ಮಣಿಪುರ ಭೇಟಿ ಮುಖ್ಯವೆಂದು ಪ್ರಧಾನಿ ಮೋದಿ ಭಾವಿಸಿಲ್ಲ: ಶರದ್ ಪವಾರ್
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಣಿಪುರ ಭೇಟಿ ಮುಖ್ಯವೆಂದು ಭಾವಿಸಿಲ್ಲ ಎಂದು ಎನ್ಸಿಪಿ ವರಿಷ್ಠ ಶರದ್ ಪವಾರ್ ಹೇಳಿದ್ದಾರೆ. ‘‘ಮಣಿಪುರದಲ್ಲಿ ನಡೆಯುತ್ತಿರುವ ಘಟನೆಗಳಿಗೆ ಮೋದಿ ಸರಕಾರ ಮೂಕ ಪ್ರೇಕ್ಷಕವಾಗಿದೆ’’ ಎಂದು ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಬುಧವಾರ ನಡೆದ ಸಾರ್ವಜನಿಕ ರ್ಯಾಲಿಯ ಮುನ್ನ ಅವರು ಪತ್ರಕರ್ತರಿಗೆ ತಿಳಿಸಿದರು. ‘‘ಈಶಾನ್ಯ ವಲಯ ಪ್ರಮುಖ ಹಾಗೂ ಅತಿ ಸೂಕ್ಷ್ಮಪ್ರದೇಶ. ಚೀನಾ ಗಡಿ ಪ್ರದೇಶದ ಬಗ್ಗೆ ಹೆಚ್ಚಿನ ಗಮನ ನೀಡಬೇಕಾದ ಅಗತ್ಯತೆ ಇದೆ’’ ಎಂದು ಅವರು ಹೇಳಿದರು.
ಈಶಾನ್ಯದಲ್ಲಿ ನಡೆಯುತ್ತಿರುವ ಘಟನೆಗಳಿಂದ ದೇಶಕ್ಕೆ ತೀವ್ರ ಅಪಾಯ ಇದೆ. ಇದಕ್ಕೆ ಮಣಿಪುರ ಉದಾಹರಣೆ ಎಂದು ಅವರು ಹೇಳಿದರು. ‘‘ಮುಂಗಾರು ಅಧಿವೇಶನದ ಮೊದಲ ದಿನ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನ ಹೊರಗೆ ಮಾತನಾಡಿದ್ದಾರೆ ಹಾಗೂ 3 ನಿಮಿಷಗಳ ವೀಡಿಯೊ ಸಂದೇಶವನ್ನು ನೀಡಿದ್ದಾರೆ. ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಗೆ ದೀರ್ಘ ಪ್ರತಿಕ್ರಿಯೆ ನೀಡಿದ ಸಂದರ್ಭ ಮಣಿಪುರದ ಕುರಿತು ಸಂಕ್ಷಿಪ್ತವಾಗಿ ಉಲ್ಲೇಖಿಸಿದ್ದಾರೆ’’ ಎಂದು ಅವರು ಹೇಳಿದ್ದಾರೆ. ‘‘ಮೋದಿ ಅವರು ಈಶಾನ್ಯಕ್ಕೆ ತೆರಳಬೇಕು. ಅಲ್ಲಿನ ಜನರಲ್ಲಿ ಆತ್ಮಸ್ಥೈರ್ಯ ಮೂಡಿಸಬೇಕು. ಆದರೆ, ಅವರು ಅದು ಮುಖ್ಯ ಎಂದು ಭಾವಿಸುತ್ತಿಲ್ಲ. ಬದಲಾಗಿ ಅವರು ಮಧ್ಯಪ್ರದೇಶದಲ್ಲಿ ಚುನಾವಣಾ ಸಭೆಯಲ್ಲಿ ಮಾತನಾಡುವುದಕ್ಕೆ ಆದ್ಯತೆ ನೀಡಿದ್ದಾರೆ’’ ಎಂದು ಪವಾರ್ ಹೇಳಿದ್ದಾರೆ.