ತುರ್ತು ನಿರ್ಗಮನ ಬಾಗಿಲು ತೆರೆದ ಪ್ರಯಾಣಿಕ: ವಿಮಾನದಲ್ಲಿ ಆತಂಕ
ಹೊಸದಿಲ್ಲಿ: ಹೈದರಾಬಾದ್ ನಿಂದ ದೆಹಲಿಗೆ ಇಂಡಿಗೊ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ, ವಿಮಾನ ಟೇಕಾಫ್ ಆಗುವ ವೇಳೆ ತುರ್ತು ನಿರ್ಗಮನ ದ್ವಾರದ ಕವರ್ ತೆಗೆದು ವಿಮಾನದಲ್ಲಿ ಆತಂಕ ಮೂಡಿಸಿದ ಘಟನೆ ಬೆಳಕಿಗೆ ಬಂದಿದ್ದು, ದೆಹಲಿ ವಿಮಾನ ನಿಲ್ದಾಣದ ಅಧಿಕಾರಿಗಳು ಈ ಘಟನೆಯನ್ನು ದೃಢಪಡಿಸಿದ್ದಾರೆ.
6ಇ 5605 ವಿಮಾನದಲ್ಲಿ ಈ ಘಟನೆ ನಡೆದಿದ್ದು, ವಿಮಾನ ದೆಹಲಿ ನಿಲ್ದಾಣ ತಲುಪಿದ ಬಳಿಕ ಈತನನ್ನು ಭದ್ರತಾ ಸಿಬ್ಬಂದಿಯ ವಶಕ್ಕೆ ನೀಡಲಾಯಿತು. ಬಳಿಕ ಎಫ್ಐಆರ್ ದಾಖಲಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಪ್ರಯಾಣಿಕನ ಈ ವಿಚಿತ್ರ ನಡತೆಯಿಂದ ಪ್ರಯಾಣಿಕರು, ವಿಮಾನ ಸಿಬ್ಬಂದಿ ಹಾಗೂ ಪೈಲಟ್ ಇನ್ ಕಮಾಂಡ್ ತೀವ್ರ ಆತಂಕಕ್ಕೆ ಒಳಗಾಗಿದ್ದರು ಎಂದು ಹೇಳಲಾಗಿದೆ.
ಜುಲೈ 8ರಂದು ಹೈದರಾಬಾದ್ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಈತ ತುರ್ತು ನಿರ್ಗಮನ ದ್ವಾರಕ್ಕೆ ಸನಿಹದಲ್ಲಿದ್ದ 18ಎ ಆಸನದಲ್ಲಿದ್ದ. ಈ ಘಟನೆ ಗಮನಕ್ಕೆ ಬಂದ ತಕ್ಷಣ ತುರ್ತು ನಿರ್ಗಮನದ ಬಾಗಿಲು ಮುಚ್ಚಲಾಯಿತು ಹಾಗೂ ಪ್ರಯಾಣಿಕನ್ನು ಬೇರೆ ಆಸನಕ್ಕೆ ಕಳುಹಿಸಲಾಯಿತು.
ಸುರಕ್ಷಾ ತಜ್ಞರ ಪ್ರಕಾರ, ತುರ್ತು ನಿರ್ಗಮನ ದ್ವಾರದ ಹ್ಯಾಂಡಲ್ ಗೆ ಕವರ್ ಇರುತ್ತದೆ. ಇದು ಕ್ಯಾಬಿನ್ ಒತ್ತಡ ಅಥವಾ ಇತರ ಯಾವುದೇ ಆಕಸ್ಮಿಕ ಕಾರಣದಿಂದ ಬಾಗಿಲು ತೆರೆದುಕೊಳ್ಳುವುದನ್ನು ತಡೆಯುತ್ತದೆ. ಈ ಕವರ್ ಕಿತ್ತುಹಾಕಿದರೆ ಬಾಗಿಲು ತೆರೆದುಕೊಳ್ಳುವ ಸಾಧ್ಯತೆ ಇದೆ ಎಂದು ಇಂಡಿಯನ್ ಏರ್ ಲೈನ್ಸ್ ನ ನಿವೃತ್ತ ವಿಮಾನ ಸುರಕ್ಷಾ ನಿರ್ದೇಶಕ ಎಸ್.ಎಸ್.ಪನೇಸರ್ ಹೇಳಿದ್ದಾರೆ.