಮುನ್ನಡಿಯಿಡಬೇಕಾಗಿದೆ ಎಂದು ಮೋದಿ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಹೇಳಿದ್ದರು.

‘ಒಂದು ರಾಷ್ಟ್ರ, ಒಂದು ಚುನಾವಣೆ’ಯು ಈ ಸಲದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಚುನಾವಣಾ ಪ್ರಣಾಳಿಕೆಯ ಪ್ರಮುಖ ಭರವಸೆಗಳಲ್ಲೊಂದಾಗಿತ್ತು. ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೇತೃತ್ವದ ಉನ್ನತ ಸಮಿತಿಯು ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಯನ್ನು ಏಕಕಾಲದಲ್ಲಿ ನಡೆಸುವಂತೆ, ಆ ನಂತರ 100 ದಿನಗಳೊಳಗೆ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆಸುವಂತೆ ಶಿಫಾರಸು ಮಾಡಿತ್ತು.

2029ರಿಂದ ಮೊದಲ್ಗೊಂಡು ಲೋಕಸಭೆ, ರಾಜ್ಯ ವಿಧಾನಸಭೆಗಳಿಗೆ ಹಾಗೂ ಪುರಸಭೆ ಹಾಗೂ ಪಂಚಾಯತ್‌ಗಳಂತಹ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವಂತೆ ಕಾನೂನು ಆಯೋಗ ಕೂಡಾ ಶಿಫಾರಸು ಮಾಡುವ ಸಾಧ್ಯತೆಯಿದೆ. ಅಲ್ಲದೆ ತ್ರಿಶಂಕು ಸಂಸತ್/ವಿಧಾನಸಭೆ ಅಥವಾ ಅವಿಶ್ವಾಸ ನಿರ್ಣಯದಂತಹ ಪ್ರಕರಣಗಳಲ್ಲಿ ಸರಕಾರದಲ್ಲಿ ಏಕತೆಯನ್ನು ಕಾಪಾಡುವ ನಿಟ್ಟಿನಲ್ಲಿ ಕಾನೂನೊಂದನ್ನು ರೂಪಿಸುವಂತೆಯೂ ಅದು ಸಲಹೆ ನೀಡುವ ಸಾಧ್ಯತೆಯಿದೆ.

ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವುದಕ್ಕೆ ಯಾವುದೇ ನಿರ್ದಿಷ್ಟ ಕಾಲಮಿತಿಯನ್ನು ಕೋವಿಂದ್ ಸಮಿತಿಯು ಸೂಚಿಸಿಲ್ಲ. ಆದರೆ ಸಮಿತಿಯ ಶಿಫಾರಸುಗಳನ್ನು ಕಾರ್ಯಗತಗೊಳಿಸುವುದಕ್ಕೆ ಅನುಷ್ಠಾನ ತಂಡವೊಂದನ್ನು ರಚಿಸುವ ಬಗ್ಗೆ ಅದು ಪ್ರಸ್ತಾಪ ಮಾಡಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News