ಈ ವರ್ಷ ಪೌರತ್ವ ತೊರೆದ 87,000 ಮಂದಿ ಭಾರತೀಯರು

Update: 2023-07-22 08:52 GMT

ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ (PTI)

ಹೊಸದಿಲ್ಲಿ: ಈ ವರ್ಷದ ಜೂನ್ ತಿಂಗಳವರೆಗೂ ಸುಮಾರು 87,026 ಮಂದಿ ಭಾರತೀಯರು ಭಾರತೀಯ ಪೌರತ್ವವನ್ನು ತೊರೆದಿದ್ದು, ಆ ಮೂಲಕ 2011ರಿಂದ ಈವರೆಗೆ 17.50 ಲಕ್ಷಕ್ಕೂ ಹೆಚ್ಚು ಮಂದಿ ಭಾರತೀಯರು ತಮ್ಮ ಭಾರತೀಯ ಪೌರತ್ವ ತೊರೆದಂತಾಗಿದೆ.

ಈ ಕುರಿತು ಶುಕ್ರವಾರ ಲೋಕಸಭೆಗೆ ಮಾಹಿತಿ ನೀಡಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್, 2022ರಲ್ಲಿ 2,25,620 ಮಂದಿ, 2021ರಲ್ಲಿ 1,63,370 ಮಂದಿ, 2020ರಲ್ಲಿ 85,256 ಮಂದಿ, 2019ರಲ್ಲಿ 1,44,017 ಮಂದಿ, 2018ರಲ್ಲಿ 1,34,561 ಮಂದಿ, 2017ರಲ್ಲಿ 1,33,049 ಮಂದಿ, 2016ರಲ್ಲಿ 1,41,603 ಮಂದಿ, 2015ರಲ್ಲಿ 1,31,405 ಮಂದಿ, 2014ರಲ್ಲಿ 1,29,328 ಮಂದಿ, 2013ರಲ್ಲಿ 1,31,405 ಮಂದಿ, 2012ರಲ್ಲಿ 1,20,923 ಹಾಗೂ 2011ರಲ್ಲಿ 1,22,819 ಮಂದಿ ಭಾರತೀಯರು ಭಾರತೀಯ ಪೌರತ್ವವನ್ನು ತೊರೆದಿದ್ದಾರೆ ಎಂದು ತಿಳಿಸಿದ್ದಾರೆ.

"ಕಳೆದ ಎರಡು ದಶಕಗಳಲ್ಲಿ ಜಾಗತಿಕ ದರ್ಜೆಯ ಉದ್ಯೋಗಾವಕಾಶಗಳನ್ನು ಹುಡುಕುತ್ತಿರುವ ಭಾರತೀಯ ನಾಗರಿಕರ ಸಂಖ್ಯೆ ಗಮನಾರ್ಹ ಪ್ರಮಾಣದಲ್ಲಿ ವೃದ್ಧಿಯಾಗಿದೆ. ಈ ಪೈಕಿ ಹಲವಾರು ಮಂದಿ ತಮ್ಮ ವೈಯಕ್ತಿಕ ಅನುಕೂಲದ ಕಾರಣಕ್ಕಾಗಿ ವಿದೇಶಿ ಪೌರತ್ವವನ್ನು ಆಯ್ಕೆ ಮಾಡಿಕೊಂಡಿದ್ದಾರೆ" ಎಂದು ಅವರು ಲೋಕಸಭೆಗೆ ತಿಳಿಸಿದ್ದಾರೆ.

ವಿದೇಶಗಳಲ್ಲಿರುವ ಭಾರತೀಯ ಸಮುದಾಯವವನ್ನು ರಾಷ್ಟ್ರೀಯ ಸಂಪತ್ತು ಎಂದು ಬಣ್ಣಿಸಿದ ಜೈಶಂಕರ್, ವಲಸಿಗ ಭಾರತೀಯರೊಂದಿಗೆ ವ್ಯವಹರಿಸಲು ಸರ್ಕಾರವು ಪರಿವರ್ತನೀಯ ಬದಲಾವಣೆಯನ್ನು ತಂದಿದೆ ಎಂದು ಹೇಳಿದ್ದಾರೆ.

