ಮದ್ಯಪಾನ ಮಾಡಿ ವಿಮಾನ ಚಲಾಯಿಸಿದ ಪೈಲಟ್ ನನ್ನು ವಜಾಗೊಳಿಸಿದ ಏರ್ ಇಂಡಿಯಾ

Update: 2024-03-28 03:12 GMT

Photo: PTI

ಹೊಸದಿಲ್ಲಿ: ಭಾರತಕ್ಕೆ ಅಂತಾರಾಷ್ಟ್ರೀಯ ವಿಮಾನವನ್ನು ಚಲಾಯಿಸುತ್ತಾ ಬಂದ ಪೈಲಟ್ ಮದ್ಯಪಾನ ಮಾಡಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಆರೋಪಿ ಪೈಲಟ್ ಅನ್ನು ಸೇವೆಯಿಂದ ವಜಾ ಮಾಡಿದೆ.

ಕಳೆದ ವಾರ ಫುಕೆಟ್- ದೆಹಲಿ ವಿಮಾನದ ಕ್ಯಾಪ್ಟನ್ ಭಾರತಕ್ಕೆ ವಿಮಾನ ಬರುವ ವೇಳೆ ಮದ್ಯಪಾನ ಮಾಡಿರುವುದು ಪತ್ತೆಯಾಗಿತ್ತು. ವಿಮಾನ ಇಳಿದ ತಕ್ಷಣ ಬ್ರೆಥಲೈಸರ್ ಪರೀಕ್ಷೆ ನಡೆಸಿದಾಗ ಮದ್ಯಪಾನ ಮಾಡಿರುವುದು ದೃಢಪಟ್ಟಿತ್ತು. ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ ಟಾಟಾ ಸಮೂಹದ ಏರ್ಲೈನ್ಸ್ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ಈ ಸಂಬಂಧ ಏರ್ ಇಂಡಿಯಾದಿಂದ ಪ್ರತಿಕ್ರಿಯೆ ಕೇಳಲಾಗಿದ್ದು ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

"ಈ ಬಗೆಯ ಪ್ರಕರಣಗಳನ್ನು ನಾವು ಸಹಿಸುವುದಿಲ್ಲ ಮತ್ತು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದೇವೆ. ಆರೋಪಿ ಪೈಲಟ್ ಅನ್ನು ಸೇವೆಯಿಂದ ವಜಾಗೊಳಿಸಿರುವುದು ಮಾತ್ರವಲ್ಲದೇ, ಮದ್ಯಪಾನ ಮಾಡಿ ವಿಮಾನ ಚಾಲನೆ ಮಾಡುವುದು ಅಪರಾಧ ಕೃತ್ಯವಾಗಿದ್ದು, ಆತನ ವಿರುದ್ಧ ಎಫ್ಐಆರ್ ದಾಖಲಿಸಲು ಕೂಡಾ ಉದ್ದೇಶಿಸಲಾಗಿದೆ. ಈ ಸಂಬಂಧ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ಅವರಿಗೆ ಮಾಹಿತಿ ನೀಡಲಾಗಿದೆ" ಎಂದು ಮೂಲಗಳು ಹೇಳಿವೆ.

ಈ ಪೈಲಟ್ ಹೊಸ ಕ್ಯಾಪ್ಟನ್ ಆಗಿ ವಿಮಾನ ಚಾಲನೆ ಮಾಡುವ ತರಬೇತಿಯಲ್ಲಿದ್ದರು. ಪೈಲಟ್ ಹಾಗೂ ಕ್ಯಾಬಿನ್ ಸಿಬ್ಬಂದಿ ದೇಶೀಯ ವಿಮಾನದ ಕಾರ್ಯಾಚರಣೇ ವೇಳೆ ಬ್ರೆಥಲೈಸರ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಅಂತರಾಷ್ಟ್ರೀಯ ವಿಮಾನಗಳಿಗೆ ವಿಮಾನ ಇಳಿದ ಬಳಿಕ ಈ ಪರೀಕ್ಷೆ ನಡೆಸಲಾಗುತ್ತದೆ. 2023ರ ಮೊದಲ ಆರು ತಿಂಗಳಲ್ಲಿ 33 ಪೈಲಟ್ಗಳು ಮತ್ತು 97 ಮಂದಿ ಕ್ಯಾಬಿನ್ ಸಿಬ್ಬಂದಿ ಕಾರ್ಯಾಚರಣೆ ವೇಳೆ ಮದ್ಯಪಾನ ಮಾಡಿದ್ದು ದೃಢಪಟ್ಟಿತ್ತು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News