ಮತ್ತೆ ಅಧಿಕಾರಕ್ಕೆ ಬಂದರೆ ಪಿಂಚಣಿ ಜಾಲ ವಿಸ್ತರಣೆ, ಸಚಿವಾಲಯಗಳ ಕಡಿತ ಯೋಜನೆಗೆ ಮೋದಿ ಸಿದ್ಧತೆ ; ವರದಿ

Update: 2024-04-06 05:47 GMT

Photo: PTI

ಹೊಸದಿಲ್ಲಿ: ಮತ್ತೆ ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದರೆ, ಮುಂದಿನ ಸರ್ಕಾರದ ಕ್ರಿಯಾಯೋಜನೆ ಸಿದ್ಧಪಡಿಸುವಲ್ಲಿ ಉನ್ನತ ಅಧಿಕಾರಿಗಳ ತಂಡ ತಯಾರಿ ನಡೆಸುತ್ತಿದೆ ಎಂದು timesofindia ವರದಿ ಮಾಡಿದೆ.

ಸಚಿವಾಲಯಗಳ ಸಂಖ್ಯೆಯನ್ನು ಪ್ರಸ್ತುತ ಇರುವ 54ರಿಂದ ಕಡಿತಗೊಳಿಸುವುದು, ಮುಂದಿನ ಆರು ವರ್ಷಗಳಲ್ಲಿ ಸಾಗರೋತ್ತರ ಪ್ರದೇಶಗಳಲ್ಲಿ ಭಾರತೀಯ ಮಿಷನ್ ಅನ್ನು ಶೇಕಡ 20ರಷ್ಟು ಹೆಚ್ಚಿಸಿ 150ಕ್ಕೆ ಒಯ್ಯುವುದು, ಮೂಲಸೌಕರ್ಯದಲ್ಲಿ ಹೆಚ್ಚಿನ ಖಾಸಗಿ ಹೂಡಿಕೆಗೆ ಒತ್ತು ಮತ್ತು ಆದ್ಯತೆಯ ಯೋಜನೆಗಳಿಗೆ ಭೂಸ್ವಾಧೀನ ಪ್ರಕ್ರಿಯೆ ಸುಲಲಿತಗೊಳಿಸುವುದು ಮೋದಿಯವರ ಯೋಜನೆಯಲ್ಲಿರುವ ಪ್ರಮುಖ ಅಂಶಗಳಾಗಿವೆ.

ಸಂಪುಟ ಕಾರ್ಯದರ್ಶಿ ಈ ತಿಂಗಳು ಕರೆದಿರುವ ಸಭೆಯಲ್ಲಿ ಈ ಸಂಬಂಧದ ಕರಡಿನ ಬಗ್ಗೆ ಚರ್ಚಿಸಲಾಗುವುದು ಎಂದು ಉನ್ನತ ಮೂಲಗಳು ಹೇಳಿವೆ. ಹಿರಿಯ ನಾಗರಿಕರ ಪಿಂಚಣಿ ಸೌಲಭ್ಯವನ್ನು 2023ರ ವೇಳೆಗೆ ಪ್ರಸ್ತುತ ಇರುವ ಶೇಕಡ 22ರಿಂದ ಶೇಕಡ 50ಕ್ಕೆ ಹೆಚ್ಚಿಸುವುದು, ಶ್ರಮಶಕ್ತಿಯಲ್ಲಿ ಮಹಿಳೆಯ ಪ್ರಮಾಣವನ್ನು ಶೇಕಡ 37ರಿಂದ 50ಕ್ಕೇರಿಸುವ ಯೋಚನೆಯೂ ಇದೆ. ಇದು ಪ್ರಸ್ತುತ ಇರುವ ಜಾಗತಿಕ ಸರಾಸರಿಯಾದ ಶೇಕಡ 47ಕ್ಕಿಂತ ಅಧಿಕ.

ಅದೇರೀತಿ ಎಲೆಕ್ಟ್ರಿಕ್ ವಾಹನಗಳ ಪ್ರಮಾಣವನ್ನು ಹಾಲಿ ಇರುವ ಶೇಕಡ 7 ರಿಂದ ಶೇಕಡ 30ಕ್ಕೆ ಹೆಚ್ಚಿಸಲು ಉದ್ದೇಶಿಸಿರುವುದು ಕೂಡಾ ಎಲೆಕ್ಟ್ರಿಕ್ ವಾಹನಗಳಿಗೆ ಒತ್ತು ನೀಡುವ ಸಾಧ್ಯತೆಯನ್ನು ಬಿಂಬಿಸಿದೆ.

ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಸಂಖ್ಯೆಯನ್ನು 2030ರ ಒಳಗಾಗಿ ಪ್ರಸ್ತುತ ಇರುವ 5 ಕೋಟಿಯ ಬದಲಾಗಿ 1 ಕೋಟಿಗಿಂತ ಕಡಿಮೆ ಮಾಡುವುದು, ಕೆಳಹಂತದ ನ್ಯಾಯಾಲಯಗಳಲ್ಲಿ ಪ್ರಕರಣಗಳ ಸರಾಸರಿ ವಿಚಾರಣಾ ಅವಧಿಯನ್ನು 2184 ದಿನಗಳಿಂದ 1000 ದಿನಗಳಿಗೆ ಇಳಿಸಲು ಉದ್ದೇಶಿಸಲಾಗಿದೆ. ಉನ್ನತ ಕೋರ್ಟ್ ಗಳಲ್ಲಿ ಈ ಪ್ರಮಾಣವನ್ನು ಪ್ರಸ್ತುತ ಇರುವ 1128 ದಿನಗಳಿಂದ 500 ದಿನಗಳಿಗೆ ಇಳಿಸಲು ಉದ್ದೇಶಿಸಲಾಗಿದೆ. ಮುಂದಿನ ಆರು ವರ್ಷಗಳಲ್ಲಿ ನ್ಯಾಯಾಂಗದ ಖಾಲಿ ಹುದ್ದೆಗಳ ಪ್ರಮಾಣವನ್ನು ಶೇಕಡ 22 ರಿಂದ ಶೇಕಡ 10ಕ್ಕೆ ಇಳಿಸುವ ಗುರಿ ಹೊಂದಲಾಗಿದೆ ಎಂದು ಮೂಲಗಳು ವಿವರಿಸಿವೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News