"ಒಂದು ಯಶಸ್ವಿ, ಸಂಪದ್ಭರಿತ ಹಾಗೂ ಪ್ರಭಾವಶಾಲಿ ವಲಸಿಗ ಭಾರತೀಯ ಸಮುದಾಯವು ಭಾರತಕ್ಕೆ ಲಾಭದಾಯಕವಾಗಿದೆ ಮತ್ತು ವಲಸಿಗ ಭಾರತೀಯ ಸಮುದಾಯ ಜಾಲದೊಂದಿಗೆ ಸಂಪರ್ಕ ಸಾಧಿಸಿ, ಅದರ ವಿಶ್ವಾಸಾಹರ್ತೆಯನ್ನು ದೇಶದ ಲಾಭಕ್ಕೆ ಬಳಸಿಕೊಳ್ಳುವುದು ನಮ್ಮ ದೃಷ್ಟಿಕೋನವಾಗಿದೆ" ಎಂದು ಜೈಶಂಕರ್ ತಿಳಿಸಿದ್ದಾರೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ದತ್ತಾಂಶದ ಪ್ರಕಾರ, ಅಂಕಿ-ಸಂಖ್ಯೆಯನ್ನು ಆಧರಿಸಿ ಹೇಳುವುದಾದರೆ ಭಾರತೀಯರು ಅಮೆರಿಕಾ ಕನಸಿನ ಬೆನ್ನಟ್ಟುವುದನ್ನು ಮುಂದುವರಿಸಿದ್ದು, 7,88,284 ಮಂದಿ ಭಾರತೀಯರು ತಮ್ಮ ಭಾರತೀಯ ಪೌರತ್ವವನ್ನು ತೊರೆದಿದ್ದಾರೆ.

ಎರಡನೆಯ ಸ್ಥಾನದಲ್ಲಿ ಆಸ್ಟ್ರೇಲಿಯಾ ಇದ್ದು, 23,533 ಮಂದಿ ಭಾರತೀಯರು ತಮ್ಮ ಭಾರತೀಯ ಪೌರತ್ವ ತ್ಯಜಿಸಿದ್ದು, ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಕೆನಡಾ (21,597) ಹಾಗೂ ಬ್ರಿಟನ್ (14,637) ದೇಶಗಳು ಭಾರತೀಯರ ಆದ್ಯತಾ ಪಟ್ಟಿಯಲ್ಲಿರುವ ದೇಶಗಳಾಗಿವೆ.

ಇದಲ್ಲದೆ, ಗಮನಾರ್ಹ ಪ್ರಮಾಣದ ಭಾರತೀಯರು ಇಟಲಿ ಪೌರತ್ವವನ್ನು ಪಡೆಯಲು ಆಸಕ್ತಿ ತೋರಿದ್ದು, ಅವರ ಸಂಖ್ಯೆ 5,986 ಇದೆ. ನಂತರ ಕ್ರಮವಾಗಿ ನ್ಯೂಝಿಲ್ಯಾಂಡ್ (2,643), ಸಿಂಗಾಪುರ (2,516), ಜರ್ಮನಿ (2,381), ದಿ ನೆದರ್ಲೆಂಡ್ಸ್‌ (2,187), ಸ್ವೀಡನ್ (1,841) ಹಾಗೂ ಸ್ಪೇನ್ (1,595) ದೇಶಗಳಿವೆ.

ವಿಶ್ವ ಸಂಸ್ಥೆಯ ವರದಿ ಪ್ರಕಾರ, 2020ರಲ್ಲಿ 20 ಪ್ರಮುಖ ಅಂತಾರಾಷ್ಟ್ರೀಯ ವಲಸಿಗರ ವಲಸೆ ತಾಣಗಳ ಪೈಕಿ ಮೂರು ತಾಣಗಳು ಅತ್ಯಧಿಕ ಆದಾಯ ಅಥವಾ ಅತಿ ಹೆಚ್ಚು ಮಧ್ಯಮ ಪ್ರಮಾಣದ ಆದಾಯ ಹೊಂದಿರುವ ದೇಶಗಳಾಗಿವೆ ಎಂದು ಹೇಳಲಾಗಿದೆ. 40 ಲಕ್ಷಕ್ಕೂ ಹೆಚ್ಚು ಮಂದಿ ಭಾರತೀಯ ವಲಸಿಗರು ಅಮೆರಿಕಾದಲ್ಲಿ ವಾಸಿಸುತ್ತಿದ್ದು, ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಕೊಲ್ಲಿ ರಾಷ್ಡ್ರಗಳಾದ ಸಂಯುಕ್ತ ಅರಬ್ ಸಂಸ್ಥಾನ (35 ಲಕ್ಷ) ಹಾಗೂ ಸೌದಿ ಅರೇಬಿಯಾ (25 ಲಕ್ಷ) ದೇಶಗಳಿವೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News