ರಾಜ್ಯಸಭಾಧ್ಯಕ್ಷ ಜಗದೀಪ್ ಧನ್ಕರ್ ವಿರುದ್ಧದ ವಿರೋಧ ಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Update: 2024-12-19 16:00 GMT

ಜಗದೀಪ್ ಧನ್ಕರ್ (Photo: PTI)

ಹೊಸದಿಲ್ಲಿ: ಉಪ ರಾಷ್ಟ್ರಪತಿ ಜಗದೀಫ್ ಧನ್ಕರ್ ಅವರ ವಿರುದ್ಧ ಅವಿಶ್ವಾಸ ನಿಲುವಳಿ ಮಂಡಿಸಲು ವಿರೋಧ ಪಕ್ಷಗಳು ಸಲ್ಲಿಸಿದ ನೋಟಿಸನ್ನು ರಾಜ್ಯ ಸಭೆಯ ಉಪ ಸಭಾಪತಿ ಹರಿವಂಶ್ ಅವರು ಗುರುವಾರ ತಿರಸ್ಕರಿಸಿದ್ದಾರೆ.

ಉಪ ಸಭಾಪತಿಯ ನಿರ್ಧಾರವನ್ನು ಪ್ರಧಾನ ಕಾರ್ಯದರ್ಶಿ ಪಿ.ಸಿ. ಮೋದಿ ಗುರುವಾರ ಸದನದಲ್ಲಿ ಮಂಡಿಸಿದರು.

ಈ ನೋಟಿಸ್ ಅನ್ನು ಸಾಂವಿಧಾನ ಸಂಸ್ಥೆಯನ್ನು ದುರ್ಬಲಗೊಳಿಸಲು ಹಾಗೂ ಉಪ ರಾಷ್ಟ್ರಪತಿ ಅವರಿಗೆ ಮಾನ ಹಾನಿ ಉಂಟು ಮಾಡಲು ವಿನ್ಯಾಸಗೊಳಿಸಲಾಗಿದೆ ಎಂದು ರಾಜ್ಯ ಸಭೆಯ ಉಪ ಸಭಾಪತಿ ಹರಿವಂಶ್ ಅವರು ಅಭಿಪ್ರಾಯಿಸಿದ್ದಾರೆ.

ಉಪರಾಷ್ಟ್ರಪತಿ ಅವರನ್ನು ವೈಯುಕ್ತಿಕವಾಗಿ ಗುರಿಯಾಗಿರಿಸಿದ ಈ ನೋಟಿಸ್ ವಾಸ್ತವಾಂಶಗಳನ್ನು ಒಳಗೊಂಡಿಲ್ಲ ಹಾಗೂ ಪ್ರಚಾರ ಪಡೆಯುವ ಉದ್ದೇಶವನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ.

ಈ ನೋಟಿಸ್ ಹಲವು ದೋಷಗಳಿಂದ ಕೂಡಿದೆ. ಅಲ್ಲದೆ, ತರಾತುರಿಯಲ್ಲಿ ಸಲ್ಲಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಆದುದರಿಂದ ಈ ನೋಟಿಸ್ ಅನ್ನು ವಜಾಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಉಪರಾಷ್ಟ್ರಪತಿ ಅವರನ್ನು ಹುದ್ದೆಯಿಂದ ವಜಾಗೊಳಿಸುವಂತೆ ಡಿಸೆಂಬರ್ 10ರಂದು ಸಲ್ಲಿಸಿದ ಈ ನೋಟಿಸ್‌ಗೆ ಪ್ರತಿಪಕ್ಷದ 60 ಸದಸ್ಯರು ಸಹಿ ಹಾಕಿದ್ದರು. ಈ ನೋಟಿಸಿನಲ್ಲಿ ಜಗದೀಪ್ ಧನ್ಕರ್ ಪಕ್ಷಪಾತದ ನಿಲುವು ಅನುಸರಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News